ಗಾಂಧಿ ಹಂತಕನ ಆರಾಧಕರ ನಡುವೆ ಬಾಪೂಜಿ ನೆನಪು

Advertisement

ಯಾವ ವ್ಯಕ್ತಿ ಗಾಂಧಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದುಹಾಕಿದರೋ ಅಂತಹ ವ್ಯಕ್ತಿಯ ವ್ಯಕ್ತಿತ್ವವನ್ನು ಆರಾಧಿಸುವ ಜನಗಳ ನಡುವೆ ಇಂದು ಗಾಂಧೀಜಿಯವರ ನೆನಪನ್ನು ಮಾಡಿಕೊಳ್ಳಬೇಕಾಗಿದೆ.
ಮಹಾತ್ಮ ಗಾಂಧೀಜಿ ತಮ್ಮ ಕುಟುಂಬದವರಿಗಾಗಿ ಯಾವುದೇ ರೀತಿಯ ಫಲವನ್ನು ತನ್ನ ಹೋರಾಟದ ಹಿನ್ನೆಲೆಯಲ್ಲಿ ಪಡೆದುಕೊಳ್ಳದಿದ್ದರೂ, ಯಾವುದೇ ರೀತಿಯ ಅಧಿಕಾರವನ್ನು ಅನುಭವಿಸದಿದ್ದರೂ, ಅಪಾರ ಪ್ರಮಾಣದಲ್ಲಿ ತ್ಯಾಗವನ್ನು ಮಾಡಿದರು ಸಹ, ಗಾಂಧೀಜಿಯನ್ನು ನಿಂದಿಸುವ ಮಂದಿಗೆ ಕಡಿಮೆ ಏನಿಲ್ಲ.
ಗಾಂಧೀಜಿಯ ಪ್ರಾಮಾಣಿಕ ಹಾಗೂ ಪಾರದರ್ಶಕತೆಯ ಸತ್ಯದ ಬದುಕಿನಲ್ಲಿ ಅವರೊಂದಿಗೆ ಹೊಂದಿಕೊಂಡು ಅದೇ ದಾರಿಯಲ್ಲಿ ಸಾಗುತ್ತಾ ತಮ್ಮ ಎಲ್ಲಾ ಆಸೆಗಳನ್ನು ಗಾಂಧೀಜಿ ಎಂಬ ಕಾರಣಕ್ಕಾಗಿ ಸಹಿಸಿಕೊಂಡ ಕಸ್ತೂರಬಾ ರವರ ತ್ಯಾಗವನ್ನು ಸಹ ಯಾರೂ ಮುಕ್ತಕಂಠದಿಂದ ಕೃತಜ್ಞತೆ ಸಲ್ಲಿಸುವ ಮನಸ್ಸೇ ಇಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ತಮ್ಮ ಪಾಡಿಗೆ ತಾವು ವಕೀಲ ವೃತ್ತಿಯನ್ನು ಮಾಡಿಕೊಂಡು ಸುಂದರವಾದ, ಸಂತೋಷದ ಜೀವನವನ್ನು ನಡೆಸಬಹುದಿತ್ತು. ಆದರೆ ಅಲ್ಲಿ ಕರಿಯರ ಮೇಲೆ ಮತ್ತು ಭಾರತೀಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಶೋಷಣೆ ಇವುಗಳ ವಿರುದ್ಧ ಹೋರಾಟವನ್ನು ಮಾಡಿ, ಕಷ್ಟದ ದಿನಗಳನ್ನು ಎದುರಿಸುತ್ತಾ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ರೀತಿಯ ಹಿಂಸೆಯನ್ನ ಅನುಭವಿಸಿ, ಸಂಕಷ್ಟದ ಬದುಕನ್ನು ನಡೆಸುವ ಅವಶ್ಯಕತೆ ಇರಲಿಲ್ಲ. ಆದರೂ ಸಹ ಭಾರತೀಯರು ಮತ್ತು ಕಪ್ಪುಬಣ್ಣದ ಜನರಿಗಾಗಿ ಹೋರಾಟವನ್ನು ಮಾಡಿದರು. ವಕೀಲರಾಗಿ ಅಲ್ಲಿ ಗಳಿಸಿದ ಸಂಪತ್ತನ್ನು ಅಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ, ಎಲ್ಲವನ್ನು ಅಲ್ಲಿಗೆ ಬಿಟ್ಟು ಬಂದಂತಹ ಗಾಂಧಿ ಯಾವ ತಪ್ಪನ್ನು ಮಾಡಿರುತ್ತಾರೆ.
ಭಾರತ ದೇಶಕ್ಕೆ ಬಂದು ಒಬ್ಬ ಸಾಮಾನ್ಯ ನಾಗರಿಕರ ರೀತಿಯಲ್ಲಿ ರೈಲಿನಲ್ಲಿ ದೇಶವನ್ನ ಸುತ್ತಿ, ದೇಶದ ಸಂಸ್ಕೃತಿ ಮತ್ತು ಸಮಸ್ಯೆ ಇವುಗಳನ್ನು ಗ್ರಹಿಸಿ, ತದನಂತರ ನಿರಂತರವಾದ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡು, ಜೊತೆ ಜೊತೆಯಲಿ ಕುಷ್ಠರೋಗದ ರೋಗಿಗಳ ಸೇವೆ, ಹರಿಜನರ ಉದ್ಧಾರ, ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸತ್ಯ ಅಹಿಂಸೆ ಮತ್ತು ಪ್ರಾಮಾಣಿಕವಾದ ಹೋರಾಟವನ್ನು ಮಾಡಿ, ದೇಶಕ್ಕೆ ಸ್ವಾತಂತ್ರವನ್ನು ತಂದುಕೊಡುವಲ್ಲಿ ಇವರ ಪಾತ್ರವು ಎಲ್ಲರಿಗಿಂತ ಹೆಚ್ಚಿನ ಪಾಲು ಇರುತ್ತದೆ. ಗಾಂಧಿ ಅಂದು ಮನಸ್ಸು ಮಾಡಿದ್ಧರೆ ದೇಶದ ಪ್ರಧಾನಿಯಾಗಬಹುದಾಗಿತ್ತು, ಅಥವಾ ರಾಷ್ಟ್ರಪತಿಯಾಗಬಹುದಾಗಿತ್ತು. ಇಲ್ಲವೇ ಇತ್ತೀಚಿನ ರಾಜಕಾರಣಿಗಳ ರೀತಿಯಲ್ಲಿ ತಮ್ಮ ಕುಟುಂಬದ ಕುಡಿಗಳನ್ನು ಕೇಂದ್ರದ ಸಚಿವರನ್ನಾಗಿ, ಇಲ್ಲವೇ ಯಾವುದಾದರೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿ, ತಮ್ಮ ಕುಟುಂಬವನ್ನು ರಾಜಕೀಯವಾಗಿ ಬೆಳೆಸಬಹುದಾಗಿತ್ತು. ಗಾಂಧಿ ಇವುಗಳಲ್ಲಿ ಯಾವುದನ್ನೂ ಮಾಡಲಿಲ್ಲ. ಜೊತೆಗೆ ತಮ್ಮ ನಾಲ್ವರು ಮಕ್ಕಳಿಗೆ ಯಾವ ಆಸ್ತಿಯನ್ನೂ ಬಿಟ್ಟುಹೋಗಲಿಲ್ಲ. ಇವರ ಹಿರಿಯ ಮಗ ಹರಿಲಾಲ ತನ್ನನ್ನು ಹೆಚ್ಚಿನ ವ್ಯಾಸಂಗಕ್ಕೆ ಬೇರೆ ದೇಶಕ್ಕೆ ಕಳುಹಿಸಲಿಲ್ಲ ಎಂಬ ಕಾರಣಕ್ಕಾಗಿ ತನ್ನ ಬದುಕಿನ ಉದ್ದಕ್ಕೂ ಗಾಂಧೀಜಿಯ ವಿರುದ್ಧ ಸಾರ್ವಜನಿಕವಾಗಿ ನಿಂದನೆ ಮಾಡುತ್ತಾ, ಅಪಮಾನಗೊಳಿಸುತ್ತಾ, ಗಾಂಧೀಜಿಯವರಿಗೆ ನೋವು ಉಂಟುಮಾಡಲು ಮತಾಂತರವಾಗಿ ಅನೇಕ ಚಟಗಳ ದಾಸರಾಗಿ, ಗಾಂಧೀಜಿಗೆ ಮಾಡಿದ ಮುಜುಗರ ಹೇಳತೀರದು. ಆದರೂ ಸಹ ಗಾಂಧೀಜಿ ಒಂದು ಕ್ಷಣವೂ ಸಹ ತಮ್ಮ ಕುಟುಂಬದ ಮೇಲೆ ಪ್ರೀತಿಯನ್ನು ತೋರಿಸುತ್ತಾ ತಮಗೆ ಜನತೆ ನೀಡಿರುವ ವ್ಯಕ್ತಿತ್ವವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಿಲ್ಲ.
ಗಾಂಧೀಜಿ ಆಸ್ತಿ ಅವರ ಮುಖದ ಮೇಲಿನ ಕನ್ನಡಕ, ಕೋಲು, ಮೈ ಮೇಲಿದ್ದ ತುಂಡು ಪಂಚೆ, ಕೇವಲ ಇಷ್ಟು ಆಸ್ತಿಯನ್ನು ಮಾತ್ರ ಹೊಂದಿದ ಗಾಂಧೀಜಿಯವರ ತ್ಯಾಗದ ಮುಂದೆ, ಸರಳತೆ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ಯಾರು ಬೇಕಾದರೂ ಗಾಂಧಿಯನ್ನು ಕುರಿತು ಮಾತನಾಡಬಹುದು. ಆದರೆ ಗಾಂಧಿಯ ಹಾದಿಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ.
ನಮ್ಮ ದೇಶದ ಕೆಲವು ರಾಜಕಾರಣಿಗಳಿಗೆ ಗಾಂಧೀಜಿ ಪ್ರಚಾರದ ವಸ್ತು, ಮತ್ತೆ ಕೆಲವರಿಗೆ ಗಾಂಧೀಜಿಯ ಬಗ್ಗೆ ತೋರಿಕೆಯ ಗೌರವ ತೋರುವುದು ಅನಿವಾರ್ಯತೆ. ಆದರೆ ವಿಶ್ವದ ಅನೇಕ ರಾಷ್ಟçಗಳಲ್ಲಿ ಬಹಳಷ್ಟು ಹೋರಾಟಗಾರರಿಗೆ ಗಾಂಧಿಮಾರ್ಗ ಸ್ಫೂರ್ತಿಯಾಗಿ, ಅವರ ಹೋರಾಟಕ್ಕೆ ದಾರಿಯಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಗಾಂಧಿಯನ್ನು ಪ್ರತಿಮೆಗಳ ಮೂಲಕ, ಸ್ಮಾರಕಗಳ ಮೂಲಕ ಗೌರವಕ್ಕೆ ಪಾತ್ರರಾಗಿದ್ದಾರೆ.
ಯಾರು ಏನೇ ಹೇಳಲಿ ಈ ದೇಶಕ್ಕೆ ಯಾವುದೇ ವಿದೇಶಿ ಅತಿಥಿಗಳು ಬಂದರೆ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವವನ್ನು ಸಲ್ಲಿಸುತ್ತಾರೆ. ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಗುರುತಿಸುವುದು ಗಾಂಧೀಜಿಯವರ ಮೂಲಕವೇ.

ಕೆ.ಎಸ್. ನಾಗರಾಜ್