ಚಿಕಿತ್ಸೆ ಬೇಕಾಗಿದೆ 108 ಆ್ಯಂಬುಲೆನ್ಸ ವ್ಯವಸ್ಥೆಗೆ!

ಶಿರಸಿಯ ಪ್ರವಾಸಿ ಮಂದಿರದ ಆವರಣದಲ್ಲಿ ನಿಂತಿರುವ ಆ್ಯಂಬುಲೆನ್ಸಗಳು.
Advertisement

ಶಿರಸಿಯ ಪ್ರವಾಸಿ ಮಂದಿರದ ಆವರಣದಲ್ಲಿ ನಿಂತಿರುವ ಆ್ಯಂಬುಲೆನ್ಸಗಳು.

ನರಸಿಂಹ ಅಡಿ
ಶಿರಸಿ: ಸಾರ್ವಜನಿಕರ ಆರೋಗ್ಯ ಸಮಸ್ಯೆಗೆ ತುರ್ತು ಸೇವೆ ಒದಗಿಸುತ್ತಿದ್ದ ೧೦೮ ವ್ಯವಸ್ಥೆ ಇಂದು ಅವ್ಯವಸ್ಥೆಯ ಆಗರವಾಗಿದೆ. ಶಿರಸಿಯ ಪ್ರವಾಸೀ ಮಂದಿರದ ಆವರಣದಲ್ಲಿ ೨ ಆ್ಯಂಬುಲೆನ್ಸಗಳು ನಿಂತಿವೆ. ಇದರಲ್ಲಿ ಒಂದು ಸೇವೆ ಸ್ಥಗಿತಗೊಳಿಸಿ ದುರಸ್ಥಿ ಕಾಣದೇ ತಿಂಗಳುಗಳಿಂದ ಮಳೆಯಲ್ಲಿ ನೆನೆಯುತ್ತ ನಿಂತಿದ್ದರೆ, ಇನ್ನೊಂದು ಬನವಾಸಿಯ ೧೦೮ ವಾಹನವನ್ನು ಶಿರಸಿಯಲ್ಲಿ ತಾಲೂಕು ಕೇಂದ್ರದ ತುರ್ತು ಸೇವೆಗೆ ಒದಗಿಸಿ ತಾತ್ಕಾಲಿಕವಾಗಿ ಸಮಸ್ಯೆಯಾಗದಂತೆ ಮಾಡಲಾಗಿದೆ ಎನ್ನಲಾಗುತ್ತಿದೆ. ಇದು ಎಷ್ಟು ದಿನ ಓಡುತ್ತವೆ ಎನ್ನುವ ಸ್ಥಿತಿ ಈ ವಾಹನಗಳದ್ದಾಗಿದೆ. ಇವುಗಳ ನಿರ್ವಹಣೆ ಆಗದೇ ಅದಾಗಲೇ ೩ ತಿಂಗಳು ಕಳೆದಿದೆ. ಕೇವಲ ಇಂಧನ ಹಾಕಲಾಗುತ್ತಿದ್ದು, ಬೇರೆ ಯಾವುದೇ ದುರಸ್ಥಿಯೂ ಆಗುತ್ತಿಲ್ಲ.
ಸಿಬ್ಬಂದಿಗೆ ೩ ತಿಂಗಳಿನಿಂದ ವೇತನವನ್ನೂ ನೀಡಲಾಗುತ್ತಿಲ್ಲ. ಈ ದುರವಸ್ಥೆ ಏಕೆ ಎನ್ನುವ ಪ್ರಶ್ನೆ ಸರ್ಕಾರಕ್ಕೆ ಸಾರ್ವಜನಿಕರು ಕೇಳುತ್ತಿದ್ದಾರೆ. ಇದೊಂದು ಹೊರಗುತ್ತಿಗೆ ವ್ಯವಸ್ಥೆ. ಗುತ್ತಿಗೆದಾರರ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎನ್ನಲಾಗುತ್ತಿದೆ. ಅದರ ಹಿಂದಿನ ರಹಸ್ಯ ಬಯಲಾಗಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಶಿರಸಿಯ ಪ್ರವಾಸಿ ಮಂದಿರದ ಆವರಣದಲ್ಲಿ ನಿಂತಿರುವ ಆ್ಯಂಬುಲೆನ್ಸಗಳು.

ಬನವಾಸಿ ಭಾಗಕ್ಕೂ ಸಮರ್ಪಕ ತುರ್ತು ಸೇವೆ ಸಿಗದ ಸ್ಥಿತಿ ಉಂಟಾಗಿದೆ. ಶಿರಸಿ ನಗರದಿಂದ ೪೫ಕಿ.ಮೀ. ವ್ಯಾಪ್ತಿಯ ಹಳ್ಳಿಗಾಡಿಗೆ ಈ ೧೦೮ ವಾಹನ ತನ್ನ ಸೇವೆ ಒದಗಿಸುತ್ತಾ ಬಂದಿದ್ದು, ಮಳೆಗಾಲದ ಈ ಸಂದರ್ಭದಲ್ಲಿಯೂ ನಿರ್ವಹಣೆ ಇಲ್ಲದೇ ಓಡಿಸುತ್ತಿರುವುದು ರೋಗಿಗಳೊಂದಿಗೆ, ಅದರಲ್ಲೂ ೧೦೮ ವ್ಯವಸ್ಥೆಯ ತುರ್ತು ಸೇವೆ ನಂಬಿ ಕರೆ ಮಾಡುವವರ ಪ್ರಾಣದೊಂದಿಗೆ ಚೆಲ್ಲಾಟವಾಡಿದಂತೆಯೇ. ಈ ವಾಹನ ಎಲ್ಲಿ ನಿಲ್ಲುವುದೋ ಎಂದು ಹೇಳುವುದೇ ಅಸಾಧ್ಯವಾದಷ್ಟು ಚಿಂತಾಜನಕ ಸ್ಥಿತಿ ಈ ವಾಹನದ್ದಾಗಿದೆ.
ನಂಬಿಕೆಗೆ ಕಷ್ಟವಾದ ಸ್ಥಿತಿಯಲ್ಲಿರುವ ಈ ವಾಹನಗಳಲ್ಲಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿಯೂ ಈ ವಿಷಯಗಳು ಮಾಧ್ಯಮದೆದುರು ಬಂದರೆ ತಮ್ಮ ಉದ್ಯೋಗಕ್ಕೆ ಸಂಚಕಾರ ಅಥವಾ ವರ್ಗಾವಣೆಯ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎನ್ನುವ ಭೀತಿಯಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಸಾರ್ವಜನಿಕರಿಗೆ ಈ ವಾಹನಗಳ ಬಗ್ಗೆ ತಿಳಿಯಬಾರದೆಂದು ಇಲ್ಲಿನ ಪ್ರವಾಸೀ ಮಂದಿರದ ಮೂಲೆಯಲ್ಲಿ ಕೆಟ್ಟುನಿಂತ ೧೦೮ ವಾಹನ ನಿಲ್ಲಿಸಲಾಗಿದ್ದು, ಅದರ ಸನಿಹದಲ್ಲಿಯೇ ಸದ್ಯ ಅಂತೂ ಓಡಾಡುತ್ತಿರುವ ಬನವಾಸಿಯ ಎಲ್ಲ ಸಿಬ್ಬಂದಿಗೂ ಇಲ್ಲಿಯೇ ಕರ್ತವ್ಯಕ್ಕೆ ಆದೇಶ ನೀಡಲಾಗಿದೆ ಎನ್ನಲಾಗುತ್ತಿದೆ.
ಯಾವುದೇ ದುರ್ಘಟನೆ ಸಂಭವಿಸುವ ಮೊದಲು ಈ ವಾಹನ ದುರಸ್ಥಿ ಅಥವಾ ಬದಲಾವಣೆ ಮತ್ತು ಸಿಬ್ಬಂದಿಗೆ ಸೂಕ್ತ ಸಲಕರಣೆ ಹಾಗೂ ವೇತನ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸುವತ್ತ ಸರ್ಕಾರ ಮುಂದಾಗಬೇಕಿದೆ.