ಗ್ಯಾರಂಟಿಗೆ ಒತ್ತು ಹೊಂದಾಣಿಕೆಗೆ ಕಸರತ್ತು

ಸಂಪಾದಕೀಯ
Advertisement

ಸಾಮಾಜಿಕ ನ್ಯಾಯಕ್ಕಾಗಿ ಉಚಿತ ಸೇವೆ ನೀಡುವುದು ತಾತ್ವಿಕವಾಗಿ ಸರಿಯಾದ ಕ್ರಮ. ಆದರೆ ಅದಕ್ಕೆ ಆರ್ಥಿಕ ತ್ಯಾಗ, ಮಿತವ್ಯಯ ಮತ್ತು ಸೋರಿಕೆ ತಡೆಯುವ ಕಟ್ಟು ನಿಟ್ಟಿನ ಕ್ರಮ ಅಗತ್ಯ. ಸರ್ಕಾರ ಮಾಡುವ ಸಾಲ ಮಿತಿಮೀರಿ ಹೋಗಿದೆ. ಅದೂ ಕೂಡ ದೊಡ್ಡ ಹೊರೆ ಆಗಲಿದೆ.

ಈ ಬಾರಿಯ ಬಜೆಟ್ ವಿಶೇಷ ಎಂದರೆ ಮೊದಲೇ ಸರ್ಕಾರ ಘೋಷಿಸಿದ ಉಚಿತ ಸೇವೆಗಳಿಗೆ ಆರ್ಥಿಕ ಹೊಂದಾಣಿಕೆ ಮಾಡುತ್ತಿರುವುದು. ಈ ಉಚಿತ ಸೇವೆಗಳಿಗೆ ಒಟ್ಟು ೫೨ ಸಾವಿರ ಕೋಟಿ ರೂ. ಬೇಕು. ಈ ವರ್ಷ ೪೮ ಸಾವಿರ ಕೋಟಿ ರೂ ನೀಡಬೇಕು. ಇದಕ್ಕೆ ಸಿದ್ದರಾಮಯ್ಯ ಸಾಲ ಎತ್ತುವಳಿ ಹೆಚ್ಚಿಸಲು ತೀರ್ಮಾನಿಸಿದ್ದಾರೆ. ನೇರ ತೆರಿಗೆ ಹೆಚ್ಚಳ ಅಬ್ಕಾರಿ ಇಲಾಖೆಯ ಮೇಲೆ ಕಂಡು ಬರುತ್ತಿದೆ. ಉಳಿದದ್ದು ಪರೋಕ್ಷ. ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಬಜೆಟ್‌ಗೆ ಸಿದ್ದರಾಮಯ್ಯನವರ ಈಗಿನ ಬಜೆಟ್ ಹೋಲಿಸಿದಲ್ಲಿ ಶೇ.೭ ರಷ್ಟು ಅನುದಾನ ಕಡಿತಗೊಂಡಿದೆ. ಈಗಿನ ವೆಚ್ಚಕ್ಕೆ ಶೇ.೫೦ ರಷ್ಟು ಹೆಚ್ಚುವರಿ ತೆರಿಗೆಯಿಂದ ಬರಬೇಕು. ಶೇ.೨೬ ರಷ್ಟು ಸಾಲದಿಂದ ಪಡೆಯಬೇಕು. ಕೇಂದ್ರದ ಅನುದಾನದಿಂದ ಶೇ.೪ ಬರಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಸಿದ್ದರಾಮಯ್ಯ ಸಾಕಷ್ಟು ಕಸರತ್ತು ಮಾಡಿದ್ದಾರೆ. ಅವರೇ ಹೇಳಿದಂತೆ ೨೦೧೮ ರಿಂದ ೨೦೨೪ ವರೆಗೆ ಆಯವ್ಯಯ ಗಾತ್ರ ಶೇ.೫೦ ರಷ್ಟು ಹೆಚ್ಚಳಗೊಂಡಿದೆ. ಆದರೆ ಸರ್ಕಾರಿ ನೌಕರರ ವೇತನ, ಪಿಂಚಣಿ , ಸಾಲದ ಮೇಲಿನ ಬಡ್ಡಿ ಪಾವತಿಯೇ ಶೇ.೮೧ ರಷ್ಟು ಅಧಿಕಗೊಂಡಿದೆ.
ಸಿದ್ದರಾಮಯ್ಯ ಹೇಳಿ ದಂತೆ ಸರ್ಕಾರದ ಒಟ್ಟು ಸಂಪನ್ಮೂಲ ತಳ ಸಮುದಾ ಯದಿಂದ ಶೇ.೬೦ ರಷ್ಟು ಬರುತ್ತಿದೆ. ಆದರೆ ಇದನ್ನು ಅನುಭವಿಸುವವರು ಮೇಲು ಸ್ತರದಲ್ಲಿರುವ ಶೇ.೧೦ ರಷ್ಟು ಜನ. ಅದರಿಂದ ಉಚಿತ ಸೇವೆಗಳ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ಸರ್ಕಾರ ಉದಾತ್ತ ಧ್ಯೇಯ. ಇದು ತಪ್ಪೇನಲ್ಲ. ಆದರೆ ಇದು ದುರುಪಯೋಗಕ್ಕೆ ಕಾರಣವಾಗಬಾರದು. ಈಗ ಅಕ್ಕಿ ೫ ಕೆಜಿ ಕೊಟ್ಟು ಉಳಿದ ಅಕ್ಕಿಗೆ ಹಣ ಕೊಡುವುದು ಸೋರಿಕೆಗೆ ಕಾರಣವಾಗಬಹುದು. ಅದೇರೀತಿ ೨೦೦ ಯೂನಿಟ್ ಉಚಿತ ವಿದ್ಯುತ್ ಕೂಡ ಈಗಾಗಲೇ ನಷ್ಟದಲ್ಲಿರುವ ವಿದ್ಯುತ್ ಕಂಪನಿಗಳಿಗೆ ನಮ್ಮ ಆರ್ಥಿಕ ಕೊರತೆಯನ್ನು ತುಂಬಿಕೊಳ್ಳಲು ಸಾಧನವಾಗಬಾರದು. ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ನಷ್ಟವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಒಟ್ಟು ೭೭೮೦ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನು ಪಡೆಯಲು ಕ್ರಮ ಕೈಗೊಳ್ಳುವುದು ಅಗತ್ಯ.
ಅಬ್ಕಾರಿ, ಮೋಟಾರು ವಾಹನ, ನೋಂದಣೆ ಶುಲ್ಕ ಮತ್ತು ಗಣಿ ಭೂವಿಜ್ಞಾನದಿಂದ ಹೆಚ್ಚುವರಿ ತೆರಿಗೆ ಸಂಗ್ರಹವಾಗಬೇಕು. ಇದು ತೆರಿಗೆ ಭಾರದಿಂದ ಬರುವ ಹೆಚ್ಚುವರಿ ವರಮಾನ. ಅದರೊಂದಿಗೆ ಸಾಲ ಮರುಪಾವತಿ, ನೀರು ಪೂರೈಕೆ, ಆರೋಗ್ಯ. ಶಿಕ್ಷಣ ಸಾಮಾಜಿಕ ಸೇವೆ ಮತ್ತು ಕೃಷಿಗೆ ನೀಡಿರುವ ಅನುದಾನದಲ್ಲಿ ಶೇ ೧-೨ ರಷ್ಟು ಕಡಿತಗೊಳಿಸಲಾಗಿದೆ. ಇದು ಜನಸಾಮಾನ್ಯರ ಗಮನಕ್ಕೆ ಬರುವುದು ನಿಧಾನವಾಗುತ್ತದೆ. ಹಿಂದಿನವರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹಣಕಾಸು ವಿಚಾರಕ್ಕೆ ಹೇಳುತ್ತಿದ್ದರು. ಬಸವರಾಜ ಬೊಮ್ಮಾಯಿ ಜನರಿಗೆ ನೀಡಿದ್ದ ಹಾಸಿಗೆಯನ್ನು ಸಿದ್ದರಾಮಯ್ಯ ಹಾಗೆ ಇಟ್ಟು ಕೊಂಡಿದ್ದಾರೆ. ಆದರೆ ಹಾಸಿಗೆ ಒಳಗೆ ಇದ್ದ ಹತ್ತಿ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಹಾಸಿಗೆ ಮೇಲೆ ಮಲಗಿದಾಗ ಮಾತ್ರ ಇದು ತಿಳಿಯುತ್ತದೆ. ಈಗ ಹಾಸಿಗೆ ಆಕಾರವೇನೂ ಬದಲಾಗಿಲ್ಲ. ಎಲ್ಲ ಇಲಾಖೆಗಳಲ್ಲಿ ಅನುದಾನ ಕಡಿತ ಮಾಡಲು ಹೋಗಿಲ್ಲ. ತಮ್ಮ ನೀತಿಗೆ ಅನುಗುಣವಾಗಿ ಸಮಾಜಕಲ್ಯಾಣ ಹಾಗೂ ಇತರ ಆರ್ಥಿಕ ಸೇವೆಗಳಲ್ಲಿ ಅನುದಾನ ಹೆಚ್ಚಿಸಿದ್ದಾರೆ.
ಸಂಪನ್ಮೂಲ ತಂದು ಕೊಡುವ ಎಲ್ಲ ಇಲಾಖೆಗಳ ತೆರಿಗೆ ಸಂಗ್ರಹದ ಗುರಿಯನ್ನು ಮಾತ್ರ ಹೆಚ್ಚಿಸಿದ್ದಾರೆ. ಇದು ಬಹುತೇಕ ಕನ್ನಡಿಯೊಳಗೆ ಇರುವ ಗಂಟು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ . ಇದನ್ನು ನಂಬಿಕೊAಡು ಉಚಿತ ಸೇವೆ ಮುಂದುವರಿಸುವುದು ಕಷ್ಟದ ಕೆಲಸ ಎಂಬುದು ಸರ್ಕಾರಕ್ಕೂ ತಿಳಿದಿದೆ. ಸಮಾಜದ ಕೆಳಸ್ತರದವರಿಗೆ ನ್ಯಾಯ ಒದಗಿಸಬೇಕು ಎಂದರೆ ಆರ್ಥಿಕವಾಗಿ ಕೆಲವು ತ್ಯಾಗಗಳಿಗೆ ಸಿದ್ಧರಾಗುವುದು ಅನಿವಾರ್ಯ. ಅದನ್ನು ಮನಗಂಡು ಸಿದ್ದರಾಮಯ್ಯ ದೀರ್ಘಕಾಲಿಕ ಯೋಜನೆಗಳಿಗೆ ಕೈಹಾಕಿಲ್ಲ. ಮುಂಗಡ ಪತ್ರದಲ್ಲಿ ಬರೆದಿರುವಂತೆ ಹಣದ ಒಳಹರಿವು ಇರಬೇಕು ಎಂದರೆ ಆರ್ಥಿಕ ಸೋರಿಕೆಯನ್ನು ಮೊದಲು ನಿಲ್ಲಿಸಬೇಕು. ಇದರ ಬಗ್ಗೆ ಮುಂಗಡಪತ್ರದಲ್ಲಿ ಕಟ್ಟಿನಿಟ್ಟಿನ ಕ್ರಮಗಳು ಪ್ರಕಟಗೊಂಡಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣದೊಂದಿಗೆ ಮಿತವ್ಯಯ ಮತ್ತು ಸೋರಿಕೆ ನಿಲ್ಲಿಸುವ ಕ್ರಮ ಜೊತೆಜೊತೆಯಲ್ಲೇ ನಡೆಯಬೇಕು. ಇಲ್ಲದಿದ್ದಲ್ಲಿ ಜರಡಿಯಲ್ಲಿ ನೀರು ಹಿಡಿದಂತಾಗುತ್ತದೆ.