ಚನ್ನಮ್ಮ ವೃತ್ತದಲ್ಲಿ “ಹುಬ್ಬಳ್ಳಿ ಕಾ ಮಹಾರಾಜ ಗಣೇಶ’ ವೈಭವ

Advertisement

ಹುಬ್ಬಳ್ಳಿ : ಮರಾಠ ಗಲ್ಲಿಯಿಂದ ಸಾಗಿ ಬಂದ ಹುಬ್ಬಳ್ಳಿ ಕಾ ಮಹಾರಾಜ ಗಣೇಶನನ್ನು ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಜನರು ಕಣ್ತುಂಬಿಕೊಂಡರು.
ಡಿ.ಜೆ ಅಬ್ಬರವಿಲ್ಲದೇ ಬ್ಯಾಂಡ್, ಭಜನೆ, ಜೈಕಾರದಲ್ಲಿಯೇ ಭಕ್ತರು ಸಂಭ್ರಮಿಸಿದರು.
ಮಹಾರಾಜ ಗಣೇಶ ವೀಕ್ಷಣೆಗಾಗಿಯೇ ಕಾದು ನಿಂತಿದ್ದ ಜ‌ನರು ಗಣೇಶ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಂತೆಯೇ ಜೈ ಕಾರ ಹಾಕಿದರು. ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಜನ ಸೆಲ್ಫಿ ಪೋಟೊ ಕ್ಲಿಕ್ಕಿಸಿಕೊಂಡರು.
ಗಣೇಶ ಮೂರ್ತಿ ಮೇಲಿದ್ದ ಕೈದಾರಗಳನ್ನು ಪಡೆಯಲು ನೂಕು ನುಗ್ಗಲಾಯಿತು. 10, 20 ರೂ ಕಾಣಿಕೆ ಕೊಟ್ಟು ಭಕ್ತರು ಕೈದಾರ ಪಡೆದರು.
ಪ್ರಕಾಶಮಾನವಾದ ಭವ್ಯ ಬೆಳಕಿನಲ್ಲಿ ನಿಧಾನವಾಗಿ ಹುಬ್ಬಳ್ಳಿ ಕಾ ಮಹಾರಾಜ ಗಣೇಶ ಸಾಗಿ ಬರುತ್ತಿದ್ದು, ಮಹಾರಾಜ ಎಂಬ ಹೆಸರಿಗೆ ತಕ್ಕಂತೆ ಗೋಚರಿಸಿತು.
ಬೇರೆ ಗಣೇಶ ಮೂರ್ತಿಗಳು ಚನ್ನಮ್ಮ ವೃತ್ತದಿಂದ ಸಾಗಿ ಹಳೆ ಬಸ್ ನಿಲ್ದಾಣ ಮುಂಭಾಗದಿಂದ ಸಾಗಿ ಇಂದಿರಾ ಗ್ಲಾಸ್ ಹತ್ತಿರದ ಬಾವಿಯಲ್ಲಿ ವಿಸರ್ಜನೆಗೊಂಡರೆ ಹುಬ್ಬಳ್ಳಿ ಕಾ ಮಹಾರಾಜ ಗಣೇಶಮೂರ್ತಿ 27 ಅಡಿಗಿಂತಲೂ ಹೆಚ್ಚಿದ್ದರಿಂದ ನೀಲಿಜನ್ ರಸ್ತೆಯಲ್ಲಿ ಸಾಗಲು ಪೊಲೀಸರು ಮಾರ್ಗ ವ್ಯವಸ್ಥೆ ಮಾಡಿದರು.
ನೀಲಿಜಿನ್ ರಸ್ತೆಯಲ್ಲಿ ಕೆಲ ಡಿಶ್, ಫೋನ್ ಕೇಬಲ್ ಗಳನ್ನು ತೆರವುಗೊಳಿಸಿ ಗಣೇಶ ಮೆರವಣಿಗೆ ಸಾಗಲು ಅನುವು ಮಾಡಿಕೊಡಲಾಯಿತು.
ಹುಬ್ಬಳ್ಳಿ ಕಾ ಮಹಾರಾಜಾ ಗಣೇಶ ಚನ್ನಮ್ಮ ವೃತ್ತ ದಾಟಿದ ಬಳಿಕ ಜನರು ಸ್ವಲ್ಪ ಕಡಿಮೆಯಾದರು. ಉಳಿದ ಭಕ್ತರು ಮೆರವಣಿಗೆಯಲ್ಲಿ ಸಾಗಿ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡಿದರು.