ಜನಪ್ರತಿನಿಧಿಗಳು ಅಭಿವೃದ್ಧಿಗೆ ಯತ್ನಿಸಲಿ

horatti
Advertisement

ಧಾರವಾಡ: ಸದನ ನಡೆದ ವೇಳೆ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದನ್ನು, ಟೀಕೆ ಟಿಪ್ಪಣಿಗಳನ್ನು ಬಿಟ್ಟು ಜನಪ್ರತಿನಿಧಿಗಳು ಅಭಿವೃದ್ಧಿಗೆ ಯತ್ನಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ ೬ ತಿಂಗಳುಗಳಿಂದ ನೋಡಿದ್ದೇನೆ, ಅಭಿವೃದ್ಧಿಯ ಬಗ್ಗೆ ಯಾವ ಪಕ್ಷದ ಶಾಸಕರು ಮಾತನಾಡಿಲ್ಲ. ಇದೀಗ ಅಧಿವೇಶನ ಮುಗಿದಿದೆ. ಕ್ರೀಡೆ ಮುಗಿಯುವ ಮುನ್ನ ಸೋತವರು ಹಾಗೂ ಗೆದ್ದವರು ಹೇಗೆ ಕೈ ಮಿಲಾಯಿಸ್ತಾರೊ ಅದೇ ರೀತಿ ಕೈ ಕೈ ಮಿಲಾಯಿಸುತ್ತಾರೆ ಎಂದರು.
ಈಗಲಾದರೂ ಎಲ್ಲರೂ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ಬಂದಾಗ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವಂತೆ ಚರ್ಚೆ ನಡೆಸಬೇಕು. ನಮ್ಮ ಮತದಾರರು ತಿಳಿದು ಮತದಾನ ಮಾಡಿದಾಗ ಉತ್ತಮ ಸರ್ಕಾರ ಬರಲು ಸಾಧ್ಯ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಈ ಬಗ್ಗೆ ನಾನು ಹೇಳುವುದು ಸೂಕ್ತವಲ್ಲ. ಮೊನ್ನೆ ಎಂಟು ಸ್ವಾಮೀಜಿಗಳು ವಿಧಾನ ಸೌಧಕ್ಕೆ ಬಂದಿದ್ದರು. ಸ್ವಾಮೀಜಿಗಳು ವಿಧಾನಸೌಧಕ್ಕೆ ಬರಬಾರದು, ಸ್ವಾಮಿಗಳು ಮಠ ಬಿಟ್ಟು ಹೊರ ಬರುವುದರಿಂದ ನಡ್ಡಾ ಆ ಅರ್ಥದಲ್ಲಿ ಹೇಳಿರಬೇಕು. ಮಠದಲ್ಲಿ ರಾಜಕಾರಣ ಸೇರಬಾರದು. ಎಲ್ಲವೂ ಕೆಲ ಮಠಗಳಲ್ಲೇ ಹುಟ್ಟುತ್ತಿವೆ, ಎಲ್ಲ ಮಠ ಹಾಗಲ್ಲ, ಕೆಲ ಮಠಗಳಿವೆ. ಸಮಾಜಕ್ಕೆ ಮಾದರಿಯಾಗಿರುವಂತವರು. ಅವರು ರಾಜಕಾರಣಕ್ಕೆ ಬರಬಾರದು. ರಾಜಕಾರಣ ಇಂದು ಕಲುಷಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೊನೆಯ ಭಾಷಣ ವಿಚಾರದ ಕುರಿತು ಮಾತನಾಡಿ, ಇನ್ನು ಮುಂದೆ ಎಲ್ಲರೂ ಒಮ್ಮೆ ಕೂಡಲು ಆಗುವುದಿಲ್ಲ. ಕೊನೆ ಎಂಬುದು ಹಿಂದೆ ನಡೆದ ಎಲ್ಲ ಘಟನೆಗಳನ್ನು ಮರೆಸುತ್ತದೆ. ಯಡಿಯೂರಪ್ಪ ಪ್ರಶ್ನಾತೀತ ನಾಯಕ. ನಾಲ್ಕು ಬಾರಿ ಸಿಎಂ ಆದವರು, ಹೋರಾಟಗಾರ ಎಂದು ಹೇಳಿದರು.