ಗೆರೆಯಲ್ಲಿ ಸೆರೆಯಾದೆ ಎಂದ ಡಿಕೆ

Advertisement

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಶಾಲಾ ವಿದ್ಯಾರ್ಥಿನಿಯೊಬ್ಬರು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಅವರ ಭಾವಚಿತ್ರವನ್ನು ಚಿತ್ರಿಸಿ ಉಡುಗರೆಯಾಗಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡು ಪೋಸ್ಟ್‌ ಮಾಡಿರುವ ಅವರು ಗೆರೆಯಲ್ಲಿ ಸೆರೆಯಾದೆ…. ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಶಾಲಾ ವಿದ್ಯಾರ್ಥಿನಿಯೊಬ್ಬರು ಗೆರೆಗಳಲ್ಲಿ ಮೂಡಿದ ನನ್ನ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು ಎಂದಿದ್ದಾರೆ. ಈ ಮುಂಚೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕರ್ನಾಟಕಕ್ಕೆ ಹೆಸರಾಗಿ ೫೦ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಕನ್ನಡಿಗರಿಗೆ ಹೃದಯಪೂರ್ವಕ ಅಭಿನಂದನೆಗಳು. ಕನ್ನಡದ ಅಭಿಮಾನ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದಿರಲಿ. “ಆರಂಕುಶ ವಿಟ್ಟೂಡಂ ನೆನೆವುದೆನ್ನ ಮನಂ ಬನವಾಸಿ ದೇಶಮಮ್” ಎಂದು ಆದಿಕವಿ ಪಂಪ ಹೇಳಿದ್ದಾರೆ.
ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನು ನಾವೆಲ್ಲರೂ ನೆನೆಯೋಣ. ೨೦೦೦ ವರ್ಷ ಇತಿಹಾಸ ಹೊಂದಿರುವ ಕನ್ನಡವನ್ನು ಮರೆತರೆ ನಾವು ಜನ್ಮಕೊಟ್ಟ ತಾಯಿಯನ್ನು ಮರೆತಂತೆ. ಇಂದು ನಾವು ಕೋಮುದ್ವೇಷಕ್ಕೆ ಸಿಲುಕ್ಕಿದ್ದು, ಕನ್ನಡದ ಮನಸುಗಳು ಒಂದಾಗಿ ಸಮಾನತೆ ಸಾರಬೇಕು. ನಾವೆಲ್ಲರೂ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ದೀಕ್ಷೆ ತೊಟ್ಟು ಜಗತ್ತಿಗೆ ಮಾನವ ಧರ್ಮ ಮಹತ್ವ ಸಾರೋಣ ಎಂದರು.