ಚುನಾವಣೆ ಆಟಕ್ಕೆ ಮೊದಲೇ ಅಂಪೈರ್ ಹಠಾತ್ ನಿರ್ಗಮನ

Advertisement

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಠಾತ್ತನೇ ಚುನಾವಣಾ ಆಯೋಗಕ್ಕೆ ಕುದುರೆಗಳ ಮುಂದೆ ರಥವನ್ನು ಸಜ್ಜುಗೊಳಿಸಿರುವಂತಹ ಸ್ಥಿತಿ. ರಥದ ಮುಂದಿದ್ದರೆ ಕುದುರೆಗಳು ಅದನ್ನು ಎಳೆಯಬಹುದು. ರಥವೇ ಮುಂದಿದ್ದರೆ ಕುದುರೆಗಳು ಅಸಹಾಯಕ. ಚುನಾವಣಾ ಆಯೋಗದ ಆಯುಕ್ತ ಅರುಣ್ ಗೋಯಲ್ ಹಠಾತ್ತನೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪರಿಣಾಮವಾಗಿ ಕುದುರೆ ಹಾಗೂ ರಥದ ಪರಿಸ್ಥಿತಿ ಚುನಾವಣಾ ಆಯೋಗಕ್ಕೆ ಬಂದಿದೆ. ಈಗಿರುವ ಸ್ಥಿತಿಯಲ್ಲಿ ಹೊಸ ಸದಸ್ಯರ ನೇಮಕಕ್ಕೆ ಅವಕಾಶವೇನೋ ಮುಕ್ತವಾಗಿದೆ. ಆದರೆ, ಚುನಾವಣೆಯ ನೆರಳಿನಲ್ಲಿ ಚುನಾವಣಾ ಆಯೋಗಕ್ಕೆ ಹೊಸ ಸದಸ್ಯರ ನೇಮಕ ಮಾಡುವುದು ಎಷ್ಟೇ ಸಮರ್ಪಕವಾಗಿದ್ದರೂ ಅನುಮಾನಕ್ಕೆ ಎಡೆ ಮಾಡಿಕೊಡುವ ಎಲ್ಲಾ ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ರಾಜಕೀಯ ಪರಿಸ್ಥಿತಿಯೇ ಹಾಗೆ. ಇಂತಹ ಸಂದರ್ಭದಲ್ಲಿ ಮೇ ತಿಂಗಳ ಒಳಗೆ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆನ್ನು ಮುಗಿಸಿ ಹೊಸ ಸರ್ಕಾರದ ಪ್ರತಿಷ್ಠಾಪನೆಗೆ ಕಾರ್ಯಸೂಚಿಯನ್ನು ಜಾರಿಗೊಳಿಸಬೇಕಾಗಿರುವ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಒಂದು ರೀತಿಯಲ್ಲಿ ಬೆಟ್ಟದಂತಹ ಸವಾಲು ಎದುರಾಗಿದೆ.
ಈಗಿರುವ ಸಂದರ್ಭದಲ್ಲಿ ಈ ವಾರಾಂತ್ಯದ ಒಳಗೆ ಹೊಸ ಆಯುಕ್ತರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಕಾನೂನಿನ ಪ್ರಕಾರ ಭಾರತದ ಚುನಾವಣಾ ಆಯೋಗಕ್ಕೆ ಒಬ್ಬರು ಪ್ರಧಾನ ಆಯುಕ್ತರು ಹಾಗೂ ಇಬ್ಬರು ಆಯುಕ್ತರು ಸದಸ್ಯರಾಗಿರುತ್ತಾರೆ. ಈಗಾಗಲೇ ನಿವೃತ್ತಿಯಿಂದ ಅನೂಪ್ ಚಂದ್ರಪಾಂಡೆ ಪೆಬ್ರವರಿಯಲ್ಲೇ ತೆರವಾಗಿದೆ. ಅರುಣ್ ಗೋಯಲ್ ರಾಜೀನಾಮೆಯಿಂದ ಇಬ್ಬರು ಆಯುಕ್ತರ ಸ್ಥಾನ ತೆರವಾಗಿರುವ ಪರಿಣಾಮವಾಗಿ ಪ್ರಧಾನ ಕಮೀಷನರ್ ಒಬ್ಬರೇ ಚುನಾವಣಾ ಆಯೋಗದ ಆಗುಹೋಗುಗಳನ್ನು ನಿರ್ವಹಿಸಬೇಕಾಗಿದೆ. ಸುಪ್ರೀಂಕೋರ್ಟ್ನಲ್ಲಿ ಈ ಹಿಂದೆ ವ್ಯಕ್ತವಾಗಿರುವ ಅಭಿಪ್ರಾಯದ ಪ್ರಕಾರ ಮೂವರು ಸದಸ್ಯರ ಚುನಾವಣಾ ಆಯೋಗ ರಚನೆಯಾಗುವುದು ಎಲ್ಲಾ ದೃಷ್ಟಿಕೋನದಿಂದ ಸರಿಯಾದ ಕ್ರಮ. ಹೀಗಾಗಿ ಈಗ ಎದುರಾಗಿರುವ ಲೋಕಸಭಾ ಚುನಾವಣೆ ನಿರ್ವಹಣೆಗೆ ಶರವೇಗದಲ್ಲಿ ಇಬ್ಬರು ಆಯುಕ್ತರನ್ನು ನೇಮಕ ಮಾಡುವ ಕ್ರಿಯೆ ಜರುಗಬೇಕಾಗಿದೆ.
ಅಂದ ಹಾಗೆ ಅರುಣ್ ಗೋಯಲ್ ರಾಜೀನಾಮೆಗೆ ಕಾರಣ ಏನೆಂಬುದು ಇನ್ನೂ ಖಚಿತವಾಗಿಲ್ಲ. ವೈಯಕ್ತಿಕ ಕಾರಣ ಎಂಬುದನ್ನು ಬಹುಜನ ನಂಬುತ್ತಿಲ್ಲ. ಪ್ರಧಾನ ಕಮೀಷನರ್ ರಾಜೀವ್ ಕುಮಾರ್ ಜೊತೆಗಿನ ಭಿನ್ನಾಭಿಪ್ರಾಯವೇ ರಾಜೀನಾಮೆಗೆ ಕಾರಣ ಎಂಬ ಮಾತುಗಳೂ ಚಲಾವಣೆಯಲ್ಲಿವೆ. ಪಂಜಾಬ್ ಶ್ರೇಣಿಯ ಐಎಎಸ್ ಅಧಿಕಾರಿಯಾಗಿದ್ದ ಅರುಣ್ ಗೋಯಲ್ ಅವರನ್ನು ಈ ಹಿಂದೆ ಚುನಾವಣಾ ಆಯೋಗಕ್ಕೆ ಶರವೇಗದಲ್ಲಿ ನೇಮಕಾತಿ ಮಾಡಿದ ಕ್ರಮವನ್ನು ಸ್ವತಃ ಸುಪ್ರಿಂಕೋರ್ಟ್ ಬುಲೆಟ್ ಟ್ರೈನ್ ವೇಗದಲ್ಲಿ ಕಡತ ವಿಲೇವಾರಿಯಾಗಿ ನೇಮಕಾತಿ ಮಾಡಿರುವುದು ಅಚ್ಚರಿಯ ಸಂಗತಿ' ಎಂದು ಉದ್ಗರಿಸಿತ್ತು. ಆಗ ಸಾಕಷ್ಟು ಪ್ರಮಾಣದಲ್ಲಿ ಟೀಕೆ ಟಿಪ್ಪಣಿಗಳೂ ಹರಿದಾಡಿದ್ದವು. ಈಗ ರಾಜೀನಾಮೆ ಸಂದರ್ಭದಲ್ಲಿಯೂ ಕೂಡಾ ಇದೇ ರೀತಿಯ ಮಾತುಗಳು ಮತ್ತೆ ಚಲಾವಣೆಗೆ ಬಂದಿವೆ. ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕಾತಿ ವಿಚಾರ ಕುತೂಹಲ ಕೆರಳಿಸಲು ಕಾರಣಗಳು ಉಂಟು. ಮೊದಲಿದ್ದ ಶಾಸನ ಬದಲಾಯಿಸಿ ಹೊಸ ಶಾಸನವನ್ನು ರೂಪಿಸಲಾಗಿದೆ. ಹಿಂದಿನ ಶಾಸನದಲ್ಲಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಸಮಿತಿಯ ಮಂಡಳಿಯ ಸದಸ್ಯರಾಗಿದ್ದರು. ಆದರೆ, ಈಗ ಈ ಅಂಶವನ್ನು ಬದಲಾಯಿಸಲಾಗಿದೆ. ಈ ಆಯ್ಕೆ ಸಮಿತಿಯಲ್ಲಿ ಪ್ರಧಾನಿಯವರು ಅಧ್ಯಕ್ಷರು. ಲೋಕಸಭೆಯ ಪ್ರತಿಪಕ್ಷದ ನಾಯಕರು ಹಾಗೂ ಪ್ರಧಾನಿಯವರುನೇಮಕ ಮಾಡುವ ಒಬ್ಬ ಸಂಪುಟ ದರ್ಜೆ ಸಚಿವರು ಈ ಸಮಿತಿಯ ಸದಸ್ಯರಾಗಿರುವರು. ಹೀಗಾಗಿ ಆಯುಕ್ತರ ನೇಮಕಾತಿ ಕುತೂಹಲ ದಾಟಿ ರಾಜಕೀಯದ ಆಳ ಆಗಲಗಳ ಕಡೆ ಹೆಜ್ಜೆ ಹಾಕುತ್ತಿದೆ. ಹಿಂದೆ ಚುನಾವಣಾ ಆಯೋಗಕ್ಕೆ ಒಬ್ಬರೇ ಪ್ರಧಾನ ಕಮಿಷನರ್ ಇದ್ದ ಕಾಲವಿತ್ತು. ಟಿ.ಎನ್. ಶೇಷನ್ ಪ್ರಧಾನ ಕಮಿಷನರ್ ಆಗಿದ್ದಾಗ ಭುಗಿಲೆದ್ದ ಸಂಘರ್ಷದ ವಾತಾವರಣದಲ್ಲಿ ಆಗಿನ ಪಿ.ವಿ. ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಇಬ್ಬರು ಆಯುಕ್ತರ ಸ್ಥಾನವನ್ನು ಸೃಷ್ಟಿಸಿ ಮೂವರು ಸದಸ್ಯ ಬಲದ ಆಯೋಗವನ್ನಾಗಿ ಪರಿವರ್ತಿಸಿತು. ಇದರಿಂದ ಜನತಂತ್ರ ಮಾರ್ಗದಲ್ಲಿ ಚುನಾವಣಾ ಕೆಲಸ ಕಾರ್ಯಗಳ ನೀತಿಯನ್ನು ರೂಪಿಸಲು ಸಾಧ್ಯವಾಯಿತು. ಈಗ ಹಾಗೊಮ್ಮೆ ಏನಾದರೂ ಆಯುಕ್ತರ ನೇಮಕಾತಿ ಆಗದೇ ಹೋದರೆ ಮತ್ತೆ ಏಕಸದಸ್ಯ ಬಲದ ಪ್ರಧಾನ ಆಯುಕ್ತರೇ ಚುನಾವಣೆಯ ಸಮಸ್ತ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಕೆಲವರು ವ್ಯಂಗ್ಯವಾಗಿ ಹೇಳುವಂತೆಒಂದು ದೇಶ-ಒಂದು ಚುನಾವಣೆ – ಏಕಸದಸ್ಯ ಬಲದ ಚುನಾವಣಾ ಆಯೋಗ’ ಎಂಬ ಮಾತು ನಿಜವಾದರೂ ಅಚ್ಚರಿಯಲ್ಲ.