ಚುನಾವಣೆ ದೇಣಿಗೆಗೆ ಕಾಣದ ಲಗಾಮು

ಸಂಪಾದಕೀಯ
Advertisement

ಕೇಂದ್ರ ಚುನಾವಣೆ ಆಯೋಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಯಾವುದೇ ರಾಜಕೀಯ ಪಕ್ಷಕ್ಕೆ ೨ ಸಾವಿರ ರೂ.ಗಳಿಗಿಂತ ಹೆಚ್ಚು ದೇಣಿಗೆ ನೀಡಿದಲ್ಲಿ ಅದು ಬಹಿರಂಗಗೊಳ್ಳಬೇಕು. ಅದಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಸೂಚಿಸಿದೆ. ಈಗ ವಿದೇಶದಿಂದ ರಾಜಕೀಯ ಪಕ್ಷಗಳಿಗ ದೇಣಿಗೆ ನೀಡಲು ಅವಕಾಶವಿದೆ. ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಹೆಚ್ಚು ದೇಣಿಗೆ ಬರುತ್ತದೆ. ಅದೇರೀತಿ ಪ್ರಮುಖ ಪ್ರತಿಪಕ್ಷಕ್ಕೂ ಸಾರ್ವಜನಿಕ ದೇಣಿಗೆ ಸಿಗುತ್ತದೆ. ಆಡಳಿತ ಪಕ್ಷ ಬೇರೆ ರಾಜಕೀಯ ಪಕ್ಷಗಳಿಗೆ ಬಂದ ದೇಣಿಗೆಯ ವಿವರಗಳನ್ನು ಪಡೆಯಲು ಅವಕಾಶವಿದೆ. ಪ್ರತಿ ೫ ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆ ಕಾಲದಲ್ಲಿ ಚುನಾವಣೆ ವೆಚ್ಚ ಅಧಿಕಗೊಳ್ಳುತ್ತ ಹೋಗುತ್ತಿದೆ. ಚುನಾವಣೆ ಆಯೋಗ ಪ್ರತಿ ಅಭ್ಯರ್ಥಿಯ ವೆಚ್ಚಕ್ಕೆ ಮಿತಿ ಹೇರಿದೆ. ಆದರೆ ರಾಜಕೀಯ ಪಕ್ಷಗಳ ವೆಚ್ಚಕ್ಕೆ ಮಿತಿ ಇಲ್ಲ. ೨೦೧೯ರ ಚುನಾವಣೆಯಲ್ಲಿ ಒಟ್ಟು ೬೦ ಸಾವಿರ ಕೋಟಿ ರೂ. ವೆಚ್ಚವಾಗಿದೆ ಎಂದು ಸಿಎಂಎಸ್ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿಸಿದೆ. ಇದರಲ್ಲಿ ಅಭ್ಯರ್ಥಿಗಳು ಪಕ್ಷದ ಟಿಕೆಟ್ ಪಡೆಯಲು ನಡೆಸುವ ವೆಚ್ಚ ಸೇರಿಲ್ಲ.
ಈಗ ಚುನಾವಣೆ ಬಾಂಡ್‌ಗಳು ಚಾಲ್ತಿಯಲ್ಲಿವೆ. ಇದರಿಂದ ಆಡಳಿತ ಪಕ್ಷಕ್ಕೆ ಅನುಕೂಲವಾಗಿದೆ. ಅದರಲ್ಲೂ ವಿದೇಶಿ ಕಾರ್ಪೊರೇಟ್ ಕಂಪನಿಗಳು ದೇಣಿಗೆಯನ್ನು ಬೋಗಸ್ ಕಂಪನಿಗಳ ಮೂಲಕ ನೀಡುತ್ತಿವೆ. ಒಂದು ದೇಶದ ಚುನಾವಣೆ ಪ್ರಕ್ರಿಯೆಯನ್ನು ಬೇರೆ ದೇಶದ ಶಕ್ತಿಗಳು ನಿಯಂತ್ರಿಸಲು ಸಾಧ್ಯ ಎಂಬುದು ಆತಂಕದ ವಿಷಯ. ಫ್ರಾನ್ಸ್‌ನಲ್ಲಿ ಅಲ್ಲಿಯ ಅಧ್ಯಕ್ಷರು ಬೇರೆ ದೇಶದ ನೆರವು ಪಡೆದಿರು ಎಂದು ಹೇಳಲಾಗಿದೆ. ಅದೇರೀತಿ ಅಮೆರಿಕದ ಟ್ರಂಪ್ ಚುನಾವಣೆಯಲ್ಲಿ ರಷ್ಯಾದ ಕೈವಾಡವಿತ್ತು ಎಂಬುದು ಅಲ್ಲಿಯ ಜನರಲ್ಲಿ ಆತಂಕ ಮೂಡಿಸಿತ್ತು. ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ನಮ್ಮ ಪ್ರಜೆಗಳು ತಮ್ಮ ಮತ ಚಲಾಯಿಸಲು ಸರ್ವತಂತ್ರ ಸ್ವತಂತ್ರರು. ಆದರೆ ವಿದೇಶಿ ಕಂಪನಿಗಳ ಪ್ರಭಾವ ಅಧಿಕಗೊಂಡಲ್ಲಿ ನಿಜವಾದ ಸ್ವಾತಂತ್ರ‍್ಯ ಉಳಿಯುವುದಿಲ್ಲ. ಸುಪ್ರೀಂ ಕೋರ್ಟ್ ಚುನಾವಣೆ ವೆಚ್ಚ ಏರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈಗ ಎಲ್ಲ ಸರ್ಕಾರಗಳು ಚುನಾವಣೆಗೆ ಮುನ್ನ ಮತದಾರರಿಗ ಹಲವು ಉಚಿತ ಕೊಡುಗೆಗಳನ್ನು ನೀಡುವುದಾಗಿ ಭರವಸೆಗಳನ್ನು ನೀಡುತ್ತಿವೆ. ಇವುಗಳು ಬಜೆಟ್ ಮೇಲೆ ಪ್ರಭಾವ ಬೀರಲಿದೆ. ಇದನ್ನು ನಿಯಂತ್ರಿಸಲು ತಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗ ಹೇಳಿದೆ. ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಮತದಾರರಿಗೆ ನೀಡುವ ಕೊಡುಗೆಗಳನ್ನು ಮುಂಗಡವಾಗಿ ಕೊಡುತ್ತಿವೆ. ಇವುಗಳು ಚುನಾವಣೆ ನೀತಿ ಸಂಹಿತೆಗೆ ಬರುವುದಿಲ್ಲ. ಈಗ ಔಷಧ ತಯಾರಿಕೆ, ರಿಯೆಲ್ ಎಸ್ಟೇಟ್, ಅಬ್ಕಾರಿ ಲಾಬಿಗಳು ಚುನಾವಣೆ ಮೇಲೆ ಹಿಡಿತ ಸಾಧಿಸಲು ಹೊರಟಿವೆ. ಪ್ರತಿ ಚುನಾವಣೆಯಲ್ಲಿ ೨ ಶತಕೋಟಿ ರೂ.ಗಳನ್ನು ರಾಜಕೀಯ ಪಕ್ಷಗಳು ವೆಚ್ಚ ಮಾಡುತ್ತಿವೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಸರ್ಕಾರ ೨೦೧೭ ರಲ್ಲಿ ನೋಟು ರತಿ ಮಾಡಿದರೂ ಚುನಾವಣೆ ವೆಚ್ಚ ಕಡಿತಗೊಳಿಸಲು ಸಾಧ್ಯವಾಗಲಿಲ್ಲ. ಚುನಾವಣೆ ಬಾಂಡ್‌ಗಳಿಗೆ ದೇಣಿಗೆ ನೀಡಲು ಕಾರ್ಪೊರೇಟ್ ಸಂಸ್ಥೆಗಳು ನಿರ್ದೇಶಕರ ಮಂಡಳಿ ಅನುಮೋದನೆ ಪಡೆಯುವುದು ಬೇಕಿಲ್ಲ. ೨೦೧೧-೨೦೧೪ ರಲ್ಲಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದ ೨೫೦೦ ರಾಜಕಾರಣಿಗಳು ಜನರಿಂದ ದೇಣಿಗೆ ಪಡೆದಿರುವುದು ಬಹಿರಂಗಗೊಂಡಿದೆ. ಶೇಕಡ ೩೦ ರಷ್ಟು ಅಭ್ಯರ್ಥಿಗಳು ಸಾರ್ವಜನಿಕರ ಹಣ ಪಡೆದುಕೊಂಡಿರು ಎಂದು ವರದಿ ತಿಳಿಸಿದೆ. ೨೦೧೩ ರಲ್ಲಿ ಚುನಾವಣೆಗೆ ಆದ ಒಟ್ಟು ವೆಚ್ಚಕ್ಕಿಂತ ೪ ಪಟ್ಟು ಹೆಚ್ಚು ವೆಚ್ಚ ನಂತರದ ಚುನಾವಣೆಗಳಲ್ಲಿ ನಡೆದಿದೆ ಎಂಬುದು ಅಧ್ಯಯನದಿಂದ ಸ್ಪಷ್ಟಗೊಂಡಿದೆ. ಚೆನ್ನೈನಲ್ಲಿ ಚುನಾವಣೆ ಅಕ್ರಮ ೨೦೧೭ರಲ್ಲಿ ಮಿತಿಮೀರಿದಾಗ ಚುನಾವಣೆ ಆಯೋಗ ಒಂದು ಕ್ಷೇತ್ರದ ಮರು ಚುನಾವಣೆಯನ್ನು ಮುಂದೂಡಬೇಕಾಗಿ ಬಂದಿತು. ಅದರಿಂದ ಈಗ ಚುನಾವಣೆಗೆ ಮಾಡುವ ವೆಚ್ಚವನ್ನು ಹೆಚ್ಚು ಪಾರದರ್ಶಕಗೊಳಿಸಬೇಕು ಎಂದು ಚುನಾವಣೆ ಆಯೋಗ ಸೂಚಿಸಿದೆ. ಇದಕ್ಕೆ ಎಲ್ಲ ಪಕ್ಷಗಳು ಒಮ್ಮತ ಸೂಚಿಸುವುದು ಅಗತ್ಯ. ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ನಮ್ಮದೂ ಒಂದಾಗಿರುವುದರಿಂದ ಇಡೀ ಜಗತ್ತಿಗೆ ಆದರ್ಶವಾಗುವಂತೆ ನಾವು ಚುನಾವಣೆಯನ್ನು ಹೆಚ್ಚು ಪಾರದರ್ಶಕವಾಗಿ ನಡೆಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮದು ಬಡ ದೇಶವೂ ಹೌದು. ಚುನಾವಣೆ ಪ್ರಕ್ರಿಯೆಗೆ ಹೆಚ್ಚು ವೆಚ್ಚ ಮಾಡುವ ಪರಿಸ್ಥಿತಿಯಲ್ಲಿಲ್ಲ. ಪ್ರತಿ ಪ್ರಜೆಯೂ ನಿರ್ಭೀತಿಯಿಂದ ತನ್ನ ಹಕ್ಕನ್ನು ಚಲಾಯಿಸುವ ವಾತಾವರಣವನ್ನು ಸೃಷ್ಟಿಸುವುದು ಎಲ್ಲರ ಕರ್ತವ್ಯ. ಚುನಾವಣೆ ವೆಚ್ಚ ಹೆಚ್ಚು ಪಾರದರ್ಶಕಗೊಂಡಲ್ಲಿ ಜನ ಸಾಮಾನ್ಯರು ತಮ್ಮ ತೀರ್ಮಾನ ಕೈಗೊಳ್ಳುವುದಕ್ಕೆ ಸಹಕಾರಿಯಾಗಲಿದೆ. ನಮ್ಮ ಜನಪ್ರತಿನಿಧಿಗಳು ಚುನಾವಣೆ ಆಯೋಗದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಬದಲಾವಣೆ ತರಲು ಮುಂದಾಗಬೇಕು.