ಗೆದ್ದರೆ ಗಲಾಟಿ ಸೋತರೆ ಲಗಾಟಿ

Advertisement

ಈ ಬಾರಿ ನಾನು ಗೆದ್ದೇ ಗೆಲ್ಲುತ್ತೇನೆ. ಮುಂಜಾನೆಯಿಂದ ಟಿವಿ ಮುಂದೆ ಕುಳಿತುಕೊಳ್ಳಿ, ಯಾವಾಗ ಬೇಕಾದರೂ ನನ್ನ ರಿಸಲ್ಟ್ ಅನೌನ್ಸ್ ಆಗಬಹುದು ಎಂದು ತಿಗಡೇಸಿ ಬ್ರಾಡಕಾಸ್ಟ್ ಗ್ರೂಪ್ ಮಾಡಿ ಎಲ್ಲರಿಗೂ ಮೆಸೇಜ್ ಹಾಕಿದ್ದಾನೆ. ನನ್ನದು ಅನೌನ್ಸ್ ಆದ ಕೂಡಲೇ ನೀವೆಲ್ಲ ನನ್ನ ಮನೆಯ ಹತ್ತಿರ ಬರಬೇಕು. ಈಗಾಗಲೇ ಶೇಷಮ್ಮನ ಹೊಟೆಲ್‌ನಲ್ಲಿ ಮಂಡಾಳೊಗ್ಗಣ್ಣಿ-ಮಿರ್ಚಿ ಹಾಗೂ ಚಹಕ್ಕೆ ಎಲ್ಲರಿಗೂ ವ್ಯವಸ್ಥೆ ಮಾಡಿದ್ದೇನೆ. ನೀವು ಹೋಗಿ ನನ್ನ ಹೆಸರು ಹೇಳಿ ಲೆಕ್ಕ ಹಚ್ಚಿ ಬರಬೇಕು. ಮಧ್ಯಾಹ್ನ ತಿಪ್ಪನ ಹೊಟೆಲ್‌ನಲ್ಲಿ ಊಟಕ್ಕೆ ಹೇಳಿದ್ದೇನೆ ಅಲ್ಲಿಯೂ ನೀವು ಲೆಕ್ಕ ಹಚ್ಚಿ ಬರಬಹುದು. ಮನೆಯಲ್ಲಿ ಪೆಂಡಿಗಟ್ಟಲೇ ಪಟಾಕಿ ತರಿಸಿದ್ದೇನೆ. ಕ್ವಿಂಟಾಲ್‌ಗಟ್ಟಲೇ ಬಣ್ಣ ಬಣ್ಣದ ಗುಲಾಲು ಬಂದುಬಿದ್ದಿವೆ. ನೀವು ಅಲ್ಲಿಂದ ಬಂದು ಗುಲಾಲು ಹಚ್ಚಿಕೊಂಡು ಪಟಾಕಿ ಹೊಡೆಯಿರಿ-ನಮ್ಮ ನಾಯಕ ಗೆದ್ದರು ಎಂದು ಕೂಗಿ ನಾವು ಕೊಟ್ಟಿದ್ದು ಇಸಿದುಕೊಂಡು ಹೋಗಬೇಕು. ಸೋದಿಮಾಮಾ, ಕೆಂಪುಡುಗ, ಅವರಮ್ಮ, ಲೇವೇಗೌಡ, ಮದ್ರಾಮಣ್ಣ, ಬಂಡೇಸಿ ಮುಂತಾದವರು ಈಗಾಗಲೇ ಅಡ್ವಾನ್ಸ್ ವಿಶ್ ಮಾಡಿದ್ದಾರೆ. ನನಗಿಂತ ಮೊದಲು ಅವರಿಗೆ ನನ್ನ ಬಗ್ಗೆ ಗೊತ್ತಾಗಿದೆ. ನೀವು ಎದ್ದ ಕೂಡಲೇ ಸ್ನಾನ ಮಾಡಿ ಸೀದಾ ದೇವರ ಗುಡಿಗೆ ಹೋಗಿ ಇಂಗಿಂಗೆ ಇವರು ಗೆಲ್ಲಲಿ ನಾನು ಉರುಳುಸೇವೆ ಮಾಡುತ್ತೇನೆ ಎಂದು ಬೇಡಿಕೊಂಡೇ ಹೊಟೆಲ್‌ಗೆ ಹೋಗಿರಿ. ನಾನು ಈಗಲೇ ಇನ್ನೊಂದು ವಿಷಯ ಹೇಳುತ್ತೇನೆ ಕೇಳಿ…
ನೀವು ಇಷ್ಟೆಲ್ಲ ಮಾಡಿ, ಹೊಟೆಲ್‌ಗೆ ಹೋಗಿ ತಿನ್ನಿ, ಗುಲಾಲು ಹಚ್ಚಿಕೊಳ್ಳಿ, ಇಸಿದುಕೊಂಡೂ ಹೋಗಿ ನಾನು ಗೆದ್ದರೆ ಒಕೆ. ಅಕಸ್ಮಾತ್ ಸೋತರೆ ನಿಮಗೆ ನಾನು ಮಾಡಿದ ಖರ್ಚು ವಾಪಸ್ ಕೊಡಬೇಕು ಎಂದು ಮೆಸೇಜ್‌ನಲ್ಲಿ ತಿಳಿಸಲಾಗಿತ್ತು. ಮೆಸೇಜು ನೋಡಿದ ತಳವಾರ್ಕಂಟಿ ಅಯ್ಯೋ ಇದೇನಿದು ಇವನದು? ಓಹೋ ಗೆದ್ದರೆ ಗಲಾಟಿ… ಸೋತರೆ ಲಗಾಟಿ.. ಯಾವನಿಗೆ ಬೇಕು ಹೋಗಲಿ ಬಿಡಿ ನಾವಂತೂ ಟಿವಿಯಲ್ಲಿಯೇ ಎಲ್ಲ ರಿಸಲ್ಟ್ ನೋಡುತ್ತೇವೆ ಬೈ…ಬೈ ಎಂದು ಮೆಸೇಜ್ ಹಾಕಿ ಸುಮ್ಮನಾದ.