ಚುನಾವಣೆಗೆ ಮುನ್ನ `ಕೆಂಡದ ಮಳೆ’

Advertisement

ಸಾರ್ವಜನಿಕ ಬದುಕು ಎಂದ ಮೇಲೆ ಅಭಿಪ್ರಾಯ ಭೇದ ಸ್ವಾಭಾವಿಕ. ಇದರ ವಿಸ್ತರಣೆಯ ಭಾಗವೇ ಭಿನ್ನಮತ. ಹಾಗೆ ನೋಡಿದರೆ, ಭಿನ್ನಮತವೂ ಕೂಡಾ ಜನತಂತ್ರ ಪದ್ಧತಿಯ ಮೂಲ ಧಾತುವೇ. ಭಿನ್ನಮತ ಇಲ್ಲದ ಜನತಂತ್ರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತಿನಲ್ಲಿ ಅಡಗಿರುವುದು ವಿವಿಧ ಅಭಿಮತಗಳ ಕ್ರೋಡೀಕರಿಸಿ ಕಾರ್ಯಸಾಧ್ಯವಾದ ಹಾಗೂ ಕಾರ್ಯ ಯೋಗ್ಯವಾದ ಒಂದು ನಿರ್ಧಾರಕ್ಕೆ ಸಂಧಾನ ಮಾರ್ಗದ ಮೂಲಕ ಬರುವ ಒಂದು ಪ್ರಕ್ರಿಯೆಯೇ ಜನತಂತ್ರದ ಸೊಬಗು. ಚುನಾವಣೆಯ ಮುನ್ನಾ ದಿನಗಳಲ್ಲಿ ವೈಚಾರಿಕತೆಯನ್ನು ಗಾಳಿಗೆ ತೂರಿ ಭಿನ್ನಮತದ ಸ್ವರೂಪವನ್ನು ವೈಯಕ್ತಿಕ ಹಿತ ಸಾಧನೆಗೆ ಬಳಸಿಕೊಳ್ಳುವ ಮಾರ್ಗ ಹೊಸದು ಅಲ್ಲ ಹಾಗೂ ಮುಂದೆ ನಡೆಯುವುದಿಲ್ಲ ಎಂದು ಯಾರೊಬ್ಬರೂ ಹೇಳಲಾಗುವುದಿಲ್ಲ. ಭಾರತದಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಕೆಂಡದ ಮಳೆಯ ವಾತಾವರಣ ಸೃಷ್ಟಿಯಾಗಿರುವುದು ಚುನಾವಣೆ ಎಂತಹ ಪೈಪೋಟಿಗೆ ತಿರುಗಿದೆ ಎಂಬುದರ ದಿಕ್ಸೂಚಿ. ಬಿಜೆಪಿಯಲ್ಲಿ ಈ ಸ್ಥಿತಿ ತಲೆದೋರಲು ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಅನುಸರಿಸಿರುವ ಮಾರ್ಗೋಪಾಯ. ಅರ್ಥಾತ್ ಟಿಕೆಟ್ ವಂಚಿತರು ಹಾಗೂ ಅವರ ಬೆಂಬಲಿಗರು ಸಿಡಿದೇಳುತ್ತಿರುವ ಬೆಳವಣಿಗೆ ನಿಗ್ರಹಿಸಿಕೊಳ್ಳಲು ಈಗ ಬಿಜೆಪಿ ಮುಖಂಡರು ಏದುಸಿರು ಬಿಡಬೇಕಾದ ಸ್ಥಿತಿ. ಕಾಂಗ್ರೆಸ್ ಪಕ್ಷದಲ್ಲಿ ತಲೆದೋರಿರುವ ಕೆಂಡದ ಮಳೆಯ ಸ್ಥಿತಿಯ ಕಾರಣವೇ ಬೇರೆ. ಅಭ್ಯರ್ಥಿಗಳ ಆಯ್ಕೆಗಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕತ್ವದಲ್ಲಿ ರೂಪುಗೊಂಡಿರುವ ಇಂಡಿಯಾ ಒಕ್ಕೂಟದ' ದ ಅಂಗಪಕ್ಷಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುವ ಬೆಳವಣಿಗೆ ಸಹಜವಾಗಿಯೇ ಕೆಂಡದ ಮಳೆಯ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಇಂತಹ ವಾತಾವರಣವನ್ನು ಜೀರ್ಣಿಸಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಒಮ್ಮತದ ಮಾರ್ಗವನ್ನು ಕಂಡುಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ ಎರಡು ಪಕ್ಷಗಳ ಸೋಲು-ಗೆಲುವು ನಿಂತಿದೆ. ನಿಜ, ಬಿಜೆಪಿಯದು ಒಂದು ರೀತಿಯಲ್ಲಿ ಗರ್ಭಗುಡಿಯಲ್ಲಿ ಇತ್ಯರ್ಥವಾಗಬೇಕಾಗಿರುವ ವಿಚಾರ. ಪ್ರತಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಈ ಬಿಕ್ಕಟ್ಟಿನ ಮೂಲ. ಇದಲ್ಲದೇ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷ ರೂಪಿಸಿಕೊಂಡಿರುವ ಮಾರ್ಗಸೂಚಿಯ ಬೆಳಕಿನಲ್ಲಿ ಆಕಾಂಕ್ಷಿಗಳ ಕುಲಗೋತ್ರಗಳನ್ನು ಪರಿಶೀಲಿಸಿದಾಗ ಆಶಾದಾಯಕ ಚಿತ್ರ ಒದಗದೇ ಹೋದರೆ ಸಹಜವಾಗಿಯೇ ಟಿಕೆಟ್ ಕೊಡುವುದು ದುಸ್ಸಾಹಸವಾಗುತ್ತದೆ. ಆದರೆ ಆಕಾಂಕ್ಷಿಗಳಿಗೆ ಸಾಹಸ ಹಾಗೂ ದುಸ್ಸಾಹಸಗಳ ವ್ಯತ್ಯಾಸವನ್ನು ಪರಿಗಣಿಸುವ ವಿವೇಚನೆ ಈಗ ಮರೆತು ಹೋಗಿರುವ ಸಾಧ್ಯತೆ ಹೆಚ್ಚಿವೆ. ಕರ್ನಾಟಕದ ಪರಿಸ್ಥಿತಿಗೆ ಬರುವುದಾದರೆ, ಟಿಕೆಟ್ ವಂಚಿತರು ದಿನಕ್ಕೊಂದು ರೀತಿಯ ಅತೃಪ್ತಿ ಪ್ರದರ್ಶನದ ಮಾರ್ಗವನ್ನು ಅನುಸರಿಸುತ್ತಿದ್ದರೆ, ಇನ್ನೂ ಬೇಲಿಯ ಮೇಲೆ ಪರಿಸ್ಥಿತಿ ಇರುವುದನ್ನು ಗಮನಿಸಿರುವ ಆಕಾಂಕ್ಷಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಖಂಡರ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಹಿಡಿದು ನಾನಾ ರೀತಿಯ ಒತ್ತಡದ ಮಾರ್ಗಗಳನ್ನು ಅನುಸರಿಸುತ್ತಿರುವುದು ಲೋಕವಿದಿತ. ತಮ್ಮ ಮಗನಿಗೆ ಹಾವೇರಿ ಕ್ಷೇತ್ರದಲ್ಲಿ ಟಿಕೆಟ್ ಕೊಡಲೇಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪತ್ರಿಕಾಗೋಷ್ಠಿಯ ಮೂಲಕ ಬಂಡಾಯದ ಮುನ್ಸೂಚನೆಯನ್ನು ನೀಡುತ್ತಿರುವುದು ಒಂದು ಕಡೆಯಾದರೆ, ಟಿಕೆಟ್ ಕೈತಪ್ಪುವ ಸಾಧ್ಯತೆಯನ್ನು ಗುರುತಿಸಿರುವ ಮೈಸೂರಿನ ಪ್ರತಾಪ ಸಿಂಹ ಅತ್ಯಂತ ಎಚ್ಚರದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆಯಿರುವ ರಾಜಮನೆತನದ ಯದುವೀರ್ ಅವರನ್ನು ಹವಾನಿಯಂತ್ರಣ ಕೊಠಡಿ ಬಿಟ್ಟು ಜನರೊಂದಿಗೆ ವ್ಯವಹರಿಸಲು ಬಂದರೆ ಸಂತೋಷ ಎಂದು ವಿಡಂಬನಾತ್ಮಕವಾಗಿ ಹೇಳಿರುವುದಲ್ಲದೇ ೨೫ ಮಂದಿ ಬಿಜೆಪಿ ಸಂಸದರ ಪೈಕಿ ನನ್ನಂತಹ ಹಿಂದುತ್ವದ ವಾದಿ ಯಾರೂ ಇಲ್ಲ ಎಂದು ಸವಾಲು ಹಾಕುವ ರೀತಿಯಲ್ಲಿ ಹೇಳಿರುವುದು ಹಲವಾರು ಮಂದಿಗೆ ಕೋಪ ಉಕ್ಕಿಸಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಆಂತರಿಕ ಬೆಳವಣಿಗೆಯನ್ನು ವಿವರಿಸುವ ಆತುರದಲ್ಲಿ ವಿಜಯಪುರದ ಶಾಸಕ ಬಸವನಗೌಡ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಗೇಲಿಯ ಧಾಟಿಯಲ್ಲಿ ಹಂಗಿಸಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಎತ್ತಿ ತೋರಿಸಿದೆ. ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಹೈಕಮಾಂಡ್ ಕಾತರಿಪಡಿಸಿಕೊಂಡಿದೆ ಎಂದು ಹೆಸರು ಬಹಿರಂಗಪಡಿಸದೆ ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಟೀಕಿಸಿರುವುದು ಪರಿಸ್ಥಿತಿಯ ಇನ್ನೊಂದು ಮುಖ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವ ಮನಸ್ಸು ಇದ್ದಂತಿಲ್ಲ. ಧಾರವಾಡ ಇಲ್ಲವೇ ಹಾವೇರಿ ಕ್ಷೇತ್ರದ ಮೇಲೆ ಆಸಕ್ತಿ ಸೂಚಿಸಿರುವ ಶೆಟ್ಟರ್ ಅವರು ಅರ್ಥಗರ್ಭಿತವಾಗಿ ತಮ್ಮ ನಿಲುವನ್ನು ಪ್ರತಿಪಾದಿಸುತ್ತಿರುವಾಗಲೇ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಕೈತಪ್ಪುವ ಸಾಧ್ಯತೆಗಳನ್ನು ಗಮನಿಸಿಬೇಡ ಎಂದವನನ್ನು ಬನ್ನಿ ಬನ್ನಿ ಎಂದು ಕರೆದು ಈಗ ಇಲ್ಲ ಎಂದು ಹೇಳುತ್ತಿರುವುದು ಯಾವ ನ್ಯಾಯ’ ಎಂದು ಆತ್ಮೀಯರ ಜೊತೆ ಅತೃಪ್ತಿ ಹಂಚಿಕೊಂಡಿರುವ ಬೆಳವಣಿಗೆ ಯಾವ ರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ.
ಎಲ್ಲವೂ ಅಂದುಕೊಂಡಂತೆಯೇ ಆಗುವುದಾದರೆ ಒಂದೆರಡು ದಿನಗಳಲ್ಲಿ ಚುನಾವಣೆಯ ಘೋಷಣೆ ಹೊರಬೀಳಬೇಕು. ಅಷ್ಟರ ವೇಳೆಗೆ ಅಭ್ಯರ್ಥಿಗಳ ಆಯ್ಕೆಯ ರಂಪಾಟ ಎಲ್ಲವೂ ಮುಗಿದು ಬಂಡಾಯದ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ. ಏನೇ ಆದರೂ ರಣಬಿಸಿಲಿನಲ್ಲಿ ಈಗಾಗಲೇ ದೇಶದಾದ್ಯಂತ ಕೆಂಡದ ಮಳೆಯ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಚುನಾವಣೆ ಕಣದಲ್ಲಿಯೂ ಕೆಂಡದ ಮಳೆಯ ಸ್ಥಿತಿ ಆವರಿಸಿರುವುದು ಹೊಸ ರಾಜಕೀಯ ಭವಿಷ್ಯಕ್ಕೆ ಮುನ್ನುಡಿಯಾಗಿದೆ.