ಚರಂಡಿಯಲ್ಲಿ ವಿದ್ಯುತ್ ಕಂಬ..!

Advertisement

ರಬಕವಿ-ಬನಹಟ್ಟಿ: ರಾಜ್ಯ ಹೆದ್ದಾರಿಯಲ್ಲಿನ ವಿದ್ಯುತ್ ಕಂಬಗಳನ್ನು ಚರಂಡಿಯಲ್ಲಿ ನೆಡಲಾಗಿದೆ. ರಸ್ತೆಯ ಪಕ್ಕದಲ್ಲಿಯೇ ಹಾಕಿದ್ದ ಕಂಬಗಳನ್ನು ಹೆಸ್ಕಾಂ ಇಲಾಖೆಯ ಅಧಿಕಾರಿಗಳು ತೆರೆವುಗೊಳಿಸುವ ಕೆಲಸವನ್ನು ಇದುವರೆಗೂ ಮಾಡಿಲ್ಲವೆಂಬ ಅಸಮಾಧಾನ ನಾಗರಿಕರು ವ್ಯಕ್ತಪಡಿಸಿದ್ದಾರೆ.
ಕಾಗವಾಡ-ಕಲಾದಗಿ ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಕಾಮಗಾರಿಯಲ್ಲಿ ರಸ್ತೆ ಅಗಲೀಕರಣವಾಗಿದ್ದು, ವಿದ್ಯುತ್ ಕಂಬಗಳು ಮಾತ್ರ ಚರಂಡಿಯಲ್ಲಿವೆ. ನಗರದ ವೈಭವ ಚಿತ್ರಮಂದಿರ ಬಳಿಯ ನಾಲ್ಕೈದು ವಿದ್ಯುತ್ ಕಂಬಗಳು ಚರಂಡಿಯೊಳಗೇ ಇವೆ.
ಹೂಳು ತೆಗೆಯಲು ತೊಡಕು:
ರಾಜ್ಯ ಹೆದ್ದಾರಿಯ ಚರಂಡಿಯಲ್ಲೇ ಕಂಬಗಳನ್ನು ಅಳವಡಿಸಿರುವದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದಂತಾಗಿದೆ. ಅನೇಕ ಕಡೆ ಸ್ಟಡ್‌ಪೋಲ್(ಸಪೋರ್ಟಿವ್ ಕಂಬ)ಗಳನ್ನು ಚರಂಡಿಗೆ ಹಾಕಲಾಗಿದ್ದು, ಇನ್ನು ಮುಂದೆ ಜೆಸಿಬಿಯಲ್ಲಿ ಚರಂಡಿ ಹೂಳು ತೆಗೆಯುವಲ್ಲೂ ತೊಡಕಾಗಿ ಪರಿಣಮಿಸಲಿದೆ.
ಇಲಾಖೆ ಗಮನಹರಿಸಲಿ:
ಚರಂಡಿ ಬ್ಲಾಕ್ ಆದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗುವದಲ್ಲದೆ, ಪಕ್ಕದಲ್ಲಿಯೇ ಇರುವ ಚಿತ್ರಮಂದಿರ ಮೈದಾನದೊಳಕ್ಕೆ ನೀರು ನಿಲ್ಲುವಂತಾಗಿದೆ. ರಸ್ತೆ ಹದಗೆಡಲು ಇದೂ ಒಂದು ಕಾರಣವಾಗಲಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯು ಗಮನಹರಿಸುವದು ಅಗತ್ಯ. ಗುತ್ತಿಗೆದಾರರು ಚರಂಡಿ ಬಿಟ್ಟು ಅಕ್ಕಪಕ್ಕದಲ್ಲಿ ಕಂಬ ಅಳವಡಿಸಬೇಕೆನ್ನುವದು ಸ್ಥಳೀಯರ ಆಗ್ರಹವಾಗಿದೆ.