ಗುಜರಾತ್ ಚುನಾವಣೆ: ಬಿಜೆಪಿ ತೊರೆದ ನಾರಾಯಣ

ಜಯ ನಾರಯಣ
Advertisement

ಗುಜರಾತ್ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಬಿಜೆಪಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಜಯ್ ನಾರಾಯಣ್ ವ್ಯಾಸ್ ಪಕ್ಷ ತೊರೆದಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಆಪ್ ಪಕ್ಷದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಇಂದು ಅಹಮದಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯಲ್ಲಿ ನನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ದೂರಿದ್ದೇನೆ. ಆದರೆ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
30 ವರ್ಷಗಳಿಂದ ಬಿಜೆಪಿಯಲ್ಲಿದ್ದ 75 ವರ್ಷದ ಜಯ್ ನಾರಾಯಣ್‌ರವರು ಪಟಾನ್ ಜಿಲ್ಲೆಯ ಸಿಧ್‌ಪುರ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯ ಸಚಿವರಾಗಿ ಮತ್ತು ನರ್ಮದಾ ನೀರಾವರಿ ಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದ ಅವರು 2017ರ ವಿಧಾನಸಭೆಯಲ್ಲಿ ಸೋಲು ಕಂಡಿದ್ದರು. ತದನಂತರ ಬಿಜೆಪಿಯ ಜಿಲ್ಲಾ ಘಟಕವು ತನ್ನನ್ನು ಮೂಲೆಗುಂಪು ಮಾಡುತ್ತಿದೆ ಎಂಬುದು ಅವರ ಆರೋಪವಾಗಿದೆ.