ಜನಪ್ರತಿನಿಧಿಗಳ ನಡೆನುಡಿಗೆ ಜನರ ಟೀಕೆ ಹೊಸತಲ್ಲ

Advertisement

ಜನಪ್ರತಿನಿಧಿಗಳಾದವರು ತಮ್ಮ ಖಾಸಗಿ ಬದುಕಿನಲ್ಲಿ ಕೆಲವುಕ್ಷಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಹಿಂದೆ ಇದ್ದ ಕೆಲವು ಖಾಸಗಿ ಹವ್ಯಾಸಗಳಿಗೂ ತಿಲಾಂಜಲಿ ನೀಡಬೇಕಾಗುತ್ತದೆ. ಜನರ ಪ್ರೀತಿವಿಶ್ವಾಸ ಸುಲಭವಲ್ಲ.

ರಾಜ್ಯದ ಸಕ್ಕರೆ ಸಚಿವ ಶಿವಾನಂದ ಪಾಟೀಲರು ಹೈದರಾಬಾದ್‌ನಲ್ಲಿ ಔತಣಕೂಟದಲ್ಲಿ ಭಾಗವಹಿಸಿದ್ದಾಗ ಅವರ ಮೇಲೆ ನೋಟುಗಳ ಸುರಿಮಳೆ ನಡೆದಿರುವುದು ಸಾರ್ವಜನಿಕ ಟೀಕೆಗೆ ಗ್ರಾಸವಾಗಿದೆ. ಇದು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಎಂದು ಹೇಳುವವರೂ ಇದ್ದಾರೆ. ಆದರೆ ಜನ ಒಪ್ಪುವುದಿಲ್ಲ. ಜನಪ್ರತಿನಿಧಿಗಳು ಒಮ್ಮೆ ಚುನಾಯಿತರಾದ ಮೇಲೆ ಸಾರ್ವಜನಿಕರ ಟೀಕೆಟಿಪ್ಪಣಿಗೆ ಒಳಪಡುವುದು ಸಹಜ. ಅವರು ತಮ್ಮ ವ್ಯಯಕ್ತಿಕ ಬದುಕಿನ ಕೆಲವು ಕ್ಷಣಗಳನ್ನು ತ್ಯಾಗ ಮಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಜನಪ್ರತಿನಿಧಿಗಳನ್ನು ಜನ ಅತ್ಯಂತ ಆದರ್ಶದಿಂದ ನೋಡುತ್ತಾರೆ. ಅವರ ನಡೆನುಡಿ ಪರಿಶುದ್ಧವಾಗಿರಬೇಕೆಂದು ಬಯಸುತ್ತಾರೆ. ಅಲ್ಲದೆ ತಮ್ಮ ಎಲ್ಲ ಕಷ್ಟಗಳಿಗೆ ಸ್ಪಂದಿಸಬೇಕೆಂದು ಬಯಸುತ್ತಾರೆ. ಅವರ ಕಷ್ಟಗಳನ್ನು ಬಗೆಹರಿಸಿದರೆ ಅವರನ್ನು ಕೊಂಡಾಡುತ್ತಾರೆ. ಕೆಲವು ವೇಳೆ ತಲೆಮೇಲೆ ಎತ್ತಿಕೊಂಡು ಕುಣಿದಾಡುತ್ತಾರೆ. ಒಂದು ವೇಳೆ ತಮ್ಮ ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ಅವರನ್ನು ಓಡಾಡಲು ಬಿಡುವುದಿಲ್ಲ. ಇದು ಭಾರತೀಯ ರಾಜಕಾರಣದ ರೀತಿ. ಬೇರೆ ದೇಶಗಳಲ್ಲಿ ಜನಪ್ರತಿನಿಧಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಎಲ್ಲರಂತೆ ಕಾಲಕಳೆಯುತ್ತಾರೆ. ಅದು ತಪ್ಪು ಎಂದು ತಿಳಿಯುವುದಿಲ್ಲ. ನಮ್ಮಲ್ಲಿ ತದ್ವಿರುದ್ಧ. ಜನಪ್ರತಿನಿಧಿಗಳು ಯಾವುದೇ ರೀತಿಯ ಮನರಂಜನೆಗೆ ಹೋಗಬೇಕಾದರೂ ಎಚ್ಚರವಹಿಸಬೇಕು. ಅವರು ಹೋದ ಸಮಾರಂಭ, ಔತಣಕೂಟಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಅಷ್ಟೇ ಏಕೆ, ಅವರ ಕುಟುಂಬದ ಸದಸ್ಯರು ಮೋಜಿನ ತಾಣಗಳಲ್ಲಿ ಭಾಗವಹಿಸುವಾಗ ಎಚ್ಚರವಹಿಸಬೇಕು. ಇಲ್ಲದಿದ್ದಲ್ಲಿ ಅವರ ವರ್ತನೆಯಿಂದ ಜನಪ್ರತಿನಿಧಿ ತನ್ನ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಿಂದೆ ಹಲವು ಬಾರಿ ಸಚಿವರು ತಮ್ಮ ಕುಟುಂಬದ ಸದಸ್ಯರ ವರ್ತನೆಯಿಂದ ಸಚಿವ ಪದವಿ ಕಳೆದುಕೊಂಡ ಘಟನೆಗಳಾಗಿವೆ. ಜನಪ್ರತಿನಿಧಿಗಳ ಮನೆಯವರು ಯಾವಾಗಲೂ ಅಧಿಕಾರದ ಮದದಲ್ಲಿರುತ್ತಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿರುತ್ತದೆ. ಅವರ ಕುಟುಂಬದ ಸದಸ್ಯರು ಸರಳ ಜೀವನ ನಡೆಸಬೇಕು. ಸಾರ್ವಜನಿಕ ಜೀವನದಲ್ಲಿ ವಿನಯದಿಂದ ನಡೆದುಕೊಳ್ಳಬೇಕು. ಇದು ಅಸಹಜ ಎಂದೆನಿಸಿದರೂ ಅನಿವಾರ್ಯ.
ಚುನಾವಣೆ ಎದುರಿಸಿದವರಿಗೆ ಸಾರ್ವಜನಿಕರ ಟೀಕೆಟಿಪ್ಪಣಿ ಹೊಸತೇನಲ್ಲ. ಎಲ್ಲವನ್ನೂ ಎದುರಿಸುವ ಮನೋಧರ್ಮ ಬೆಳೆಸಿಕೊಂಡಿರುತ್ತಾರೆ. ಹೊಗಳಿಕೆಗೆ ಹಿಗ್ಗುವಂತಿಲ್ಲ. ತೆಗಳಿಕೆಗೆ ತಾಳ್ಮೆ ಕಳೆದುಕೊಳ್ಳಬಾರದು. ಪತ್ರಕರ್ತರೊಂದಿಗೆ ಜನಪ್ರತಿನಿಧಿಗಳು ವರ್ತಿಸುತ್ತಿರುವ ರೀತಿ ನೀತಿ ತಕ್ಕುದಾಗಿಲ್ಲ ಎಂಬ ಮಾತುಕೇಳಿ ಬರುತ್ತಿದೆ. ಪತ್ರಕರ್ತರಿಗೆ ಇದು ಹೊಸತೇನಲ್ಲ. ಮನಬಂದಂತೆ ಮಾತನಾಡುವ ಜನಪ್ರತಿನಿಧಿಗಳೂ ಬೆಳಕಿಗೆ ಬರುತ್ತಿದ್ದಾರೆ. ಇದ್ದದ್ದನ್ನು ಇದ್ದ ಹಾಗೆ ಹೇಳುವುದೇ ಕೆಲವರ ಹವ್ಯಾಸ. ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಪತ್ರಕರ್ತರ ಮೇಲೆ ಹರಿಹಾಯುವುದನ್ನೇ ತಂತ್ರವಾಗಿ ಬಳಸಿಕೊಳ್ಳುತ್ತಿದ್ದರು. ಮನಮೋಹನ್ ಸಿಂಗ್ ಅತ್ಯಂತ ಸಂಭಾವ್ಯ ರಾಜಕಾರಣಿ. ಅವರು ಎಂದೂ ಏರುಧ್ವನಿಯಲ್ಲಿ ಮಾತನಾಡಿದವರಲ್ಲ. ಅಟಲ್ ಬಿಹಾರಿ ವಾಜಪೇಯಿ, ಎಸ್.ಎಂ. ಕೃಷ್ಣ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಬಹಳ ಎಚ್ಚರವಹಿಸುತ್ತಿದ್ದರು. ನಡೆನುಡಿಯಲ್ಲೂ ಅಚ್ಚುಕಟ್ಟು. ಇಂಥವರು ಜನರಲ್ಲಿ ಉತ್ತಮ ಭಾವನೆ ಮೂಡಿಸುವುದರಲ್ಲಿ ಸಫಲರಾಗುತ್ತಾರೆ. ಕೆಲವು ಜನಪ್ರತಿನಿಧಿಗಳು ಜನಸಾಮಾನ್ಯರಂತೆ ಮೋಜಿನ ತಾಣಗಳಿಗೆ ಹೋಗಿ ವಿವಾದಕ್ಕೆ ಕಾರಣವಾಗುತ್ತಾರೆ. ಇದು ತಪ್ಪು ಸರಿ ಎನ್ನುವುದಕ್ಕಿಂತ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬುದನ್ನು ನೆನಪಿಡಬೇಕು. ಮೊರಾರ್ಜಿ ದೇಸಾಯಿ ರಾಜಕಾರಣದಲ್ಲೂ ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದರು. ಆದರೂ ಅವರ ಮಾತುಗಳು ಅತ್ಯಂತ ಪ್ರಿಯವಾಗಿರುತ್ತಿತ್ತು. ಪಿವಿ ನರಸಿಂಹರಾವ್ ಅವರ ಮುಖದಲ್ಲಿ ಯಾವುದೇ ಭಾವನೆ ವ್ಯಕ್ತವಾಗುತ್ತಿರಲಿಲ್ಲ. ಜನ ತಮ್ಮ ನಾಯಕರ ಜೀವನವನ್ನುಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತಿರುತ್ತಾರೆ. ಅಲ್ಲದೆ ಅತ್ಯಂತ ಆದರ್ಶಮಯವಾದ ಜೀವನ ನಡೆಸಬೇಕೆಂದು ಬಯಸುತ್ತಾರೆ. ಜನಪ್ರತಿನಿಧಿಗಳು ಸಾರ್ವಜನಿಕರ ಮನೋಭಾವಕ್ಕೆ ಅನುಗುಣವಾಗಿ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುವುದು ಅಗತ್ಯ.