ಗುರುವೇ ಪರದೈವ

Advertisement

ಎಲ್ಲ ಶಸ್ತ್ರಾಸ್ತ್ರಗಳನ್ನು ಬಿಟ್ಟು ಶಾಸ್ತ್ರಗಳನ್ನು ಹಿಡಿದುಕೊಂಡು ಭುವಿಗೆ ಅವತರಿಸಿದ ದೇವರೇ ಸದ್ಗುರುವಾಗಿದ್ದಾನೆ. ಸಾಮಾನ್ಯವಾಗಿ ದುಷ್ಟರ ಸಂಹಾರ ಮತ್ತು ಶಿಷ್ಟರ ಪರಿಪಾಲನಾರ್ಥವಾಗಿ ದೇವರು ಅನೇಕ ಅವತಾರಗಳನ್ನು ತಾಳುತ್ತಾನೆ. ಆ ಕಾರಣಕ್ಕಾಗಿಯೇ ಶ್ರೀರಾಮ, ಶ್ರೀಕೃಷ್ಣ ಮೊದಲಾದ ದೇವರ ಅನೇಕ ಅವತಾರಗಳ ಕೈಯಲ್ಲಿ ವಿಭಿನ್ನ ಶಸ್ತ್ರಾಸ್ತ್ರಗಳಿರುವುದನ್ನು ಕಾಣುತ್ತೇವೆ. ಆದರೆ ಸದ್ಗುರುವು ದುಷ್ಟರನ್ನು ಸಂಹರಿಸುವುದಿಲ್ಲ, ಬದಲಾಗಿ ದುಷ್ಟರಲ್ಲಿರುವ ದುಷ್ಟ ಬುದ್ಧಿಯನ್ನು ಸಂಹರಿಸುತ್ತಾನೆ. ಒಬ್ಬ ಮನುಷ್ಯನು ದುರ್ಜನನಿಂದ ಸಜ್ಜನನಾಗಬೇಕಾದರೆ ಅವನ ದೇಹ ಪರಿವರ್ತನೆಯಿಂದ ಆಗುವುದಿಲ್ಲ, ಬದಲಾಗಿ ಅವನಲ್ಲಿರುವ ದುಷ್ಟಬುದ್ಧಿ ನಷ್ಟವಾಗಿ ಸದ್ಬುದ್ಧಿ ಜಾಗೃತಗೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ದೇವರು ಯಾವುದೇ ಅವತಾರದಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿಂದ ದುಷ್ಟರನ್ನು ಪರಿವರ್ತಿಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳ ಮೂಲಕ ಶಿಕ್ಷೆ ಕೊಟ್ಟರೂ ಅವರ ಬುದ್ಧಿಯು ದುಷ್ಟವಾಗಿ ಉಳಿದುಕೊಂಡ ಪರಿಣಾಮವಾಗಿ ಅವರು ದುಷ್ಟರಾಗಿಯೇ ಮರಣ ಹೊಂದುತ್ತಾರೆ, ಕೊನೆಗೆ ದುಷ್ಟಬುದ್ಧಿಯನ್ನೆ ತೆಗೆದುಕೊಂಡು ಮುಂದಿನ ಜನ್ಮ ತಾಳುತ್ತಾರೆ. ಅವರನ್ನು ಸಂಹರಿಸಲು ದೇವರಿಗೆ ಮತ್ತೆ ಅವತಾರ ತಾಳಬೇಕಾಗುತ್ತದೆ. ಈ ಕಾರಣಕ್ಕಾಗಿ ದೇವರ ಅನೇಕ ಅವತಾರಗಳು ಸೃಷ್ಟಿಯಾದವು. ಅಂತೆಯೆ ಭಗವದ್ಗೀತೆಯಲ್ಲಿ —-
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||

ಎಂದು ಹೇಳುವ ಮೂಲಕ ದೇವರ ಅವತಾರದ ಮೂಲ ಉದ್ದೇಶವನ್ನು ಇಲ್ಲಿ ತಿಳಿಸಿದ್ದಾರೆ. ಉದ್ದೇಶಕ್ಕನುಗುಣವಾಗಿ ಪ್ರತಿ ಅವತಾರದಲ್ಲಿ ದುಷ್ಟರ ದೇಹದ ಸಂಹಾರವೇನೋ ಆಗುತ್ತಿತ್ತು. ದುಷ್ಟರ ದೇಹದ ಸಂಹಾರದಿಂದ ದುಷ್ಟತನದ ಸಂಹಾರ ಆಗುತ್ತಿರಲಿಲ್ಲ, ದುಷ್ಟತನದ ಸಂಹಾರದಿಂದ ದುಷ್ಟರ ನಾಶವಾಗುತ್ತದೆ ಎಂದು ತಿಳಿದು ದುಷ್ಟ ಬುದ್ಧಿಯನ್ನು ಸಂಹರಿಸಿ ಅವರಲ್ಲಿ ಸದ್ಬುದ್ಧಿಯನ್ನು ಜಾಗೃತಗೊಳಿಸಲು ಎಲ್ಲ ಶಸ್ತ್ರಾಸ್ತ್ರಗಳನ್ನು ಬಿಟ್ಟು ಶಾಸ್ತ್ರಗಳನ್ನು ಕೈಯಲ್ಲಿ ಹಿಡಿದು ದೇವರೇ ಗುರು ರೂಪದಿಂದ ಧರೆಗೆ ಅವತರಿಸುತ್ತಾನೆ. ಅಂತೆಯೇ ವೇದಗಳಲ್ಲಿ “ಸಾಕ್ಷಾದ್ ಭರ್ಗೋ ನರಾಕೃತಿಃ” ಗುರುವು ಪ್ರತ್ಯಕ್ಷ ದೇವರ ಸ್ವರೂಪ ಎಂದು ಹೇಳಲಾಗಿದೆ.