`ಗ್ರಾಮ ಸ್ವರಾಜ್ಯ ಸೌಧ’ ಲೋಕಾರ್ಪಣೆ ವೇಳೆ ಕುಸಿದು ಬಿದ್ದ ಗ್ರಾಪಂ ಅಧ್ಯಕ್ಷ

Mudhol
Advertisement

ಮುಧೋಳ: ತಾಲೂಕಿನ ಮಂಟೂರು ಗ್ರಾಮದಲ್ಲಿ ಕೋಟ್ಯಂತರ ಹಣದಲ್ಲಿ ನಿರ್ಮಿಸಲಾದ ಗ್ರಾಮ ಸ್ವರಾಜ್ಯ ಸೌಧದ ನೂತನ ಕಟ್ಟಡವನ್ನು ಇನ್ನೇನು ಲೋಕಾರ್ಪಣೆಗೊಳಿಸುವ ಹಂತದಲ್ಲಿಯೇ ಸ್ಥಳೀಯ ಗ್ರಾಪಂ ಅಧ್ಯಕ್ಷ ಅರುಣ ಮಲಘಾಣ ಕಡಿಮೆ ರಕ್ತದೊತ್ತಡದಿಂದಾಗಿ(ಲೋ ಬಿಪಿ) ಕುಸಿದು ಬಿದ್ದ ಘಟನೆ ನಡೆಯಿತು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಇನ್ನೆನ್ನು ಲೋಕಾರ್ಪಣೆಗೊಳಿಸಲು ಅಣಿಯಾಗುತ್ತಿದ್ದಂತೆಯೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಅರುಣ ಮಲಘಾಣ ಹಠಾತ್ತನೆ ಕುಸಿದು ಬಿದ್ದಿದ್ದರ ಪರಿಣಾಮ ಸ್ಥಳದಲ್ಲಿ ಕೊಂಚ ಆತಂಕದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಅಲ್ಲಿಂದ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದ ಸಚಿವ ಗೋವಿಂದ ಕಾರಜೋಳ, ಪರಿಸ್ಥಿತಿಯನ್ನು ತಿಳಿಗೊಳಿಸಿದರಲ್ಲದೇ ಪಕ್ಕದಲ್ಲಿಯೇ ಇದ್ದ ಶ್ರೀಗಳ ಸಾನ್ನಿಧ್ಯದಲ್ಲಿಯೇ ಸಾಂಕೇತಿಕವಾಗಿ ಲೋಕಾಪಣೆಗೊಳಿಸಿ ಸಂಕ್ಷಿಪ್ತವಾಗಿ ಕಾರ್ಯಕ್ರಮ ಮುಗಿಸಿ ಆಸ್ಪತ್ರೆಗೆ ದೌಡಾಯಿಸಿದರು. ಆಸ್ಪತ್ರೆಯಲ್ಲಿ ದಾಖಲಾದ ಅರುಣ ಮಲಘಾಣ ಅವರ ಆರೋಗ್ಯ ವಿಚಾರಿಸಿ ಟಿಎಚ್‌ಓ. ಡಾ.ವೆಂಕಟೇಶ ಮಲಘಾಣ ಹಾಗೂ ಡಾ. ಸಿ. ಎಚ್. ಡೋಣಿ ಅವರ ಜೊತೆಗೆ ಚರ್ಚಿಸಿ ಗುಣಮಟ್ಟದ ಚಿಕಿತ್ಸೆಗಾಗಿ ಏರ್ಪಾಟು ಮಾಡಿದರಲ್ಲದೇ ವೈದ್ಯಕೀಯ ಸಲಹೆ ಪಡೆದು ಕಾಳಜಿಪೂರ್ವಕ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.