ಜೀವಭಯದಲ್ಲಿಯೇ ಶಾಲೆಗಳತ್ತ ಹೆಜ್ಜೆ

Advertisement

ಹಾವೇರಿ: ಜಿಲ್ಲೆಯಲ್ಲಿ ಮೇ ೨೯ರಿಂದ ಶಾಲೆಗಳು ಪುನಾರಂಭಗೊಂಡು ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಮತ್ತೊಂದೆಡೆ ಜಿಲ್ಲೆಯ ಹಲವು ಶಾಲೆಗಳಲ್ಲಿ ೬೮೭ ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿಯೇ ಶಾಲೆಗಳತ್ತ ಹೆಜ್ಜೆ ಆಗುವ ಅನಿವಾರ್ಯತೆ ಎದುರಾಗಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ೧ರಿಂದ ೧೦ನೇ ತರಗತಿವರೆಗೆ ಸುಮಾರು ೧.೭೫ ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು ೧೧೩೦ ಪ್ರಾಥಮಿಕ ಹಾಗೂ ೧೫೪ ಪ್ರೌಢಶಾಲೆಗಳು ಸೇರಿದಂತೆ ೧೨೮೪ ಶಾಲೆಗಳಿವೆ. ಇವುಗಳಲ್ಲಿ ಸುಮಾರು ೭೮೦೦ ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಮಳೆ ಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ತರಗತಿ ಕೊರತೆ ಎದುರಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಮಸ್ಯೆಯಾಗುತ್ತಿದೆ.
ಜಿಲ್ಲೆಯ ೫೫೦೦ ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ ೬೮೭ ಕೊಠಡಿಗಳು ಸಣ್ಣಪುಟ್ಟ ದುರಸ್ತಿ, ಮೇಜರ್ ರಿಪೇರಿಗೆ ಕಾಯುತ್ತಿವೆ. ಅವುಗಳಲ್ಲಿ ಕಳೆದ ವರ್ಷ ಎನ್‌ಡಿಆರ್‌ಎಫ್, ವಿವೇಕ ಯೋಜನೆ, ಜಿಪಂ, ಶಿಗ್ಗಾವಿ ಮತ್ತು ಸವಣೂರು ತಾಲೂಕಿನಲ್ಲಿ ವಿಶೇಷ ಯೋಜನೆಯಡಿ ೧೩೪ ಶಾಲೆ ದುರಸ್ತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ೩೪೬ ಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿ ನಡೆದಿದೆ.
ಅನೇಕ ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಶಾಲೆಗಳ ಕಟ್ಟಡಗಳು ಹೆಂಚು, ತಗಡಿನಿಂದ ಕೂಡಿವೆ. ಈ ಹೆಂಚುಗಳು ಮಳೆ ಗಾಳಿಗೆ ಹಾರಿಹೋಗಿದ್ದರೂ ಅದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯವೂ ಆಗುತ್ತಿಲ್ಲ. ಇದರಿಂದಾಗಿ ಹೆಂಚಿನ ಕಟ್ಟಡಗಳು ಮಳೆ ಬಂದರೆ ಸೋರುವುದು ಸಾಮಾನ್ಯವಾಗಿವೆ. ಅಂಥ ಅಪಾಯಕರ ಕಟ್ಟಡಗಳಲ್ಲೇ ಅನಿವಾರ್ಯವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಅನೇಕ ಶಾಲೆಗಳಲ್ಲಿ ಕೊಠಡಿ ಸಮಸ್ಯೆಯಿದೆ. ಸಣ್ಣಪುಟ್ಟ ದುರಸ್ತಿ, ಮರುನಿರ್ಮಾಣ ಮಾಡಬೇಕಾದ ಕೊಠಡಿಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅನೇಕ ಕೊಠಡಿ ನಿರ್ಮಾಣ ಕಾಮಗಾರಿ ನಡೆದಿದೆ. ಶಿಥಿಲಾವಸ್ಥೆ ಇರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ.

– ಸುರೇಶ ಹುಗ್ಗಿ, ಡಿಡಿಪಿಐ ಹಾವೇರಿ