ಗೆದ್ದರೆ ತೇರದಾಳ, ಸೋತರೆ ಹಿಮಾಲಯ

ತೇರದಾಳ ಸ್ವಾಮಿ
Advertisement

ಬಾಗಲಕೋಟೆ: ರಾಜಕೀಯ ಅಖಾಡಕ್ಕೆ ಧುಮುಕಿರುವ ಹಳೇಹುಬ್ಬಳ್ಳಿಯ ವೀರಭಿಕ್ಷಾವೃತ್ತಿ ಮಠದ ಶಿವಶಂಕರ ಸ್ವಾಮೀಜಿ ತಮ್ಮ ಪೀಠಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಸ್ಪಷ್ಟಪಡಿಸಿದರು.
ರಬಕವಿ-ಬನಹಟ್ಟಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ನನ್ನ ರಾಜಕೀಯ ಪ್ರವೇಶ ಮಠದ ಭಕ್ತರಿಗೆ ಮುಜುಗರವಾಗಬಾರದೆಂಬ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆಂದು ತಿಳಿಸಿದರು.
ಮಠದ ಸಾಮಾನ್ಯ ಭಕ್ತನಾಗಿ ರಾಜಕೀಯ ಪ್ರವೇಶ ಮಾಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಸ್ಪರ್ಧೆ ನಿಶ್ಚಿತವಾಗಿದ್ದು, ಕುರುಹಿನಶೆಟ್ಟಿ, ಹಟಗಾರ ಸೇರಿದಂತೆ ನೇಕಾರ ಸಮುದಾಯಗಳ ಎಲ್ಲ ಒಳಪಂಗಡಗಳ ಭಕ್ತರ ಒತ್ತಾಯದ ಮೇರೆಗೆ ಸ್ಪರ್ಧೆ ಅನಿವಾರ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಗೆದ್ದರೆ ತೇರದಾಳ..!:
ಈ ಬಾರಿ ಅಧ್ಯಾತ್ಮದಿಂದ ರಾಜಕೀಯ ನಡೆ ನನ್ನದಾಗಿದೆ. ಗೆದ್ದರೆ ತೇರದಾಳ ಕ್ಷೇತ್ರದ ಅಭಿವೃದ್ಧಿಗೆ ಬುನಾದಿಯಾಗಲಿದೆ. ಸೋತರೆ ಹಿಮಾಲಯಕ್ಕೆ ತೆರಳುವೆ ಎಂದು ಶಿವಶಂಕರ ಶ್ರೀಗಳು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯವೆಂಬುದು ಭ್ರಷ್ಟಾಚಾರದ ಯಂತ್ರವಾಗಿದೆ. ಸ್ವಾರ್ಥ ಹಾಗು ಭ್ರಷ್ಟತೆ ನಿರ್ಮೂಲನೆಗೆ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ ಎಂದರು.
ಸ್ಥಿರಾಸ್ತಿ ಶೂನ್ಯ..!
ನಾಮಪತ್ರದ ವೇಳೆ ಆಸ್ತಿ ಘೋಷಣೆ ಸಂಬಂಧ ಶಿವಶಂಕರ ಶ್ರೀಗಳು ತಮ್ಮ ಸ್ಥಿರಾಸ್ಥಿ ಏನೂ ಇಲ್ಲವೆಂದು ಸ್ಪಷ್ಟಪಡಿಸಿದ್ದು, ಚರಾಸ್ತಿಯು 25 ಸಾವಿರ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 1.67 ಲಕ್ಷ ರೂ. ಇರುವುದಾಗಿ ತಿಳಿಸಿದ್ದು, ಒಟ್ಟು 1.92 ಲಕ್ಷ ರೂ.ಗಳಷ್ಟು ಚರಾಸ್ತಿ ಘೋಷಿಸಿದ್ದು, ಅತ್ಯಂತ ಕಡಿಮೆ ಆಸ್ತಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷ.