ಗ್ರಾಮ ನ್ಯಾಯಾಲಯ ಇಂದಿನ ತುರ್ತು ಅಗತ್ಯ

Advertisement

ಮನೆ ಬಾಗಿಲಿಗೆ ನ್ಯಾಯ. ಇದು ಇಂದಿನ ತ್ವರಿತ ಅಗತ್ಯತೆ. ಗ್ರಾಮ ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಈಗ ತೀವ್ರ ಆಸಕ್ತಿ ತೋರಿದೆ. ಕಾನೂನು ಸಚಿವರು ಇದರ ಅನುಷ್ಠಾನಕ್ಕಾಗಿ ಉಮೇದು ತೋರಿದ್ದಾರೆ. ಜನಸಾಮಾನ್ಯರ, ವಿಶೇಷವಾಗಿ ಗಡಿ ತಂಟೆ, ವೈಯಕ್ತಿಕ ಚಿಕ್ಕಪುಟ್ಟ ವೈಷಮ್ಯಗಳು, ನೀರು- ಬೇಲಿ ವಿವಾದ, ಸಣ್ಣಪುಟ್ಟ ಕಳವು, ಕೀಟಲೆ, ಸಂಬಂಧಗಳ ಬಿರುಕು, ಬಿನ್ನಾಣ ಇತ್ಯಾದಿಗಳಿಗೆ ಅದೇ ಊರಿನ ಜನರ ಸಮ್ಮುಖದಲ್ಲಿಯೇ ಬಗೆಹರಿದಂತಾದರೆ…

ಎಂತಹ ಅದ್ಭುತ ಪರಿಕಲ್ಪನೆ ನೋಡಿ
ನಿಮ್ಮ ಗ್ರಾಮದಲ್ಲಿಯೇ ನಿಮಗೆ ನ್ಯಾಯ. ಒಂದು, ವಿವಾದ ತ್ವರಿತ ಇತ್ಯರ್ಥವಾಗುತ್ತದೆ. ಎರಡನೆಯದ್ದು, ಬೆಳೆಯಬಹುದಾದ ವಿವಾದ ಅಲ್ಲಿಯೇ ತಣ್ಣಗಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯಾಲಯಕ್ಕೆ ಅಲೆದಾಡಿ ದುಡ್ಡು ಕಳೆದುಕೊಳ್ಳುವ ಒತ್ತಡ, ಅಸ್ವಸ್ಥತೆ ಮತ್ತು ಅಪವ್ಯಯಗಳಿಗೆ ವಿರಾಮ ಹಾಡಿದಂತಾಗುತ್ತದೆ.
ಒಂದು ಸಾವಿರ ಗ್ರಾಮ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಕಾನೂನು ಮಂತ್ರಿ ಎಚ್.ಕೆ.ಪಾಟೀಲ ಮಂತ್ರಿಯಾದ ಒಂದೇ ತಿಂಗಳಿನಲ್ಲಿ ಸಂಕಲ್ಪ ತೊಟ್ಟವರಂತೆ ಚರ್ಚೆ ಆರಂಭಿಸಿದ್ದಾರೆ. ಈಗಲೇ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ವಕೀಲರ ಸಮೂಹದ ಪ್ರತಿರೋಧವನ್ನು ಎದುರಿಸುವ ತಾಕತ್ತು, ಇಚ್ಛಾಶಕ್ತಿ ನೂತನ ಕಾನೂನು ಸಚಿವರಿಗೆ ಇದೆಯೇ? ಎಂಬ ಸವಾಲು ಕೂಡ ಎದುರಾಗಿದೆ. ಈ ಪ್ರಶ್ನೆ ಏಕೆ ಉದ್ಭವವಾಗುತ್ತದೆ ಎಂದರೆ ಗ್ರಾಮ ನ್ಯಾಯಾಲಯ ಪರಿಕಲ್ಪನೆಗೆ ರಾಷ್ಟ್ರೀಯ ಮಹತ್ವ ನೀಡಿ, ಅದಕ್ಕೊಂದು ಶಾಸನ, ಕಾನೂನು ರಚನೆಯಾಗಿದ್ದು ೨೦೦೮ ಡಿಸೆಂಬರ್‌ನಲ್ಲಿ. ಆಗ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಇದಕ್ಕೆ ಸುಪ್ರೀಂ ಕೋರ್ಟಿನ ಮನ್ನಣೆ ಕೂಡ ದೊರಕಿತ್ತು. ಗ್ರಾಮ ನ್ಯಾಯಾಲಯದ ಕಲ್ಪನೆಯನ್ನು ಶ್ಲಾಘಿಸಿದ್ದ ಅಂದಿನ ಮುಖ್ಯ ನ್ಯಾಯಾಧೀಶರು ಹಾಗೂ ನ್ಯಾಯದಾನದ ಕಳಕಳಿ ಹೊಂದಿದವರು ಹೇಳಿದ್ದು, ದೇಶದ ಲಕ್ಷಾಂತರ ರೈತರು ಮತ್ತು ದಿನಗೂಲಿಗಳಿಗೆ, ಬಡ ಹಾಗೂ ಅನಕ್ಷರಸ್ಥ, ದುರ್ಬಲ ವರ್ಗದವರಿಗೆ ಇದು ಧ್ವನಿ ನೀಡುತ್ತದೆ, ಶಕ್ತಿ ತುಂಬುತ್ತದೆ. ದೂರದ ನಗರಗಳಿಗೆ ಅಲೆದಾಡುವ, ದುಬಾರಿ ಹಣ ತೆರುವ ಹಾಗೂ ನ್ಯಾಯದಾನ ವಿಳಂಬದ ನೋವನ್ನು ಶಮನಗೊಳಿಸುತ್ತದೆ ಎಂದು.
೨೦೦೮ರಲ್ಲಿಯೇ ಸಂಸತ್ತು ಅಂಗೀಕರಿಸಿದ ಕಾನೂನಾಗಿ ಅನುಷ್ಠಾನಗೊಳಿಸಲು ಆದೇಶಿಸಿದ್ದಾಗ್ಯೂ, ಕರ್ನಾಟಕದಲ್ಲಿ ಈವರೆಗೂ ಗ್ರಾಮ ನ್ಯಾಯಾಲಯ ಸ್ಥಾಪನೆಯಾಗಲೇ ಇಲ್ಲ. ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಗ್ರಾಮ ನ್ಯಾಯಾಲಯದ ಅನುಷ್ಠಾನ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರೆ, ಆಗ ಅಂದಿನ ಕಾನೂನು ಸಚಿವರು ತ್ವರಿತವಾಗಿ ತುಮಕೂರು ಜಿಲ್ಲೆಯಲ್ಲಿ ಎರಡು ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಆದೇಶ ಹೊರಡಿಸಿದರು ಅಷ್ಟೇ. ಇನ್ನೂ ನ್ಯಾಯಾಧೀಶರ ನೇಮಕವಾಗಿಲ್ಲ. ಸ್ಥಳ ನಿಗದಿಯಾಗಿಲ್ಲ. ಒಂದೇ ಒಂದು ಕಲಾಪ ನಡೆದಿಲ್ಲ.
ಹಾಗಂತ ಗ್ರಾಮ ನ್ಯಾಯಾಲಯವನ್ನು ಅತ್ಯಂತ ಹೆಚ್ಚು ಅನುಷ್ಠಾನಗೊಳಿಸಿದ್ದು .ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ. ಮಧ್ಯಪ್ರದೇಶದಲ್ಲಿ (೮೯) ರಾಜಸ್ತಾನದಲ್ಲಿ ೪೫, ಕೇರಳದಲ್ಲಿ ೩೦, ಮಹಾರಾಷ್ಟ್ರದಲ್ಲಿ ೨೩, ಉತ್ತರ ಪ್ರದೇಶದಲ್ಲಿ ೧೧೩ ಗ್ರಾಮ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ನೀಡಿರುವ ಗುರಿ ಇಷ್ಟಾದರೂ ಅನುಷ್ಠಾನಗೊಳಿಸಿದ್ದು ಎನ್‌ಡಿಎ ಅಥವಾ ಕಾಂಗ್ರೆಸ್ಸೇತರ ಸರ್ಕಾರಗಳೇ. ತಮ್ಮದೇ ಸರ್ಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಇಂದಿನ ಮುಖ್ಯಮಂತ್ರಿ ಹಾಗೂ ಅಂದೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಏಕೆ ಸಾಧ್ಯವಾಗಿಲ್ಲವೋ …
ಹಾಗಂತ ಇದರಲ್ಲಿ ರಾಜಕೀಯ ಬೆರೆಸಬೇಕು ಎಂದು ಉದ್ದೇಶವೇನಿರಲಿಲ್ಲ. ಸಮಸ್ಯೆ ಇರುವುದು ಇಚ್ಛಾಶಕ್ತಿಯ ಕೊರತೆ. ಇತ್ತೀಚಿನ ವರದಿಗಳ ಪ್ರಕಾರ ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಸಿವಿಲ್ ವ್ಯಾಜ್ಯಗಳು ಗ್ರಾಮಾಂತರ ಪ್ರದೇಶದವುಗಳು ಬಾಕಿ ಉಳಿದಿವೆ. ಹತ್ತಾರು ವರ್ಷಗಳಿಂದ ಇವೆಲ್ಲ ಚಿಕ್ಕಪುಟ್ಟ ತಂಟೆಗಳೇ ದಿನದೂಡಲ್ಪಡುತ್ತಿವೆ. ಮೂರು ಸಾವಿರ ಕೋಟಿಗೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ. ಅವರಿಗೆಲ್ಲ ನ್ಯಾಯ ಗಗನ ಕುಸುಮ.
ಅದಕ್ಕೇ ಹೇಳುವುದು, ಕೋರ್ಟ್ ಕಟ್ಟೆ ಏರಿದ ಪ್ರಕರಣಗಳಲ್ಲಿ ಗೆದ್ದವ ಸೋತ, ಸೋತವ ಸತ್ತ' ಎಂದು. ಅಷ್ಟು ಹೈರಾಣ ಜನರಿಗೆ. ನ್ಯಾಯದಾನದ ಪ್ರಕ್ರಿಯೆ ಈಗಂತೂ ತುಂಬ ದುಬಾರಿ. ಇಷ್ಟಕ್ಕೂ ಗ್ರಾಮ ನ್ಯಾಯಾಲಯ ಕರ್ನಾಟಕದ ಮಟ್ಟಿಗೇ ಏಕೆ, ದೇಶಕ್ಕೇ ಪ್ರಪ್ರಥಮವಾಗಿ ಪರಿಚಯಿಸಿದ್ದು ಮೈಸೂರು ಮಹಾರಾಜರು. ೧೯೧೩ರಲ್ಲಿ ಕೃಷ್ಣರಾಜ ಒಡೆಯರ್ ಅವರು ರೈತರ ಮತ್ತು ಜನಸಾಮಾನ್ಯರ ವಿವಾದಗಳ ಇತ್ಯರ್ಥಕ್ಕೆ ದಿ ಮೈಸೂರ ವಿಲೇಜ್ ಕೋರ್ಟ್ ಆಕ್ಟ್ (ಗ್ರಾಮ ನ್ಯಾಯಾಲಯ)ನ್ನು ಜಾರಿಗೆ ತಂದರು. ನಿರ್ಮಲ ಮನಸ್ಸಿನ, ಎಲ್ಲ ವ್ಯವಹಾರ ಹಾಗೂ ಕಾನೂನು ಜ್ಞಾನ ಉಳ್ಳ, ನ್ಯಾಯವನ್ನು ದಾನ ಎಂದು ಪರಿಗಣಿಸಿದವರನ್ನು ಗ್ರಾಮಗಳಿಗೆ ನೇಮಿಸಿ ಅಲ್ಲಿ ಮುಕ್ತವಾಗಿ ಸಾಕ್ಷ್ಯಾಧಾರಗಳ ಸಂಗ್ರಹ, ವಿಚಾರಣೆ ಇತ್ಯಾದಿಗಳಿಂದ, ಜನಸಾಮಾನ್ಯರಿಗೆ, ಅದೂ ಅಶಕ್ತರು, ಧ್ವನಿ ಇಲ್ಲದವರಿಗೆ ಅಂದು ನ್ಯಾಯ ಕೊಡಿಸಿದ ಶ್ರೇಯಸ್ಸು ಮಹಾರಾಜರದ್ದು. ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ಬಹುತೇಕ ಕಡೆಗೂ ಈ ಮೊದಲು ಊರ ಪ್ರಮುಖರ, ನ್ಯಾಯದಾನಿಗಳ ಸಮ್ಮುಖದಲ್ಲಿ ಪಂಚಾಯ್ತಿಗಳು ಅಲ್ಲಲ್ಲೇ ವಿವಾದಗಳನ್ನು ಇತ್ಯರ್ಥಗೊಳಿಸುತ್ತಿದ್ದವು. ಕರ್ನಾಟಕದಲ್ಲಿ ಸರಪಂಚ, ಉತ್ತರ ಭಾರತದ ರಾಜ್ಯಗಳಲ್ಲಿ ಚಾಪ್ ಪಂಚಾಯತಿ ಇತ್ಯಾದಿ ಬೇರೆ ಬೇರೆ ಕಡೆ, ಬೇರೆ ಬೇರೆ ನಾಮಾಂಕಿತಗಳಿಂದ ಊರಲ್ಲೇ ಪಂಚಾಯ್ತಿ ಕಟ್ಟೆಯಲ್ಲಿ ನ್ಯಾಯದಾನ ನಡೆದು, ಅಲ್ಲಿಯೇ ಶಿಕ್ಷೆಯಾಗಿದ್ದೆಲ್ಲ ಇತಿಹಾಸ. ಬಹುತೇಕ ಕಡೆ ಊರ ಪ್ರತಿಷ್ಠಿತರು, ಉಳ್ಳವರು, ಬಲಾಢ್ಯರ ಪರವಾಗಿಯೇ ನ್ಯಾಯದಾನ ದೊರಕಿದ ಹಿನ್ನೆಲೆಯಲ್ಲಿ ನಿಧಾನವಾಗಿ ಇವು ಕಣ್ಮರೆಯಾದವು. ಹಾಗೇ ರಾಜ್ಯದ ಹಲವು ಮಠಾಧೀಶರು, ಧರ್ಮಾಧಿಕಾರಿಗಳು, ಆಸ್ಥಾನಗಳು ಇಂದಿಗೂ ತಮ್ಮ ಊರಿನ ಅಥವಾ ತಮ್ಮಲ್ಲಿ ನ್ಯಾಯ ಕೋರಿ ಬರುವವರ ವಿವಾದಗಳನ್ನು ಕೈಗೆತ್ತಿಕೊಂಡು ತೀರ್ಪು ನೀಡುವ ಪರಂಪರೆ ಇನ್ನೂ ಇದೆ. ಸಿರಿಗೆರೆ ಸಂಸ್ಥಾನ, ಧರ್ಮಸ್ಥಳ ಹೀಗೆ ಹತ್ತಾರು ಕಡೆ... ಇವೆಲ್ಲ ನಂಬಿಕೆ ಮತ್ತು ಶ್ರದ್ಧೆಯ ಮೇಲೆ ನಡೆಯುತ್ತಿವೆ. ಸ್ವಾತಂತ್ರ್ಯನಂತರ ನ್ಯಾಯದಾನದ ವ್ಯವಸ್ಥೆ ನಗರ ಮತ್ತು ರಾಜಧಾನಿ ಕೇಂದ್ರಿತವಾದ ನಂತರ ಮಹಾರಾಜರ ಗ್ರಾಮ ನ್ಯಾಯಾಲಯದ ಪರಿಕಲ್ಪನೆಗೆ ತಿಲಾಂಜಲಿ ಹಾಡಲಾಯಿತು. ೧೯೮೫ರಲ್ಲಿ ಕರ್ನಾಟಕದಲ್ಲಿ ವಿಕೇಂದ್ರೀಕರಣ ಚಿಂತನೆಗೆ ಚಾಲನೆ ದೊರೆತಾಗ ಜಿಲ್ಲಾ ಪರಿಷತ್ತು, ತಾಲ್ಲೂಕು ಪರಿಷತ್ತು, ಮಂಡಲ ಪಂಚಾಯ್ತಿಗಳ ಜೊತೆಗೆ ಗ್ರಾಮ ನ್ಯಾಯ ಮಂಡಳಿ ಕೂಡ ಅನುಷ್ಠಾನವಾಗಬೇಕೆಂಬ ಜಿಜ್ಞಾಸೆಗಳು ನಡೆದವು. ಅದಕ್ಕಾಗಿಯೇ ಕಾನೂನು ಕಟ್ಟಲೆಗಳು ರೂಪಿತವಾದವು. ಆದರೆ ಅಂದಿನ ಒಂದಿಬ್ಬರು ಸಚಿವರು ಮಂಡಲ ನ್ಯಾಯ ಮಂಡಳಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಲೋಚನೆಯನ್ನು ಕೈಬಿಡಲಾಯಿತು. ಆಗಲೂ ಮೇಲುಗೈ ಸಾಧಿಸಿದ್ದು ಕಾಣದ ಕೈಗಳೇ. ೨೦೦೮ರಲ್ಲಿ ಯುಪಿಎ ಸರ್ಕಾರ ಗ್ರಾಮ ನ್ಯಾಯಾಲಯಗಳ ಅನುಷ್ಠಾನಕ್ಕೆ ಅಂಗೀಕಾರ ನೀಡಿದ ನಂತರ ಅದೊಂದು ಪರಿಪೂರ್ಣ ಪರಿಕಲ್ಪನೆಯೊಂದಿಗೆ ಸಿದ್ಧಪಡಿಸಲಾದ ಯೋಜನೆಯಾಗಿತ್ತು. ಸಂಚಾರಿ ನ್ಯಾಯಾಲಯದ ಸ್ವರೂಪದಲ್ಲಿ, ಹಿರಿಯ ಮ್ಯಾಜಿಸ್ಟ್ರೇಟ್ ದರ್ಜೆ ನ್ಯಾಯಾಧೀಶರನ್ನು ನೇಮಿಸಿ ಕಾರ್ಯನಿರ್ವಹಿಸಬೇಕಾದದ್ದು ಒಟ್ಟಾರೆ ಈ ಯೋಜನೆಯ ತಾತ್ಪರ್ಯ. ಇಂದು ಬಡವ ಬಲ್ಲಿದ ಬಿಡಿ. ಸಾಮಾನ್ಯವಾಗಿ ಆರ್ಥಿಕ ಅನುಕೂಲಸ್ಥನೂ ನ್ಯಾಯಾಲಯದ ಮೆಟ್ಟಿಲೇರದ ಪರಿಸ್ಥಿತಿ ಇದೆ. ನ್ಯಾಯವಾದಿಗಳ ದುಬಾರಿ ಶುಲ್ಕ ಹಾಗೂ ವಿಳಂಬ ಇದಕ್ಕೆ ಕಾರಣ. ಇಷ್ಟಕ್ಕೂ ಕಕ್ಷಿದಾರರ ಪರವಾಗಿಯೇ ನ್ಯಾಯವಾದಿಗಳಿರುತ್ತಾರೆ, ವಾದಿಸುತ್ತಾರೆ ಎಂಬ ನಂಬಿಕೆಯೂ ಈಗ ಕಳೆದು ಹೋಗಿದೆ. ಗ್ರಾಮೀಣ ನ್ಯಾಯಾಲಯದ ತ್ವರಿತ ಅನುಷ್ಠಾನ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆ ಬಹುಶಃ ಹೊಸ ಸಾಮರಸ್ಯಕ್ಕೆ ಮತ್ತು ನ್ಯಾಯಾಲಗಳ ಕೀರ್ತಿ ಗೌರವ ಹೆಚ್ಚಿಸುವಂಥದ್ದಾಗಿದೆ. ಜನರಿಗೆ ಬೇಕಾದದ್ದು ಅದೇ ಗ್ರಾಮ ನ್ಯಾಯಾಲಯಗಳ ಜೊತೆಗೆ ಪ್ರತಿ ರಾಜ್ಯಕ್ಕೆ ಐವತ್ತು ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಮೂಲಭೂತ ಸೌಲಭ್ಯ, ನ್ಯಾಯಾಧೀಶರ ನೇಮಕ ಇತ್ಯಾದಿಗಳಿಗೆ. ಆದಾಗ್ಯೂ ಕರ್ನಾಟಕದಲ್ಲೇಕೋ ಆಸಕ್ತಿ ತೋರಿರಲಿಲ್ಲ. ಇಷ್ಟಾಗಿಯೂ ಇರುವ ಪ್ರಶ್ನೆ ಎಂದರೆ ಈ ಸರ್ಕಾರವಾದರೂ ಇಚ್ಛಾಶಕ್ತಿಯನ್ನು ತೋರುವುದೇ? ಪ್ರಬಲ ಲಾಬಿಯನ್ನು ಎದುರಿಸೀತೇ ಎನ್ನುವುದು. ಸದ್ಯಕ್ಕಂತೂ ಸಚಿವರಿಗೇನೋ ಉಮೇದು ಇದೆ. ಜನರಿಗೂ ಹೀಗೇಕಾಗಬಾರದು ಎನ್ನುವ ಸಹಮತ ಇದೆ. ಇನ್ನು ಮೇಲೆ ಸಮರ, ಸಂಘರ್ಷ ಶುರುವಾದೀತು. ಹೈಕೋರ್ಟಿನ ಎರಡು ಪೀಠಗಳ ಸ್ಥಾಪನೆಗೆ ಎರಡು ದಶಕಗಳ ಹೋರಾಟ ನಡೆಸಿದ ಇತಿಹಾಸ ಇರುವ ರಾಜ್ಯದಲ್ಲಿಗ್ರಾಮ ನ್ಯಾಯಾಲಯ’ಗಳ ಸ್ಥಾಪನೆಗೆ ತೊಡಕಾಗದಿರಲಿ ಎಂಬುದೇ ಜನಾಶಯ.