ಜನ, ಜಾನುವಾರು, ಜ್ಞಾನ ಹೌದು ಇದೆಂತಹ ನಿಷ್ಕಾಳಜಿ

ಮೋಹನ ಹೆಗಡೆ
Advertisement

ಆಳುವವರಿಗೆ ಜನಪರ ಕಾಳಜಿ, ದೂರದೃಷ್ಟಿ, ಬದ್ಧತೆ ಜೊತೆಗೆ ಮುಕ್ತ ಮನಸ್ಸು ಮತ್ತು ಸಾರ್ವಜನಿಕ ಆಗು ಹೋಗುಗಳ ಚಿಂತನೆ ಬಹುಮುಖ್ಯ. ಅಧಿಕಾರ ಎನ್ನುವುದು ಲಾಭದ ದೃಷ್ಟಿಕೋನದಿಂದ ತುಲನೆ ಮಾಡುವುದಲ್ಲ. ಹಾಗೇ ನಿಷ್ಕಾಳಜಿಯೂ ಸಲ್ಲ. ಇದಕ್ಕೆ ತೆರಬೇಕಾಗಬಹುದಾದ ಬೆಲೆ ಅಪಾರ. ಜನ, ಜಾನುವಾರು ಮತ್ತು ಜ್ಞಾನ ಕುರಿತಾದ ಮೂರು ಸರ್ಕಾರಿ ಯೋಜನೆಗಳು ಭ್ರಷ್ಟ ವ್ಯವಸ್ಥೆಯಲ್ಲಿ ಮತ್ತು ಸ್ಪಂದನೆಯ ಕೊರತೆಯಿಂದಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಯಾಕಾಗಿ? ಯಾರಿಂದ? ಏನು ಉದ್ದೇಶ ಎಂದು ತಿಳಿದರೆ ಈ ಅವ್ಯವಸ್ಥೆಯ ಬೊಟ್ಟು ತೋರಿಸುವುದು ವಿಧಾನಸೌಧದ ಮೂರನೇ ಮಹಡಿಯತ್ತ!
ಎರಡು ದಿನಗಳ ಹಿಂದಷ್ಟೇ ೧೦೮ ಅಂಬ್ಯೂಲೆನ್ಸ್ ಸೇವೆ ಸುಮಾರು ೨೪ ತಾಸುಗಳ ಕಾಲ ಸ್ಥಗಿತಗೊಂಡು ಜನಸಾಮಾನ್ಯ ಅಸಹಾಯಕತೆಯಿಂದ ನರಳುವಂತಾಯಿತು. ತಾಂತ್ರಿಕ ದೋಷ ಎಂದೇ ಆರೋಗ್ಯ ಮಂತ್ರಿಗಳು ಹೇಳಿ ಭುಗಿಲೆ ಆಕ್ರೋಶ ತಣಿಸಲು ಯತ್ನಿಸಿ, ಸಮಸ್ಯೆಗೆ ಒಂದು ಅಂತ್ಯ ಹಾಡಿದರೆಂಬುದು ಬೇರೆ ಮಾತು. ೧೦೮ ಸೇವೆಗೆ ನೂರೆಂಟು ಸಮಸ್ಯೆಗಳಿವೆ.
ಅದು ಬಿಡಿ. ಈಗ ಸುಮಾರು ಆರು ತಿಂಗಳಿನಿಂದ ಸರ್ಕಾರದ ಆರೋಗ್ಯ ಸಹಾಯವಾಣಿ ೧೦೪ ಸ್ಥಗಿತಗೊಂಡಿದೆ. ಜನಸಾಮಾನ್ಯರಿಗೆ, ವಿಶೇಷವಾಗಿ ಗ್ರಾಮೀಣ ಜನರಿಗೆ ತುಂಬ ಸಹಾಯವಾಗುತ್ತಿರುವ ೧೦೪ ಆರೋಗ್ಯ ಸಹಾಯವಾಣಿಯಿಂದ ಬಡವರ ದುಡ್ಡು, ಸಮಯ, ಶ್ರಮ ಎಲ್ಲವೂ ಉಳಿಯುತ್ತವೆ. ಸಾಮಾನ್ಯ ಜ್ವರ, ನೆಗಡಿ, ಜಡ್ಡು, ತಾಪತ್ರಯಗಳಿಗೆಲ್ಲ ಆರೋಗ್ಯ ಸಹಾಯವಾಣಿಯನ್ನು ಸಂಪರ್ಕಿಸಿದರೆ ಪರಿಣಿತ ವೈದ್ಯರ ತಂಡ ಪರಿಹರಿಸಿ ಔಷಧ ಮತ್ತು ಅಗತ್ಯ ಚಿಕಿತ್ಸೆಗೆ ಮಾರ್ಗದರ್ಶನ ಮಾಡುತ್ತಿತ್ತು. ಇದರಿಂದ ಸಾವಿರಾರು ಜನರಿಗೆ ದಿನದ ೨೪ ಗಂಟೆಯೂ ತಕ್ಷಣದ ಮಾರ್ಗದರ್ಶನ ದೊರೆಯುತ್ತಿತ್ತು. ೨೦೧೨ರಿಂದ ಚಾಲ್ತಿಯಲ್ಲಿ ಈ ಒಂದು ಸೇವೆ ಸ್ಥಗಿತಗೊಳ್ಳಲು ಕಾರಣ ಮಾತ್ರ ಗೊತ್ತಿಲ್ಲ.
ಈ ಸೇವೆ ಗುತ್ತಿಗೆ ಪಡೆದ ಕಂಪನಿಯ ಗುತ್ತಿಗೆಯ ಅವಧಿ ಮುಗಿದಿದೆ. ಅದನ್ನು ವಿಸ್ತರಿಸಬೇಕು… ಇಲ್ಲ, ಹೊಸ ಕಂಪನಿಗೆ ಗುತ್ತಿಗೆ ನೀಡಬೇಕು ಎಂಬುದಷ್ಟೇ ಮೇಲ್ನೋಟದ ಸಮಸ್ಯೆ. ಆರು ತಿಂಗಳಿಂದ ಸಂಬಂಧಿಸಿದ ಕಡತ ಆರೋಗ್ಯ ಮಂತ್ರಿಗಳ ಮೇಜಿನ ಮೇಲೆ ಕೊಳೆಯುತ್ತಿದೆ. ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರಿಗೆ ಅನುಕೂಲವಾಗುವ ಈ ಜನಕಲ್ಯಾಣ ಯೋಜನೆ ಸ್ಥಗಿತಗೊಳಿಸುವುದರ ಹಿಂದಿರುವ ಲಾಬಿ ಏನು? ಈ ಮಂತ್ರಿ, ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಅರೆಕ್ಷಣ ಸಾಕು. ಆದರೆ ಆ ಜನಪರ ಮನಸ್ಸು ಬೇಕಲ್ಲವೇ? ಎಂತು ಇದು ಜನಕಲ್ಯಾಣ ಸರ್ಕಾರದ ಒಂದು ಹಳ್ಳ ಹಿಡಿದ ಯೋಜನೆ.
ಇನ್ನೊಂದು ಪಶುಸಂಗೋಪನೆಗೆ ಸಂಬಂಧಿಸಿದ್ದು. ಕ್ಷೀರಕ್ರಾಂತಿ ದೇಶಾದ್ಯಂತ ಮಹತ್ವದ ಪರಿಣಾಮವನ್ನು ಉಂಟು ಮಾಡಿದೆ. ಜಾನುವಾರುಗಳ ಸಂರಕ್ಷಣೆ, ಹೈನು ಅಭಿವೃದ್ಧಿ ಮತ್ತು ಕೃಷಿಕರಿಗೆ ಪರ್ಯಾಯ ಆರ್ಥಿಕ ಮೂಲ ಕಲ್ಪಿಸುವಲ್ಲಿ ಸಮರ್ಥ ಮತ್ತು ಬೆರಗುಗೊಳಿಸುವಂತ ಕಾರ್ಯ ನಡೆದಿದೆ. ಜಾನುವಾರುಗಳ, ವಿಶೇಷವಾಗಿ ದನ- ಕರು- ಎಮ್ಮೆ- ಕುರಿ ಸಂರಕ್ಷಣೆಗೆ ಮತ್ತು ಹೆಚ್ಚು ಹಾಲು ಉತ್ಪಾದನೆಗೆ ಪೂರಕವಾದಂತಹ ಹೊಸ ಹೊಸ ಸಂಶೋಧನೆಗಳು ಕಳೆದ ಎರಡು ದಶಕಗಳಿಂದ ಜಗತ್ತನ್ನೇ ನಿಬ್ಬೆರಗುಗೊಳಿಸವಂತಹ ಯಶಸ್ಸನ್ನು ದೇಶದ ಪರಿಣಿತರು ಯಶಸ್ವಿಯಾಗಿದ್ದಾರೆ ಎನ್ನುವುದು ನಿಜ. ಹಾಗೆಯೇ ಜಾನುವಾರುಗಳ ವಧೆ ತಪ್ಪಿಸಲು ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಲವು ರಾಜ್ಯಗಳಲ್ಲಿ ತರಲಾಗಿದೆ. ಹೈನೋದ್ಯಮದ ಅಭಿವೃದ್ಧಿ, ಕ್ಷೀರಕ್ರಾಂತಿಯಲ್ಲಿ ಕರ್ನಾಟಕದ ರೈತರ ಕೊಡುಗೆ ಕೂಡ ಮೆಚ್ಚುವಂಥದ್ದೇ. ಇದರೊಟ್ಟಿಗೆ ಹಾಲು ಉತ್ಪಾದಕ ಸಂಘಗಳು, ಸಂಸ್ಥೆಗಳು, ಮಹಾಮಂಡಳಗಳು ಉತ್ತಮವಾಗಿ ತಮ್ಮ ಜಾಲವನ್ನು ಹೆಣೆದಿವೆ. ಹೈನೋದ್ಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದಂತೆಯೇ ಕೃಷಿ ಕ್ಷೇತ್ರದಲ್ಲಾದ ಬದಲಾವಣೆ ಪರೋಕ್ಷ ಪರಿಣಾಮವನ್ನು ರಾಸುಗಳ ಮೇಲೆ ಬೀರಿದೆ.
ಗ್ರಾಮೀಣ ಪ್ರದೇಶಗಳಲ್ಲಿ ತುಂಬ ದುಬಾರಿಯಾಗುವ ಹೋರಿ ಮತ್ತು ಕೋಣ ಬಳಕೆ ಈಗ ಇಲ್ಲ. ಹಾಗಾಗಿ ಗಂಡು ಕರುಗಳು ಜನಿಸಿದ ಕೆಲ ದಿನಗಳಲ್ಲಿಯೇ ಕಸಾಯಿ ಖಾನೆ ಸೇರುತ್ತಿರುವುದು ನೋವಿನ ಸಂಗತಿ. ಹಾಗಂತ ಹೆಣ್ಣು ಕರು ಬೇಕೆಂಬ ರೈತನ ಆಸೆ ತಪ್ಪಲ್ಲ. ಕರು ಬೆಳೆಸಿ ಅದರಿಂದ ಇನ್ನಷ್ಟು ಹಾಲು ಹಿಂಡಬಹುದು ಎನ್ನುವ ಆಸೆ ರೈತನದ್ದು. ಇದನ್ನರಿತೇ ತಜ್ಞರು ಹೆಣ್ಣು ಕರು ಜನಿಸುವ ಇಂಜೆಕ್ಷನ್- ಲಸಿಕೆ ಸಂಶೋಧಿಸಿದ್ದಾರೆ. ನೀಡುವ ಯೋಜನೆಯೂ ಕೂಡ ಇದೆ. ಕೃತಕ ಗರ್ಭಧಾರಣಾ ಯೋಜನೆ ಸರ್ಕಾರ ಮತ್ತು ಹಾಲು ಮಂಡಳಗಳ ಮಹತ್ವದ ಕಾರ್ಯಗಳಲ್ಲಿ ಒಂದು. ಆದರೆ ಗ್ರಾಮೀಣ ಪ್ರದೇಶಗಳ ರೈತರು ಹೇಳುವುದು ಹೀಗೆ. ಸರ್ಕಾರಿ ಪಶುವೈದ್ಯರಿಂದ ಕೃತಕ ಗರ್ಭಧಾರಣೆ ಮಾಡಿಸಿದಲ್ಲಿ ಹುಟ್ಟುವುದು ಗಂಡು ಕರು ಮಾತ್ರ. ಏಕೆಂದರೆ ಹೆಣ್ಣು ಕರುವಿನ ಲಸಿಕೆ- ವೀರ್ಯಾಣುವನ್ನು ಸರ್ಕಾರ ಪೂರೈಸುತ್ತಿಲ್ಲ. ಅದೇ ಖಾಸಗಿಯಾಗಿ ೭೫೦ರಿಂದ ೧ ಸಾವಿರ ರೂಪಾಯಿಗೆ ಹೆಣ್ಣು ಕರು ಲಸಿಕೆ ಲಭ್ಯ. ಸರ್ಕಾರಿ ಪಶುಸಂಗೋಪನಾ ವೈದ್ಯರೂ ಕೂಡ ದನಗಳಿಗೆ ಬೆದೆ ಬಂದಾಗ ಔಷಧಿಯನ್ನು ನೀಡಿ ಉತ್ತಮ ತಳಿಯ, ಹೆಚ್ಚು ಹಾಲು ಉತ್ಪಾದಿಸಬಹುದಾದ ಹೆಣ್ಣು ಕರು ಸಂತಾನ ಜನಿಸುವ ವಿರ್ಯಾಣು- ಲಸಿಕೆ ನೀಡುತ್ತಿಲ್ಲ. ಹಾಲು ಉತ್ಪಾದನೆ ಮತ್ತು ಕ್ಷೀರಕ್ರಾಂತಿಯ ಹರಿಕಾರರು ಎನ್ನುವ, ಅದೇ ಉದ್ದೇಶ ಇಟ್ಟುಕೊಂಡು ಬೆಳೆದಿರುವ ಕೆಎಂಎಫ್‌ನಂತಹ ಮಹಾಮಂಡಳಗಳೂ ಕೂಡ ಹೆಣ್ಣು ಕರು ಲಸಿಕೆಗಿಂತ ಗಂಡು ಕರು ಜನಿಸುವ ಲಸಿಕೆಯನ್ನೇ ಮುಗ್ಧ ರೈತರಿಗೆ ನೀಡಿ ಪರೋಕ್ಷವಾಗಿ ಗಂಡು ಕರುಗಳು ಎಳೆವೆಯಲ್ಲಿಯೇ ವಧಾಯಲಯ ಸೇರುವುದಕ್ಕೆ ಕಾರಣವಾಗುತ್ತಿವೆ!
ಇದು ರೈತರ ಮನಸ್ಸಿನ ಮೇಲೆಯೂ ತೀವ್ರ ಭಾವನಾತ್ಮಕ ಪರಿಣಾಮ ಬೀರುತ್ತಿವೆ. ಪುಣ್ಯಕೋಟಿ ಎಂದೇ ಕರೆಯುವ ರೈತ ಗಂಡು ಕರು ಜನಿಸಿದರೆ ಅದನ್ನು ಉಚಿತವಾಗಿಯೇ ಖರೀದಿಸುವ ವ್ಯಾಪಾರಿ ಇದರೊಟ್ಟಿಗೆ ಮುಪ್ಪಿನ ಧನ ನೀಡಬೇಕೆಂಬ ಷರತ್ತನ್ನೂ ಕೂಡ ವಿಧಿಸುತ್ತಾನೆ. ಅಂದರೆ ವಧಾಲಯ ವೃದ್ಧಿಯಾಯಿತು. ಇತ್ತ ಹೈನೋದ್ಯಮಿ, ಬಡ ರೈತ ನೋವುಪಟ್ಟುಕೊಂಡ. ಹಾಗಂತ ಇದು ಸರ್ಕಾರಕ್ಕೆ ಗೊತ್ತಿಲ್ಲ ಎಂದಲ್ಲ. ಪ್ರಯೋಗಾಲಯದಲ್ಲಿ ಹೆಣ್ಣು ಕರು ಜನಿಸುವ ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಆದರೆ ಇದು ಖಾಸಗಿ ಪಾಲಾಗುತ್ತಿವೆ. ನಿರ್ದಿಷ್ಟ ಶುಲ್ಕ ವಿಧಿಸಿ ರೈತರಿಗೆ ರಿಯಾಯ್ತಿ ದರದಲ್ಲಿ ಕೊಡಬಹುದಿತ್ತು. ಆದರೆ ಲಸಿಕೆ ಉತ್ಪಾದನೆಯ ಹಿಡಿತ ಮತ್ತು ಲಾಭ ಖಾಸಗಿಯವರ ಕೈಯಲ್ಲಿದೆ. ಇವರದ್ದೇ ಮೇಲುಗೈ ಇರುವಾಗ, ಸರ್ಕಾರದ ಚಿಂತನೆ ಹಳ್ಳ ಹಿಡಿದಿದೆ. ವಧಾಲಯಗಳು ವೃದ್ಧಿಯಾಗುತ್ತಿವೆ. ಎಳೆ ಗಂಡುಗರುಗಳು ಮಾಂಸದ ಮುದ್ದೆಯಾಗಿ ರಫ್ತಾಗುತ್ತಿವೆ!.
ಇನ್ನೊಂದು ಜ್ಞಾನಕ್ಕೆ ಸಂಬಂಧಿಸಿದ್ದು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಮಟ್ಟ ಸುಧಾರಣೆಗೆ ಅಲ್ಲಿಯ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರುಗಳಿಗೆ ಹೊಸ ಆವಿಷ್ಕಾರ, ಕಲಿಕಾ ವಿಧಾನ ಮತ್ತು ಆಧುನಿಕ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಅಕಾಡೆಮಿ ಒಂದನ್ನು ಹತ್ತಾರು ವರ್ಷಗಳ ಹಿಂದೆಯೇ ಸ್ಥಾಪಿಸಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಈ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಕಲಿಕೆ ಮತ್ತು ಜ್ಞಾನಾರ್ಜನೆಗೆ ಇಲ್ಲಿ ವಿಶೇಷ ಆದ್ಯತೆ. ರಾಜ್ಯದ ಕಾಲೇಜು, ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರಿಗೆ ಪರಿಣಿತರಿಂದ ತರಬೇತಿ ನೀಡಿ ಶೈಕ್ಷಣಿಕ ಮಟ್ಟ ಮತ್ತು ಭೋದನೆಯ ಕಲೆ ಕಲಿಸುವುದು ಇದರ ಉದ್ದೇಶ. ನಾಡಿನ ಪರಿಣಿತ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಈ ಉನ್ನತ ಶಿಕ್ಷಣ ಅಕಾಡೆಮಿ ಸ್ಥಾಪನೆಯಾಗಿದೆ. ಕಳೆದ ಹತ್ತು ವರ್ಷಗಳ ಕಾಲ ತಕ್ಕಮಟ್ಟಿಗೆ ಕಾರ್ಯನಿರ್ವಹಿಸಿದ ಈ ಸಂಸ್ಥೆ ಈಗ ನಿಶ್ಯಸ್ತ್ರೀಕರಣಕ್ಕೆ ಒಳಗಾಗಿದೆ. ಈ ಹಿಂದೆ ಇದಕ್ಕೊಬ್ಬ ನಿರ್ದೇಶಕರಿರು. ಅವರು ನಿವೃತ್ತರಾದ ನಂತರ ಮತ್ತೊಬ್ಬರ ನೇಮಕ ಮಾಡಿಲ್ಲ.
ಈ ಅಕಾಡೆಮಿ ಎಷ್ಟು ಮಹತ್ವದ್ದೆಂದರೆ, ಉತ್ತರ ಕರ್ನಾಟಕ ಮತ್ತು ರಾಜ್ಯದೆಲ್ಲೆಡೆಯ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು ಇಲ್ಲಿಯ ಕಲಿಕೆಗೆ ಹಾತೊರೆಯುತ್ತಿವು. ಹೊಸ ಶಿಕ್ಷಣ ನೀತಿಗೆ ಜಾರಿಗೆ ಮುಂದಾಗಿರುವ ಸರ್ಕಾರ, ಅದರ ಹೆಗ್ಗಳಿಕೆ ಪಡೆಯಲು ಪೈಪೋಟಿಗೆ ಇಳಿದಿದೆಯಷ್ಟೇ. ಆದರೆ ಇದಕ್ಕೆ ಮೂಲಭೂತವಾಗಿ ಚೈತನ್ಯ ತುಂಬ ಬೇಕಲ್ಲವೇ?
ಸರ್ಕಾರಕ್ಕೆ ಈ ಅಕಾಡೆಮಿಯೇನೂ ಭಾರವಲ್ಲ. ಆದರೆ ನಿರಾಸಕ್ತಿ ಏಕೆಂದರೆ ಈ ಸಂಸ್ಥೆಯ ನಿರ್ದೇಶಕರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಲು ಪೈಪೋಟಿಯೂ ಇಲ್ಲ. ಹಣದ ಚಲಾವಣೆಯೂ ಇಲ್ಲ.
ಸಾಮಾನ್ಯ ಪ್ರಾಥಾಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಲಕ್ಷಾಂತರ ರೂಪಾಯಿ ದೊರೆಯುತ್ತಿರುವಾಗ, ವಿವಿ ಕುಲಪತಿ- ರಿಜಿಸ್ಟ್ರಾರ್‌ಗಳ ನೇಮಕಾತಿಗೆ ಪೈಪೋಟಿ ಮತ್ತು ಹಣದ ಥೈಲಿ ಮೆರೆಯುತ್ತಿರುವಾಗ, ಈ ಬಡ ಅಕಾಡೆಮಿಗೆ ನಿರ್ದೇಶಕರನ್ನು ನೇಮಕ ಮಾಡಲು ಎಲ್ಲಿರಬೇಕು ಆಸಕ್ತಿ? ಇದಕ್ಕೆ ನಿರ್ದೇಶಕರ ನೇಮಕ ಮಾಡಿ ಎನ್ನುವ ಕಡತ ಉನ್ನತ ಶಿಕ್ಷಣ ಸಚಿವರ ಟೇಬಲ್ ಮೇಲೆ ಆರು ತಿಂಗಳಿಂದ ಧೂಳು ತಿನ್ನುತ್ತಿದೆ. ನಾನು ನಿರ್ದೇಶಕನಾಗುತ್ತೇನೆ ಎಂದು ಯಾರಾದರೂ ಪೈಪೋಟಿಗೆ ಇಳಿದು ಬೇಡಿಕೆ ಹೆಚ್ಚಿಸಬಹುದೇ ಎನ್ನುವ ನಿರೀಕ್ಷೆ ಇದರ ಹಿಂದೆ ಬಹುಶಃ ಇದ್ದಿರಬಹುದೇನೋ?
ಸರ್ಕಾರಿ ವ್ಯವಸ್ಥೆಯೊಂದು ಜನಪರವಾಗಿರೂ, ಜನಮೆಚ್ಚುಗೆ ಗಳಿಸಿರೂ, ಜನ ಅಪೇಕ್ಷಿಸಿರೂ ಹಳ್ಳ ಹಿಡಿಯುತ್ತಿದೆ ಎಂಬುದಕ್ಕೆ ಈ ಮೂರು ಉದಾಹರಣೆ ಸಾಕಲ್ಲವೇ? ಹಾಗಂತ ಇದನ್ನು ಸರಿದಾರಿಗೆ ತರಲು ಕ್ಷಣ ಮಾತ್ರ ಸಾಕು ಎನ್ನುವದು ಅಷ್ಟೇ ಸತ್ಯ. ಆದರೆ ಆ ಕ್ಷಣ'ವನ್ನು ವಾಸ್ತವವಾಗಿಸುವ; ಆ ದಿವ್ಯಕ್ಷಣ’ವನ್ನು ತಂದು ಜನರ ಮುಂದಿಟ್ಟು, ನೈಜ ಜನಪರ ಕೆಲಸ ಆಗುವಂತೆ ನೋಡಿಕೊಳ್ಳುವ ಮನಸ್ಸು ಯಾರಿಗಿದೆ ಅಲ್ಲವೇ !?.