ಜನ ಮೆಚ್ಚುವವರಿಗೆ ಟಿಕೆಟ್ ಸೂತ್ರ

Advertisement

ರೂಪಾಂತರಗೊಳ್ಳುತ್ತಿರುವ ಜಾಗತಿಕ ಪರಿಸರದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಕಾರ್ಯೋನ್ಮುಖವಾಗಿರುವ ಭಾರತ ದೇಶಕ್ಕೆ ಈಗ ಅಗತ್ಯವಾಗಿರುವುದು ಸುಭದ್ರ ಹಾಗೂ ದೂರದೃಷ್ಟಿಯ ಆಡಳಿತ ನೀಡುವ ಸಾಮರ್ಥ್ಯದ ಜೊತೆಗೆ ಸಾರ್ವಭೌಮತ್ವ ಹಾಗೂ ಸಮಗ್ರತೆಯನ್ನು ಕಾಯ್ದುಕೊಳ್ಳುವ ವಿಶ್ವಾಸಾರ್ಹತೆ ಹೊಂದಿರುವ ಹೊಸ ಸರ್ಕಾರ. ಭವಿಷ್ಯ ಭಾರತವನ್ನು ರೂಪಿಸುವ ನಿಟ್ಟಿನಲ್ಲಿ ಹದಿನೆಂಟನೆಯ ಲೋಕಸಭಾ ಚುನಾವಣೆಗೆ ಘೋಷಣೆ ಹೊರಬಿದ್ದಿರುವ ಬೆನ್ನ ಹಿಂದೆಯೇ ದೇಶವಾಸಿಗಳ ನಿರೀಕ್ಷೆ ಮುಗಿಲು ಮುಟ್ಟಲು ಕಾರಣ ವೈಜ್ಞಾನಿಕ ಕ್ಷೇತ್ರದಲ್ಲಿ ವಿದೇಶಗಳು ಕಣ್ಣು ಕೋರೈಸುವಂತೆ ಪ್ರದರ್ಶಿಸಿರುವ ಸಾಧನೆ. ಚುನಾವಣೆಯ ಮೂಲಕ ಜನಾದೇಶ ಪಡೆಯುವ ಹೊಸ ಸರ್ಕಾರದ ಮುಂದಿರುವ ಸವಾಲು ಎಂದರೆ ದೇಶವಾಸಿಗಳ ಶಾಂತಿ ನೆಮ್ಮದಿಯನ್ನು ಕಾಯ್ದುಕೊಂಡು ವಿಶ್ವಾಸಾರ್ಹತೆಯನ್ನು ಪಾರದರ್ಶಕ ರೀತಿಯಲ್ಲಿ ಮತ್ತಷ್ಟು ಹೆಚ್ಚಿಸಿಕೊಳ್ಳುವ ಕಾಯಕ. ಇವೆಲ್ಲವೂ ಚುನಾವಣೆಯ ಪ್ರಣಾಳಿಕೆಯ ಮೂಲಕ ಪ್ರಸ್ತಾಪವಾಗದಿದ್ದರೂ ಜನಾದೇಶದ ಹೂರಣವೇ ಅದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜನತಂತ್ರದ ಹಬ್ಬ ಎಂದೇ ಗುರುತಿಸಲಾಗುವ ಈ ಚುನಾವಣೆಯಲ್ಲಿ ಪ್ರಬುದ್ಧತೆಗೆ ಹೆಸರಾಗಿರುವ ಮತದಾರರು ಜನಾದೇಶದ ಪಾವಿತ್ರ್ಯವನ್ನು ಅರಿತು ಅದಕ್ಕೆ ತಕ್ಕಂತೆ ಮತ ಚಲಾಯಿಸುವುದು ನಿಜವಾದ ಅರ್ಥದಲ್ಲಿ ದೇಶ ಕಾಯುವ ಕೆಲಸ.
ದೇಶದ ಸಂರಕ್ಷಣೆಯ ವಿಚಾರದಲ್ಲಿ ರಾಜಕೀಯ ವೈಮನಸ್ಯ ಯಾವತ್ತಿಗೂ ಮುಖ್ಯವಾಗಲೇಬಾರದು. ಏಕೆಂದರೆ, ದೇಶವೇ ಎಲ್ಲಕ್ಕಿಂತಲೂ ಮೊದಲು. ನಂತರ ಉಳಿದದ್ದು. ಪ್ರಣಾಳಿಕೆಯ ಮೂಲಕ ಜನರ ವಿಶ್ವಾಸ ಪಡೆಯಲು ಪೈಪೋಟಿ ನಡೆಸುವುದು ಜನತಂತ್ರದ ಒಪ್ಪಿತ ಮಾರ್ಗವೇ. ಆದರೆ, ಪೈಪೋಟಿಯಲ್ಲಿ ವೈಯಕ್ತಿಕ ದ್ವೇಷ ಇಲ್ಲವೇ ಹಿತಸಾಧನೆಯಷ್ಟೆ ಮುಖ್ಯವಾಗಬಾರದು. ಸಾರ್ವಜನಿಕ ಹಿತ ಯಾವತ್ತಿಗೂ ಚುನಾವಣೆಯಲ್ಲಿ ನಿರ್ಣಾಯಕ. ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈ ಚುನಾವಣೆ ಎಲ್ಲ ದೃಷ್ಟಿಕೋನದಿಂದಲೂ ಅಗ್ನಿಪರೀಕ್ಷೆ. ಹಾಗೆಯೇ, ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಿಂದ ದೂರವಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೂ ಇದೊಂದು ಸತ್ವ ಪರೀಕ್ಷೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಆಗಿರುವ ಸಾಫಲ್ಯ ಹಾಗೂ ವೈಫಲ್ಯಗಳನ್ನು ಪರಾಮರ್ಶಿಸಿ ದೇಶದ ಹಿತದೃಷ್ಟಿಯಿಂದ ಬೆಂಬಲಿಸುವ ಬಗ್ಗೆ ವಿವೇಚನಾತ್ಮಕ ನಿರ್ಧಾರ ಕೈಗೊಳ್ಳುವುದು ಮತದಾರರಿಗೆ ಬಿಟ್ಟ ವಿಚಾರ. ಭಾರತ್ ಜೋಡೋ ಯಾತ್ರೆಯ ಮೂಲಕ ಹೊಸ ಭರವಸೆಗಳನ್ನು ದೇಶದಲ್ಲಿ ಮೂಡಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಪರವಾಗಿ ಮತ ಚಲಾಯಿಸಬೇಕೆ ಅಥವಾ ಬೇಡವೆ ಎಂಬುದು ಕೂಡ ಮತದಾರರ ಪ್ರಬುದ್ಧತೆಗೆ ಬಿಟ್ಟಿರುವ ವಿಚಾರ. ಯಾವುದೇ ಕಾರಣಕ್ಕೆ ಅರಿತು ಮತ ಚಲಾಯಿಸುವ ಮಾರ್ಗವನ್ನು ಅನುಸರಿಸುವುದು ಯೋಗ್ಯವಾದ ಕ್ರಮ. ಅರಿಯದೇ ಮತ ಚಲಾಯಿಸುವುದು ಕತ್ತಲೆಯಲ್ಲಿ ದಾರಿ ಗೊತ್ತಿಲ್ಲದೆ ಹೆಜ್ಜೆ ಹಾಕಿದಂತೆ ಅಷ್ಟೆ.
ದೇಶದ ಐಕ್ಯತೆಯ ವಿಚಾರದಲ್ಲಿ ಯಾರೊಬ್ಬರೂ ರಾಜೀ ಮಾಡಿಕೊಳ್ಳುವ ಅಗತ್ಯವಿಲ್ಲ. ಇದೊಂದು ಪ್ರಶ್ನಾತೀತ ವಿಚಾರ. ಇದನ್ನು ಒಪ್ಪಿಕೊಂಡು ಮತ ಕೇಳುವ ರಾಜಕೀಯ ಪಕ್ಷಗಳು ಭಾರತವನ್ನು ಪ್ರಸ್ತುತದಲ್ಲಿ ಕಾಡುತ್ತಿರುವ ನಿರುದ್ಯೋಗದ ಬವಣೆ, ರೈತರ ಕಣ್ಣೀರು, ಕೈಗಾರಿಕೆಗಳ ಸಂಕಟ, ಶೈಕ್ಷಣಿಕ ಅವ್ಯವಸ್ಥೆ ಜೊತೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಆವರಿಸಿರುವ ಹತಾಶೆಯನ್ನು ನಿವಾರಿಸಲು ರೂಪಿಸಿರುವ ಮಾರ್ಗಗಳನ್ನು ಹಂಚಿಕೊಳ್ಳುವುದು ಔಚಿತ್ಯಪೂರ್ಣವಾದ ನಡೆ. ಏಕೆಂದರೆ, ಯಾವುದೂ ಕೂಡಾ ಕಾಗದದ ಹೂವಿನಂತೆ ಆಗಬಾರದು ಅಷ್ಟೆ.
ಸಂಸತ್ತಿನಲ್ಲಿ ಶಾಸನಗಳ ರಚನೆಯ ಪಾವಿತ್ರ್ಯಕ್ಕೆ ಕಳಂಕ ತಟ್ಟಿದೆ ಎಂಬ ಕೂಗು ಎಲ್ಲೆಲ್ಲೂ ಮಾರ್ದನಿಗೊಳ್ಳುತ್ತಿದೆ. ಇದು ಹಂತ ಹಂತವಾಗಿ ತಟ್ಟಿರುವ ಕಳಂಕ. ಶಾಸನ ರಚನೆಗಿಂತಲೂ ರಾಜಕೀಯ ತಂಟೆಗಳೇ ಕಲಾಪದ ವಸ್ತುವಾದಾಗ ಇಂತಹ ಕಳಂಕ ಮೆತ್ತಿಕೊಳ್ಳುವುದು ಸಹಜ. ಶಾಸನ ರಚನೆ ಸುಸೂತ್ರವಾಗಿ ಸುದೀರ್ಘವಾಗಿ ಜರುಗಿದಾಗ ಪಾರದರ್ಶಕ ರೀತಿಯಲ್ಲಿ ಸರ್ಕಾರದ ನಿರ್ಧಾರಗಳು ಕಾರ್ಯರೂಪಕ್ಕೆ ಬರಲು ಸಾಧ್ಯ. ಆದರೆ, ಈಗ ಶಾಸನಗಳು ಗದ್ದಲದ ನಡುವೆ ಮಂಜೂರಾತಿ ಪಡೆಯುವುದರಿಂದ ಅದರ ಮಹತ್ವ ಯಾರಿಗೂ ತಿಳಿಯದೆ ಜಾರಿ ಅಧಿಕಾರಿಗಳ ವಿವೇಚನೆಗೆ ಹೋಗಿದೆ. ಇದರ ಪರಿಣಾಮವೆಂದರೆ ಆಡಳಿತದಲ್ಲಿ ಅಧಿಕಾರಿಗಳ ದರ್ಬಾರ್.
ಸಂಸತ್ತಿನ ಕಲಾಪ ಗಮನಾರ್ಹ ರೀತಿಯಲ್ಲಿ ಸುಧಾರಣೆಯಾಗಬೇಕಾದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಗುಣಮಟ್ಟವೂ ಸುಧಾರಿಸಬೇಕು. ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕುವ ಬದಲು ಜನಮೆಚ್ಚುವ ಅಭ್ಯರ್ಥಿಗಳನ್ನು ನಿಲ್ಲಿಸುವ ಜೊತೆಗೆ ಕಾನೂನು ಮತ್ತು ಸಾರ್ವಜನಿಕ ಹಿತದ ಜವಾಬ್ದಾರಿಯನ್ನು ಅರಿತಿರುವವರಿಗೆ ಟಿಕೆಟ್ ನೀಡಿದರೆ ಆಗ ಭಾರತದಲ್ಲಿ ಹೊಸ ಪರ್ವ ಪ್ರಾರಂಭವಾಗುವುದು ಖಂಡಿತ.