ಜಾತೀಯತೆ ಮೋಹವೂ ಬೆಳೆದಷ್ಟು ಅಪಾಯಕಾರಿ

Advertisement

ತನ್ನ ಪುತ್ರಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಆತನನ್ನೇ ವಿವಾಹವಾಗಲು ನಿಶ್ಚಯಿಸಿದ್ದಾಳೆಂದು ತಿಳಿದ ತಂದೆಯೊಬ್ಬ ಮಗಳ ಕತ್ತು ಹಿಸುಕಿ ನಿರ್ದಯವಾಗಿ ಕೊಂದು ಹಾಕಿರುವ ಘಟನೆ ಈ ವಾರ ಮಾಧ್ಯಮಗಳಲ್ಲಿ ವ್ಯಾಪಾಕ ಸುದ್ದಿಯಾಯಿತು.
ಇದೊಂದು ಮರ್ಯಾದೆ ಗೇಡು ಹತ್ಯೆಯೆಂದು ಮಾಧ್ಯಮಗಳಲ್ಲಿ ಪ್ರಚಾರವಾಯಿತು ಈ ಹಿಂದೆಯೂ ಕೂಡ ಈ ರೀತಿಯ ಮರ್ಯಾದೆಗೇಡು ಹತ್ಯೆಗಳು ನಡೆದ ಅನೇಕ ಉದಾಹರಣೆಗಳಿವೆ. ಹೆತ್ತವರಿಗೆ ತಮ್ಮ ಮಕ್ಕಳಿಗಿಂತ ಜಾತಿ ಶ್ರೇಷ್ಠತೆಯ ಅಮಲು ತಲೆಗೇರಿದಾಗ ಈ ರೀತಿಯ ಕೃತ್ಯಗಳು ನಡೆಯುತ್ತವೆ ಎನಿಸುತ್ತದೆ. ಭಾರತದಂತ ಶ್ರೇಣಿಕೃತ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ಸಾಗುತ್ತಾ ಬಂದಿರುವ ಜಾತೀಯತೆ, ಮೇಲು, ಕೀಳು ಭಾವನೆಗಳು ೨೧ನೇ ಶತಮಾನದಲ್ಲಿಯೂ ಮುಂದುವರೆಯುತ್ತಿರುವುದು ಆಶ್ಚರ್ಯ ಉಂಟು ಮಾಡದಿರದು. ಜಾತೀಯೆಂಬುದು ಕೇವಲ ಮಾನವನ ಸೃಷ್ಟಿ ಎಂದು ಆಯಾ ಕಾಲಕ್ಕೆ ಅನೇಕ ಮಹಾತ್ಮರು ಪ್ರತಿಪಾದಿಸಿ, ಜಾತಿ ವಿನಾಶಕ್ಕೆ ಕೈಕೊಂಡ ಕಾರ್ಯಗಳು ನಿಷ್ಫಲವಾಗಿ ಜಾತೀಯತೆಯೇ ಮೇಲುಗೈ ಸಾಧಿಸುತ್ತಾ ಬಂದಿರುವುದು ವಿಪರ್ಯಾಸವೇ ಸರಿ.
೧೨ನೇ ಶತಮಾನದಲ್ಲಿಯೇ ಬಸವಾದಿ ಪ್ರಮಥರು ಜಾತಿ ಧಿಕ್ಕರಿಸಿ ಅನೇಕ ಆಂದೋಲನಗಳನ್ನು ಮಾಡಿದರು ಆದರೆ ಶರಣರಿಗೂ ಜಾತಿಯ ಪಟ್ಟ ಕಟ್ಟಿದ ಕೀರ್ತಿ ಈ ಸಮಾಜದ್ದು ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರು ಜಾತಿಯ ಸಂಕೋಲೆಯಿಂದ ಭಾರತ ದೇಶವನ್ನು ಮುಕ್ತಿಗೊಳಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ ಎನ್ನುವುದಕ್ಕೆ ಈ ರೀತಿಯ ಮರ್ಯಾದೆಗೇಡು ಹತ್ಯೆಗಳೇ ಜ್ವಲಂತ ಸಾಕ್ಷಿಯಾಗಿವೆ. ಶಿಕ್ಷಣವಂತರು, ಸುಶಿಕ್ಷಿತರು, ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರ ಹೆಚ್ಚಾದಂತೆ ಜಾತೀಯತೆಯ ಮೋಹವೂ ಹೆಚ್ಚೆತ್ತುರುವುದು ದುರಂತವೇ ಸರಿ.