ಜನತೆಗೆ ಜನಪ್ರತಿನಿಧಿಗಳ ದರ್ಶನ ಭಾಗ್ಯ ಯಾವಾಗ?

Advertisement

ಜನತಾದರ್ಶನ ಪ್ರತಿ ತಿಂಗಳು ನಡೆಯುತ್ತದೆ ಎಂದು ಹೇಳಿದ ಮೇಲೆ ಕಣ್ಮರೆಯಾಗಿದೆ. ಉಸ್ತುವಾರಿ ಸಚಿವರು ಬರದ ವರದಿಯನ್ನು ಜನತಾದರ್ಶನ ನಡೆಸದೇ ನೀಡಬೇಕಿದೆ.

ರಾಜ್ಯದಲ್ಲಿ ಪ್ರತಿತಿಂಗಳೂ ಜನತಾದರ್ಶನ ನಡೆಯುತ್ತದೆ ಎಂದು ಸರ್ಕಾರ ಪ್ರಕಟಿಸಿ ಮೊದಲ ತಿಂಗಳು ಎಲ್ಲ ಜಿಲ್ಲೆಗಳಲಿ ವಿಜೃಂಭಣೆಯಿಂದ ನಡೆಯಿತು. ಎರಡನೇ ತಿಂಗಳಿಗೆ ಕಣ್ಮರೆಯಾಗಿದೆ. ಧಾರವಾಡ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅದರ ಸೊಲ್ಲು ಕೇಳಿಬರುತ್ತಿಲ್ಲ. ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲೇ ಇದು ಇನ್ನೂ ನಡೆದಿಲ್ಲ. ಸರ್ಕಾರದ ಯೋಜನೆಯಂತೆ ಪ್ರತಿ ತಾಲೂಕುಗಳಲ್ಲೂ ಇದು ನಡೆಯಬೇಕಿತ್ತು. ಕೆಲವು ತಾಲೂಕುಗಳಲ್ಲಿ ಮಾತ್ರ ಇದರ ದರ್ಶನವಾಗಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಜನರ ಅಹವಾಲು ಕೇಳುವಂತೆ ಎಲ್ಲ ಜಿಲ್ಲೆಗಳಲ್ಲಿ ಆಯಾ ಉಸ್ತುವಾರಿ ಸಚಿವರು ಜನರ ಕುಂದುಕೊರತೆಗಳಿಗೆ ಸ್ಪಂದಿಸಬೇಕಿತ್ತು. ಕೋಲಾರದಲ್ಲಿ ಮೊದಲ ಜನತಾದರ್ಶನದಲ್ಲಿ ಸಂಸದ ಮತ್ತು ಶಾಸಕರು ವೇದಿಕೆಯ ಮೇಲೆ ಹೊಡೆದಾಡಿ ಪೊಲೀಸ್ ಠಾಣೆ ಮೆಟ್ಟಲು ಹತ್ತಿದರು. ಈಗ ಎಲ್ಲವೂ ತಣ್ಣಗಾಗಿದೆ.
ರಾಜ್ಯದಲ್ಲಿ ೨೧೬ ತಾಲೂಕು ಬರಗಾಲಪೀಡಿತ ಎಂದು ಸರ್ಕಾರವೇ ಘೋಷಿಸಿದೆ. ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಸಚಿವರು ಮತ್ತು ಶಾಸಕರು ತಾಲೂಕುಮಟ್ಟದ್ದಲ್ಲಿ ಜನತಾದರ್ಶನ ನಡೆಸಿದ್ದರೆ ಜನ ಕಷ್ಟಗಳು ತಿಳಿಯುತ್ತಿತ್ತು. ಬರಗಾಲ ಪರಿಸ್ಥಿತಿ ಬಗ್ಗೆ ನವೆಂಬರ್ ೧೫ ರೊಳಗೆ ವರದಿ ನೀಡುವಂತೆ ಎಲ್ಲ ಸಚಿವರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಜನತಾದರ್ಶನ ನಡೆಸಿದ್ದರೆ ಸಚಿವರಿಗೆ ವಾಸ್ತವ ಪರಿಸ್ಥಿತಿ ತಿಳಿಯುತ್ತಿತ್ತು. ಈಗ ಅಧಿಕಾರಿಗಳು ನೀಡುವ ವರದಿಯನ್ನು ಅವಲಂಬಿಸುವುದು ಅನಿವಾರ್ಯ. ಜನತಾದರ್ಶನ ಇಂದು ನಿನ್ನೆಯ ಕಾರ್ಯಕ್ರಮವಲ್ಲ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಇದನ್ನು ನೋಡಿಕೊಳ್ಳಲು ಪ್ರತ್ಯೇಕ ವಿಭಾಗವಿದೆ. ಅದೇರೀತಿ ಪ್ರತಿ ಜಿಲ್ಲೆಯಲ್ಲೂ ಒಂದು ವಿಭಾಗ ಇದ್ದೇ ಇರುತ್ತದೆ. ಈ ವಿಭಾಗ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರೆ ಜನತಾದರ್ಶನ ಪ್ರತಿ ತಿಂಗಳೂ ನಡೆಯಬೇಕು. ಆಗ ಆಡಳಿತದಲ್ಲಿ ಚುರುಕು ಮೂಡುತ್ತದೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಎಲ್ಲಿ ಎಡವುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸರ್ಕಾರದ ಆಡಳಿತ ಉತ್ತಮವಾಗಿದ್ದರೆ ಜನತಾ ದರ್ಶನದಲ್ಲಿ ಜನರು ಬಂದು ಕುಂದುಕೊರತೆ ಹೇಳಿಕೊಳ್ಳುವುದು ಕಡಿಮೆಯಾಗಬೇಕು. ಅಲ್ಲದೆ ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಬಡವರಿಗೆ ಆಡಳಿತದಲ್ಲಿ ವಿಶ್ವಾಸ ಮೂಡುತ್ತದೆ. ಇದೆಲ್ಲ ಸಚಿವರಿಗೆ ತಿಳಿಯದ ಸಂಗತಿ ಏನಲ್ಲ. ಪ್ರತಿ ತಿಂಗಳು ಜನತಾದರ್ಶನದಲ್ಲಿ ಬಂದ ದೂರುಗಳ ದಾಖಲೆ ಇದ್ದಲ್ಲಿ ಯಾವ ಇಲಾಖೆಯಲ್ಲಿ ಹೆಚ್ಚಿನ ತೊಂದರೆಗಳಿವೆ ಎಂಬುದು ತಿಳಿಯುತ್ತದೆ. ಜನಪ್ರತಿನಿಧಿಗಳು ಅಧಿಕಾರಿಗಳು ನೀಡುವ ವರದಿಯನ್ನೇ ನಂಬಿ ಕುಳಿತರೆ ಜನರಿಗೆ ಸಹಜ ನ್ಯಾಯ ಸಿಗುವುದು ಕಷ್ಟ. ಇದರೊಂದಿಗೆ ಪ್ರತಿ ತಿಂಗಳು ಜಿಲ್ಲೆ ಮತ್ತು ತಾಲೂಕು ಕಚೇರಿಗಳಲ್ಲಿರುವ ರಹಸ್ಯ ದಾಖಲೆಗಳನ್ನು ಹೊರತುಪಡಿಸಿ ಎಲ್ಲ ದಾಖಲೆಗಳನ್ನು ಸಾರ್ವಜನಿಕರ ಪರಿಶೀಲನೆಗೆ ತೆರದಿಡಬೇಕು. ಆಗ ಬಹುತೇಕ ಪ್ರಕರಣಗಳು ಬಗೆಹರಿಯುತ್ತದೆ. ಸಾರ್ವಜನಿಕ ದೂರುಗಳಲ್ಲಿ ಬಹುತೇಕ ಕಂದಾಯ, ಆಹಾರ ಮತ್ತು ನಾಗರಿಕ ಪೂರೈಕೆ, ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದವು. ಮೊದಲ ತಿಂಗಳು ಬಂದ ದೂರುಗಳಿಗೆ ೧೫ ದಿನಗಳಲ್ಲಿ ಪರಿಹಾರ ಒದಗಿಸಿದರೆ ಎರಡನೇ ತಿಂಗಳಲ್ಲಿ ದೂರುಗಳ ಸಂಖ್ಯೆ ಇಳಿಮುಖಗೊಳ್ಳುತ್ತದೆ. ಇಲ್ಲದಿದ್ದಲ್ಲಿ ದೂರುಗಳ ಸಂಖ್ಯೆಯ ಏರುಮುಖವಾಗಿರುತ್ತದೆ. ದೂರು ಸ್ವೀಕರಿಸುವ ಸಚಿವರು ಮತ್ತು ಅಧಿಕಾರಿಗಳಿಗೆ ಸಹನೆ ಬೇಕು. ಲಖಿತ ದೂರು ನೀಡಿದರೂ ಜನ ಸಾಮಾನ್ಯರಿಗೆ ತಮ್ಮ ಅಹವಾಲನ್ನು ಹೇಳಬೇಕು ಎಂಬ ಕಾತರ ಇರುತ್ತದೆ. ಅದನ್ನು ಕೇಳುವ ತಾಳ್ಮೆ ಇರಬೇಕು. ದೂರದ ಸ್ಥಳಗಳಿಂದ ಬರುವ ಜನರಿಗೆ ಸಚಿವರು ತಮ್ಮ ನೋವಿಗೆ ಸ್ಪಂದಿಸುತ್ತಾರೆ ಎಂಬ ಆಶಾಭಾವ ಇರುತ್ತದೆ. ಅದಕ್ಕೆ ಭಂಗ ತರುವ ಕೆಲಸ ನಡೆದಲ್ಲಿ ಜನತಾ ದರ್ಶನಕ್ಕೆ ಬರುವ ಜನರ ಸಂಖ್ಯೆ ಇಳಿಮುಖಗೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎನ್ನುತ್ತೇವೆ. ಅವರ ಕಷ್ಟಸುಖಗಳಿಗೆ ಸರ್ಕಾರ ಸ್ಪಂದಿಸದೇ ಹೋದಲ್ಲಿ ಜನ ಸಾಮಾನ್ಯರು ನಿರಾಸೆಗೊಳ್ಳುತ್ತಾರೆ. ಇಂಥ ಪರಿಸ್ಥಿತಿ ಬರಬಾರದು. ಜನಪ್ರತಿನಿಧಿಗಳು ಅರ್ಜಿ ಸ್ವೀಕರಿಸಿದರೆ ಅದಕ್ಕೆ ತಕ್ಕಂತೆ ಅಧಿಕಾರಿವರ್ಗ ಕೂಡ ಸ್ಪಂದಿಸುತ್ತದೆ. ಇದೆಲ್ಲ ಜನಪ್ರತಿನಿಧಿಗಳ ವರ್ತನೆಯನ್ನು ಅವಲಂಬಿಸಿದೆ.