ಜಿಲ್ಲಾಸ್ಪತ್ರೆಯ ನಾಲ್ವರು ಸಿಬ್ಬಂದಿ ಅಮಾನತು

Advertisement

ವಿಜಯಪುರ: ಹೆರಿಗೆಗೆಂದು ದಾಖಲಾದ ಮಹಿಳೆಗೆ ಎ. ಪೊಜಿಟಿವ್ ಬದಲು ಬಿ. ಪೊಜಿಟಿವ್ ರಕ್ತ ಪೂರಣ ಮಾಡಿ ಆಕೆಯ ಪ್ರಾಣದೊಂದಿಗೆ ಚಲ್ಲಾಟವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದ ಮೂವರು ನರ್ಸಿಂಗ್ ಸಿಬ್ಬಂದಿ, ರಕ್ತನಿಧಿಯ ಸಹಾಯಕ ತಾಂತ್ರಿಕ ಸಿಬ್ಬಂದಿಯೊಬ್ಬನನ್ನು ಅಮಾನತುಗೊಳಿಸಲಾಗಿದ್ದರೆ, ಮಹಿಳಾ ವೈದ್ಯಾಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸ್ಸು ಮಾಡಲಾಗಿದೆ.
ಕರ್ತವ್ಯದ ಮೇಲೆ ನಿರ್ಲಕ್ಷ್ಯ ತೋರಿದ ನರ್ಸಿಂಗ್ ಸಿಬ್ಬಂದಿ ಸುರೇಖಾ, ಲಕ್ಷ್ಮೀ, ಸವಿತಾ ಹಾಗೂ ರಕ್ತನಿಧಿಯ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ ವೀರಪ್ಪ ಜಂಬಗಿ ಎಂಬುವವರನ್ನು ಅಮಾನತುಗೊಳಿಸಲಾಗಿದ್ದರೆ. ಮಹಿಳಾ ವೈದ್ಯೆ ಡಾ. ಪ್ರೇಮಾ ನಾಯಕ್ ಎಂಬುವವರ ವಿರುದ್ಧ ಇಲಾಖಾ ತನಿಖೆಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಶಿವಾನಂದ ಮಾಸ್ತಿಹಳ್ಳಿ ತಿಳಿಸಿದ್ದಾರೆ.
ಮಹಿಳೆ ಆರೋಗ್ಯ ಸ್ಥಿರ…
ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಅಚಾತುರ್ಯದಿಂದಾಗಿ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಳೆದ ೧೯ ದಿನಗಳಿಂದ ತೀವ್ರನಿಗಾ ಘಟಕದಲ್ಲಿರುವ ತಾಯಿ ಶಾರದಾ ದೊಡಮನಿ ಆರೋಗ್ಯ ಸ್ಥಿರವಾಗಿದೆ. ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಶೀಘ್ರದಲ್ಲಿ ಗುಣವಾಗುವ ನಿರೀಕ್ಷೆಯಲ್ಲಿದ್ದೇವೆ. ಗುರುವಾರ ತಾವು ಬಿಎಲ್‌ಡಿಇ ಆಸ್ಪತ್ರೆಗೆ ಖುದ್ಧಾಗಿ ಭೇಟಿ ನೀಡಿ ಆಕೆಯ ಆರೋಗ್ಯ ವಿಚಾರಿಸಿ ಬಂದಿರುವುದಾಗಿ ಡಾ. ಮಾಸ್ತಿಹಳ್ಳಿ ಹೇಳಿದ್ದಾರೆ.