ಚಾಕು ತೋರಿಸಿ ನಗ, ನಗದು ದರೋಡೆ

Advertisement


ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮನೆಯಲ್ಲಿದ್ದ ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ನಗ ನಗದು ದರೋಡೆ ಮಾಡಿದ ಘಟನೆ ಗುರುವಾರ ಬೆಳ್ಳಂಬೆಳಿಗ್ಗೆ ಬಂಟ್ವಾಳ ಸಮೀಪದ ವಗ್ಗದಲ್ಲಿ ನಡೆದಿದೆ.
ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕ ಉದ್ಯಾನವನದ ಮುಂಭಾಗದಲ್ಲಿರುವ ಮನೆಯಲ್ಲಿ ಪ್ಲೋರಿನ್ ಪಿಂಟೋ ಮತ್ತು ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದ ವೇಳೆ ಈ ದರೋಡೆ ನಡೆಸಲಾಗಿದ್ದು ಸುಮಾರು ೨.೯೦ ಲಕ್ಷ ರೂ ಮೌಲ್ಯದ ಚಿನ್ನಾಭರಣ, ೩೦ ಸಾವಿರ ರೂ ನಗದು ಹಾಗೂ ಒಂದು ಮೊಬೈಲ್ ಫೋನ್ ಸೇರಿ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ದೋಚಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ ಸುಮಾರು ೬.೩೦ ರ ವೇಳೆ ಮನೆಯ ಬೆಲ್ ಬಾರಿಸಿದ್ದು, ಬಾಗಿಲು ತೆರೆದ ಕೂಡಲೇ ಮನೆಯೊಳಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮನೆಯಲ್ಲಿರುವ ನಗ ನಗದು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದಾಗ ಹೆದರಿ ಕಪಾಟಿನ ಬೀಗದ ಕೀ ನೀಡಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಪ್ಲೋರಿನ್ ಪಿಂಟೋ ಅವರ ಮಗ ಆಸ್ಟಿನ್ ಪಿಂಟೋ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಬಂಟ್ವಾಳ ಗ್ರಾಮಾಂತರ ಪೋಲೀಸ್ ನಿರೀಕ್ಷಕ ಶಿವಕುಮಾರ್, ಠಾಣಾ ಉಪ ನಿರೀಕ್ಷಕ ಹರೀಶ್ ಭೇಟಿ ನೀಡಿದ್ದಾರೆ. ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.