ಘಟಪ್ರಭಾ ದೌರ್ಜನ್ಯ ಪ್ರಕರಣ: ಪೊಲೀಸರ ಸುತ್ತವೇ ಅನುಮಾನದ ಹುತ್ತ

Advertisement

ವಿಲಾಸ ಜೋಶಿ
ಬೆಳಗಾವಿ: ಘಟಪ್ರಭಾದಲ್ಲಿ ದಲಿತ ಮಹಿಳೆ ಮೇಲೆ ನಡೆದ ದೌರ್ಜನ್ಯದ ಪರಿ ಕೇಳಿದರೆ ಬೆಚ್ಚಿ ಬೀಳಬೇಕು. ತನ್ನ ಮೇಲೆ ಯಾವ ರೀತಿ ಕ್ರೌರ್ಯ ನಡೆಸಿ ದೌರ್ಜನ್ಯ ನಡೆಸಲಾಯಿತು ಎನ್ನುವುದು ಸೇರಿದಂತೆ ಒಟ್ಟಾರೆ ಘಟನೆಯ ಬಗ್ಗೆ ಸಂತ್ರಸ್ತೆ ೧೬ ನಿಮಿಷ ೪೦ ಸೆಕೆಂಡುಗಳ ಆಡಿಯೋದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಅವಳ ಮಾತನ್ನು ನಂಬುವುದಾದರೆ, ಬೆತ್ತಲೆ ಮಾಡುವ ಬೆದರಿಕೆ ಹಾಕಿದ್ದರ ಬಗ್ಗೆ ಎಸ್ಪಿಯವರಿಗೆ ದೂರು ಕೊಟ್ಟ ಮರುದಿನವೇ ಈ ರೀತಿಯ ಅಮಾನುಷ ಕೃತ್ಯ ನಡೆದಿದೆ ಅಂತೆ.
ಅಷ್ಟೇ ಅಲ್ಲ ಘಟಪ್ರಭಾ ಪೊಲೀಸರ ಸಮ್ಮುಖದಲ್ಲಿಯೂ ಕೂಡ ಕಿಡಿಗೇಡಿಗಳು ಸಂತ್ರಸ್ತೆಯನ್ನು ಎಳೆದಾಡಿದ್ದಾರೆ. ಹಲ್ಲೆ ಕೂಡ ಮಾಡಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಪೊಲೀಸರ ಸಮ್ಮುಖದಲ್ಲಿ ಎಳೆದಾಡುತ್ತಿದ್ದಾಗ, ಅಲ್ಲಿದ್ದ ಕೆಲ ಪೊಲೀಸರು ನಮ್ಮಲ್ಲಿ ಸಿಸಿಟಿವಿ ಇದೆ, ಇಲ್ಲಿ ಏನೂ ಮಾಡಬೇಡಿ, ಅವಳನ್ನು ಬೇರೆ ಎಲ್ಲಿಯಾದರೂ ಕರೆದುಕೊಂಡು ಹೋಗಿಎಲ್ಲವನ್ನು’ ಮುಗಿಸಿಕೊಂಡು ಬನ್ನಿ ಎಂದು ಹೇಳಿದರು ಎಂದು ಸ್ವತಃ ಸಂತ್ರಸ್ತೆ ಆಡಿಯೋದಲ್ಲಿ ವಿವರಿಸಿದ್ದಾಳೆ. ಆಗ ಠಾಣೆಯಲ್ಲಿ ಯಾವ ಪೊಲೀಸರು ಇದ್ದರು ಎನ್ನುವುದನ್ನು ಆಡಿಯೊದಲ್ಲಿ ಉಲ್ಲೇಖಿಸಿದ್ದಾಳೆ.
ಆಕೆ ಆಡಿಯೋದಲ್ಲಿ ಏನೆಲ್ಲ ಹೇಳಿದ್ದಾಳೆ…?
ಕಳೆದ ೩೦ರಂದು ಅರ್ಜುನ ಎಂಬಾತನೂ ಸೇರಿದಂತೆ ಇನ್ನೂ ಕೆಲವರು ನನಗೆ ೫ ಲಕ್ಷ ರೂ ಕೊಡಬೇಕು, ಅಷ್ಟೇ ಅಲ್ಲ ಇಲ್ಲಿಂದ ಬಿಟ್ಟು ಹೋಗಬೇಕು ಎನ್ನುವ ಬೆದರಿಕೆ ಒಡ್ಡಿದ್ದರು. ಅದಕ್ಕೆ ದುಡಿದು
ತಿನ್ನುವವಳು ನಾನು ಎಲ್ಲಿಂದ ಕೊಡಲಿ ಎಂದು ಪ್ರಶ್ನೆ ಮಾಡಿದ್ದೆ.
ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಗೆ ದೂರು ಸಹ ಹೇಳಿದ್ದೆ. ಆದರೆ ಅವರ ಕಿರಿಕಿರಿ ನಿಲ್ಲಲಿಲ್ಲ. ಕೊನೆಗೆ ಬೆಳಗಾವಿಗೆ ಹೋಗಿದ್ದ ಸಂದರ್ಭದಲ್ಲಿ ಕಳೆದ ಗುರುವಾರ ಸಂಜೆ ಎಸ್ಪಿ ಅವರನ್ನು ಕಂಡು ಲಿಖಿತ ದೂರು ನೀಡಿದೆ. ಎಸ್ಪಿಯವರು ತಕ್ಷಣ ಘಟಪ್ರಭಾ ಸಿಪಿಐಗೆ ದೂರವಾಣಿ ಮೂಲಕ ವಿಷಯ ತಿಳಿಸಿ, ಮಹಿಳೆಗೆ ರಕ್ಷಣೆ ಕೊಡಿ ಎನ್ನುವ ಸೂಚನೆ ನೀಡಿದರು.
ಆದರೆ ಈ ಸುದ್ದಿ ಗೊತ್ತಾದ ಕೂಡಲೇ ಅಂದೇ ೧೫ಕ್ಕೂ ಹೆಚ್ಚು ಜನ ನನ್ನ ಮನೆಗೆ ಬಂದು ಹೋಗಿದ್ದರು. ನಾನು ಆಗ ಇರಲಿಲ್ಲ. ಮರುದಿನ ರಾತ್ರಿ ೮.೩೦ಕ್ಕೆ ನಾನು ಮನೆಯಲ್ಲಿ ಇದ್ದುದನ್ನು ಖಚಿತಪಡಿಸಿಕೊಂಡ ೩೫ಕ್ಕೂ ಹೆಚ್ಚಿದ್ದ ಜನರು ಗುಂಪು ಮನೆಗೆ ಬಂದು ದಾಂಧಲೆ ನಡೆಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅದರಲ್ಲಿ ಒಬ್ಬರು ಕಲ್ಲು ಹೊಡೆದರು, ಮನೆಯೊಳಗೆ ನುಗ್ಗಿದ ಗುಂಪು ನನ್ನನ್ನು ಬೆತ್ತಲೆ ಮಾಡಿತು, ಅಷ್ಟೇ ಅಲ್ಲ ಬಾಯಿಯಲ್ಲಿ ಮೂತ್ರ ವಿಸರ್ಜನೆ ಕೂಡ ಮಾಡಿದ್ದಲ್ಲದೇ ಮಾಡಬಾರದ್ದನ್ನು ಮಾಡಿದರು’ ಎಂದು ಆಡಿಯೋದಲ್ಲಿ ಸಂತ್ರಸ್ತೆ ವಿವರಿಸಿದ್ದಾಳೆ.
ಕೊನೆಗೆ ನನ್ನ ಮೈಮೇಲೆ ಬಟ್ಟೆ ಇಲ್ಲದೇ ಇದ್ದರೂ ಕೂಡ ಕೊರಳಿಗೆ ಚಪ್ಪಲಿ ಹಾರ ಹಾಕಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಕೊನೆಗೆ ರಕ್ತ ಸೋರುತ್ತಿರುವುದನ್ನು ಕಂಡು ಸೀರೆ ಕೊಟ್ಟು ನೇರವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.
ಆದರೆ ಅಲ್ಲಿನ ಪೊಲೀಸರು ಕೂಡ ನನ್ನ ನೆರವಿಗೆ ಬರಲಿಲ್ಲ. ಹೀಗಾಗಿ ಪೊಲೀಸರ ಸಮ್ಮುಖದಲ್ಲಿಯೇ ನನ್ನನ್ನು ಮತ್ತೇ ಎಳೆದಾಡಿ ಹಲ್ಲೆ ಮಾಡಿದರು. ಕೊನೆಗೆ ಇಲ್ಲಿ ಏನಾದರೂ ಮಾಡಿದರೆ ಎಲ್ಲವೂ ನಮ್ಮ ಮೇಲೆ ಬರುತ್ತದೆ. ಹೊರೆಗೆ ಎಲ್ಲಿಯಾದರೂ ಕರೆದುಕೊಂಡು ಹೋಗಿ ಮುಗಿಸಿಕೊಂಡು ಬನ್ನಿ ಎಂದು ಮಹಿಳಾ ಪೇದೆ ಮೂವರು ಪೊಲೀಸರು ಹಲ್ಲೆಕೋರರಿಗೆ ಹೇಳಿದರು ಎಂದು ಸಂತ್ರಸ್ತೆ ವಿವರಿಸಿದ್ದಾಳೆ.
ಕೊನೆಗೆ ಪೊಲೀಸರು ಸಂತ್ರಸ್ತೆಯನ್ನು ಜೈಲಿಗೆ ಕಳಿಸುವುದಾಗಿ ಹೇಳಿದ ನಂತರ ನನ್ನನ್ನು ಅಲ್ಲಿಯೇ ಬಿಟ್ಟು ಹೋದರು. ನಂತರ ಪೊಲೀಸರು ಗೋಕಾಕ ಆಸ್ಪತ್ರೆಗೆ ದಾಖಲು ಮಾಡಿದರು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ದಾಖಲು ಮಾಡಿದರು ಎಂದು ಸಂತ್ರಸ್ತೆ ತಿಳಿಸಿದರು.