ಘೋರ ಸಾವಿಗೆ ಹೊಸ ನ್ಯಾಯ

Advertisement

ಪುಣೆಯಲ್ಲಿ ಎರಡು ದಿನಗಳ ಹಿಂದೆ ಮಧ್ಯರಾತ್ರಿಯ ನಂತರ ಸಂಭವಿಸಿರುವ ಭೀಕರ ರಸ್ತೆ ದುರಂತ ಈಗ ನಾನಾ ರೀತಿಯ ಪ್ರಶ್ನೆಗಳನ್ನು ನ್ಯಾಯಾಂಗ ಹಾಗೂ ಕಾರ್ಯಾಂಗದ ಜೊತೆಗೆ ಸಾರ್ವಜನಿಕ ವಲಯದಲ್ಲಿಯೂ ಸೃಷ್ಟಿಸಿದೆ. ದುರಂತಕ್ಕೆ ಕಾರಣವಾಗಿರುವುದು ವಯಸ್ಕ ಬಾಲಕನ ಶರವೇಗದ ಕಾರಿನ ಓಟ. ಇದರಿಂದ ಮಡಿದವರು ಇಬ್ಬರು ಐಟಿ ಉದ್ಯೋಗಿಗಳು. ಇಷ್ಟು ವಿವರಗಳಿದ್ದರೆ ಇದೊಂದು ಸಾಮಾನ್ಯ ಪ್ರಕರಣ ಎಂದು ಭಾವಿಸುವ ಸಂಭವ ಹೆಚ್ಚು. ಆದರೆ, ಸ್ಥಿತಿ ಹಾಗಿಲ್ಲ. ಈ ದುರಂತಕ್ಕೆ ಕಾರಣವಾಗಿರುವುದು ಮದ್ಯದ ಅಮಲು. ಮಧ್ಯರಾತ್ರಿಯವರೆಗೆ ತನ್ನ ಗೆಳೆಯನ ಜೊತೆ ಅಪ್ರಾಪ್ತ ವಯಸ್ಸಿನ ಬಾಲಕ ಪಬ್ ಒಂದರಲ್ಲಿ ಪಾನಗೋಷ್ಠಿ ನಡೆಸಿದ ಮೇಲೆ ವಿಲಾಸಿ ಕಾರೊಂದನ್ನು ಓಡಿಸಿದಾಗ ಆಯತಪ್ಪಿದ ಪರಿಣಾಮವೇ ಇಬ್ಬರು ಐಟಿ ಉದ್ಯೋಗಿಗಳ ದುರ್ಮರಣ. ದುರಂತ ಸಂಭವಿಸಿದಾಗ ಕಾರಿನ ವೇಗ ಸುಮಾರು ೨೦೦ ಕಿ.ಮೀ. ದಾಟಿತ್ತು ಎಂಬುದನ್ನು ಊಹಿಸಿಕೊಂಡರೆ ಕಾರಿನ ಹೊಡೆತಕ್ಕೆ ಸಿಕ್ಕಿದ ಇಬ್ಬರು ಐಟಿ ಉದ್ಯೋಗಿಗಳ ದೇಹಕ್ಕೆ ಏನಾಗಿರಬಹುದು ಎಂಬುದು ಜನರಿಗೆ ಬಿಟ್ಟಿರುವ ವಿಚಾರ. ವಿಚಿತ್ರವೆಂದರೆ ಈ ಪ್ರಕರಣದ ವಿಚಾರಣೆ ನಡೆಸಿ ಕೇವಲ ೧೫ ಗಂಟೆಗಳ ಅವಧಿಯಲ್ಲಿ ತಪ್ಪಿತಸ್ಥ ಅಪ್ರಾಪ್ತ ಬಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ಷರತ್ತುಗಳನ್ನು ವಿಧಿಸಿದ್ದು ಮಾತ್ರ ಅಚ್ಚರಿಯ ಸಂಗತಿ. ಈ ವಿಚಾರಣೆ ನಡೆಸಿದ ಅಪ್ರಾಪ್ತರ ನ್ಯಾಯ ಮಂಡಳಿ ಹದಿನೈದು ದಿನಗಳ ಕಾಲ ಸಂಚಾರ ಪೊಲೀಸರ ಜೊತೆ ಕಾರ್ಯ ನಿರ್ವಹಿಸಬೇಕು, ಸಂಚಾರ ಸ್ಥಿತಿಯ ಬಗ್ಗೆ ಪ್ರಬಂಧವೊಂದನ್ನು ರಚಿಸಬೇಕು ಎಂಬುದೂ ಸೇರಿದಂತೆ ಒಟ್ಟು ೧೫ ಷರತ್ತುಗಳನ್ನು ಹಾಕಿರುವುದು ಈಗ ಚರ್ಚೆಯ ವಿಚಾರ. ಇಷ್ಟು ಘೋರ ತಪ್ಪು ಮಾಡಿದ್ದರೂ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಫಡ್ನವಿಸ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದಿಗ್ಮೂಢರನ್ನಾಗಿಸಿದೆ. ಅಮಲಿನಲ್ಲಿ ಪಿತ್ತ ನೆತ್ತಿಗೇರಿದ ಅಪ್ರಾಪ್ತ ವಯಸ್ಕನ ದುಸ್ಸಾಹಸಕ್ಕೆ ಎರಡು ಅಮಾಯಕ ಜೀವಗಳು ಬಲಿಯಾದರೂ ಜನ ಸುಮ್ಮನಿರಬೇಕೆ ಎಂಬ ಪ್ರಶ್ನೆಗಳು ಮಾರ್ದನಿಗೊಳ್ಳುತ್ತಿರುವುದು ಮುಂದಿನ ಪ್ರತಿಭಟನೆಯ ಹಾದಿಯ ದಿಕ್ಸೂಚಿ.
ಪುಣೆಯ ಪೊಲೀಸರಿಗಂತೂ ಈ ಪರಿಸ್ಥಿತಿಯ ಬಗ್ಗೆ ತೀರಾ ಧರ್ಮಸಂಕಟದ ಸ್ಥಿತಿ. ನ್ಯಾಯ ಮಂಡಳಿಯ ಮಾತನ್ನು ಮೀರುವುದು ಕಷ್ಟ. ಹದ್ದುಮೀರಿದ ವಯಸ್ಕನ ಕೃತ್ಯವನ್ನು ಸಹಿಸಿಕೊಂಡರೆ ಉಳಿದವರಿಗೂ ಅದೇ ಮಾದರಿಯಾಗುತ್ತದೆ ಎಂಬ ಭೀತಿ. ಈ ಹಿನ್ನೆಲೆಯಲ್ಲಿ ಹೊಸ ಪ್ರಕರಣವನ್ನು ಎಲ್ಲಾ ಸಾಕ್ಷ್ಯಾಧಾರಗಳೊಂದಿಗೆ ಸಿದ್ಧ ಮಾಡಿ ನ್ಯಾಯಾಲಯದ ಮುಂದೆ ಮಂಡಿಸಲು ಸಿದ್ಧತೆ ನಡೆಸಲಾಗಿದೆ. ಸಾರ್ವಜನಿಕರಿಗೂ ಕೂಡಾ ಈ ಬೆಳವಣಿಗೆಯ ಬಗ್ಗೆ ತೀರಾ ಆಕ್ರೋಶವಿದೆ. ಅಂದ ಹಾಗೆ, ಈ ಆರೋಪಿ ಅಪ್ರಾಪ್ತ ಬಾಲಕನ ತಂದೆ ಪ್ರಭಾವಿ ವ್ಯಕ್ತಿ. ಪುಣೆಯ ರಿಯಲ್ ಎಸ್ಟೇಟ್ ಕುಳ. ರಾಜಕೀಯವಾಗಿಯೂ ಈತ ಪ್ರಭಾವಿ. ಮಧ್ಯರಾತ್ರಿಯ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ಇಬ್ಬರ ಕುಟುಂಬಗಳ ಸದಸ್ಯರು ಆರೋಪಿಯ ಬಂಧನಕ್ಕೆ ಪಟ್ಟು ಹಿಡಿದಿರುವುದಕ್ಕೆ ಸಾರ್ವಜನಿಕರ ಬೆಂಬಲವಿದೆ. ಇದರ ಜೊತೆಗೆ ದುರಂತಕ್ಕೆ ಕಾರಣವಾದ ಈ ಕಾರು ಇದುವರೆಗೆ ನೋಂದಣಿಯಾಗಿಲ್ಲ ಎಂಬುದು ಕೂಡಾ ಗಮನಿಸಬೇಕಾದ ಸಂಗತಿ. ನೋಂದಣಿಯಾಗದ ಕಾರು ಇದುವರೆಗೆ ಕಾರ್ಯನಿರ್ವಹಿಸಲು ಅನುಮತಿ ಕೊಟ್ಟವರಾರು ಎಂಬ ಪ್ರಶ್ನೆ ಈಗ ಪುಟಿದೇಳುತ್ತಿದೆ. ಇದರ ನಡುವೆ ಆತನ ತಂದೆಯನ್ನು ಬಂಧಿಸಲಾಗಿದೆ.
ಕುಡಿದು ವಾಹನವನ್ನು ಓಡಿಸುವುದು ಶಿಕ್ಷಾರ್ಹ ಅಪರಾಧ. ಇದರಲ್ಲಿ ಯಾರಿಗೂ ವಿನಾಯ್ತಿ ಎಂಬುದಿಲ್ಲ. ಆದರೆ, ಈಗಿನ ಪ್ರಕರಣದಲ್ಲಿ ಅಪ್ರಾಪ್ತ ಎಂಬ ವಿಚಾರವನ್ನು ದೊಡ್ಡದು ಮಾಡಿ ರಿಯಾಯ್ತಿ ಪಡೆದಿರುವ ಬೆಳವಣಿಗೆ ಮುಂದೆ ಹಲವರು ರಿಯಾಯ್ತಿ ಪಡೆಯಲು ದಾರಿ ಮಾಡಿಕೊಡುವ ಸಾಧ್ಯತೆಯೂ ಇಲ್ಲದಿಲ್ಲ. ಪ್ರತಿಷ್ಠಿತರು ಎನಿಸಿಕೊಂಡವರು ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿರುವುದು ನಮ್ಮ ಕಣ್ಣೆದುರಿಗೇ ಇದೆ. ಇಂತಹ ಜೈಲು ಪಾಲಾಗಿರುವ ವ್ಯಕ್ತಿಗಳ ಪೈಕಿ ಚಲನಚಿತ್ರ ನಟರು ಹಾಗೂ ಉದ್ಯಮಿಗಳು ಇದ್ದಾರೆ. ನ್ಯಾಯಾಲಯದ ತೀರ್ಪಿನಂತೆ ಈ ಆರೋಪಿಗಳು ನಡೆದುಕೊಳ್ಳುವುದು ರಾಜಮಾರ್ಗವೇ ವಿನಹ ಯಾವುದೇ ಸಬೂಬನ್ನು ಮುಂದಿಟ್ಟು ರಿಯಾಯ್ತಿ ಪಡೆಯುವುದು ತಮ್ಮದಲ್ಲದ ತಪ್ಪಿಗೆ ಪ್ರಾಣ ನೀಗಿಕೊಂಡವರ ಆತ್ಮಕ್ಕೆ ಎಸಗುವ ಘೋರ ಅಪಚಾರ. ಸರ್ಕಾರವಾಗಲೀ ಅಥವಾ ಪೊಲೀಸರಾಗಲಿ ಇಂತಹ ರಿಯಾಯ್ತಿ ವಿನಾಯ್ತಿಗಳಿಗೆ ಮಣೆ ಹಾಕದೆ ಇಂತಹ ಪ್ರಕರಣಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.