ಜೇನುಗೂಡಿನ ಮುಂದೆ ವಿರಸ

Advertisement

ಜಾತಿ ಜನಗಣತಿಯನ್ನು ನಡೆಸುವ ಅಧಿಕಾರ ವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಏಕೆಂದರೆ ಜನಗಣತಿಯೂ ಕೂಡಾ ಕೇಂದ್ರ ಸರ್ಕಾರದ ಹೊಣೆ.

ಕಾಲಗರ್ಭದಲ್ಲಿ ಕಳೆದ ಎಂಟೊಂಬತ್ತು ವರ್ಷಗಳಿಂದ ಹೊರಳಾಡುತ್ತಿದ್ದ ಜಾತಿಗಣತಿ ಸಮೀಕ್ಷಾ ವರದಿ ಈಗ ಸರ್ಕಾರದ ಕೈ ಸೇರಿರುವ ಪರಿಣಾಮವಾಗಿ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ಜೇನುಗೂಡಿನ ಮುಂದೆ ಕೊಳ್ಳಿ ಕಾಣಿಸಿಕೊಂಡಿರುವ ಪರಿಸ್ಥಿತಿ ತಲೆದೋರಿದೆ. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಮಹತ್ವದ ವರದಿಯನ್ನು ಸಲ್ಲಿಸುವ ಮೊದಲೇ ಬೂದಿಮುಚ್ಚಿದ ಕೆಂಡದ ವಾತಾವರಣ ಸೃಷ್ಟಿಯಾಗಲು ಈ ಸಮೀಕ್ಷಾ ವರದಿಯ ಕೆಲ ಅಂಶಗಳು ಸೋರಿಕೆಯಾಗಿದ್ದು, ಕೆಲಮಟ್ಟಿಗೆ ಕಾರಣ. ಈ ಹಂತದಲ್ಲಿ ಜಾತಿ ಜನಗಣತಿ ನಡೆಸುವ ಔಚಿತ್ಯವನ್ನು ಪ್ರಶ್ನಿಸುವ ಇಲ್ಲವೇ ಸಮರ್ಥಿಸಿಕೊಳ್ಳುವ ಸಮಾಧಾನದ ಸ್ಥಿತಿ ಈಗಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸಮಾಜದಲ್ಲಿ ಜಾತಿ ಜನಗಣತಿ ಪರವಾಗಿ ಇಲ್ಲವೇ ವಿರುದ್ಧವಾಗಿ ವರ್ಗೀಕರಣಗೊಂಡ ಬೆಳವಣಿಗೆಯಲ್ಲಿ ಸಹಜವಾಗಿಯೇ ರಾಜಕೀಯದ ಮೇಲಾಟ ಜೋರಾಗಿರುವುದು ಸರ್ಕಾರದ ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಎಚ್ಚರದ ಮಾರ್ಗವನ್ನು ತುಳಿಯಬೇಕಾಗಿದೆ. ರಾಜ್ಯದಲ್ಲಿ ಬಹುಸಂಖ್ಯಾತ ಕೋಮುಗಳೆಂದೇ ಗುರುತಿಸಿಕೊಂಡಿರುವ ಲಿಂಗಾಯತ ವೀರಶೈವ, ಹಾಗೂ ಒಕ್ಕಲಿಗ ಸಂಘಟನೆಗಳು ಈ ಸಮೀಕ್ಷೆಯನ್ನು ವಿರೋಧಿಸಿರುವ ಬೆನ್ನ ಹಿಂದೆಯೇ ಸಿದ್ದರಾಮಯ್ಯ ಸಂಪುಟದ ಸಚಿವರಲ್ಲಿಯೂ ಕೂಡಾ ಭಿನ್ನಧ್ವನಿ ಕೇಳಿಬಂದಿರುವುದು ಪರಿಸ್ಥಿತಿಯ ದಿಕ್ಸೂಚಿ. ಈ ಹಂತದಲ್ಲಿ ಜರುಗುವ ಬೆಳವಣಿಗೆ ಏನೆಂಬುದು ನಿಜಕ್ಕೂ ಕುತೂಹಲಕರ.
ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಲು ಸಂಘಟನೆಗಳು ಮುಂದಿಟ್ಟಿರುವ ಕಾರಣವೆಂದರೆ ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂಬುದು. ಹಾಗೆಯೇ ೨೦೧೧ರ ಜನಗಣತಿ ಅಂಕಿಸಂಖ್ಯೆಯನ್ನು ಆಧರಿಸಿ ಈ ಸಮೀಕ್ಷೆ ಮಾಡಿರುವುದರಿಂದ ಸಹಜವಾಗಿಯೇ ಲೋಪದೋಷಗಳು ಸೇರಿಕೊಂಡಿವೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಈ ಸಮೀಕ್ಷೆ ನಡೆದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಪ್ರಕಾರ ಈ ಟೀಕೆ ಟಿಪ್ಪಣಿಗಳು ನಿರಾಧಾರ. ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ಸುಪ್ರೀಂಕೋರ್ಟ್ ಕೈಗೊಂಡಿರುವ ನಿಲುವುಗಳ ಬೆಳಕಿನ ಹಿನ್ನೆಲೆಯಲ್ಲಿ ಈ ಸಮೀಕ್ಷೆಯನ್ನು ಪ್ರಾಮಾಣಿಕತೆಯಿಂದ ನಡೆಸಲಾಗಿದೆ. ಯಾವುದೇ ಜಾತಿಗಳನ್ನು ಕೈಬಿಡುವುದಾಗಲೀ ಅಥವಾ ಹೊಸ ಜಾತಿಗಳನ್ನು ಸೇರ್ಪಡೆ ಮಾಡುವುದಾಗಲೀ ಈ ಸಮೀಕ್ಷೆಯಲ್ಲಿ ಮಾಡಿಲ್ಲ ಎಂಬ ಸ್ಪಷ್ಟನೆಯನ್ನು ಕಾಂತರಾಜು ಅವರು ನೀಡುತ್ತಿದ್ದರೂ, ಅದೇಕೋ ಏನೋ ವಿರೋಧ ವ್ಯಕ್ತಪಡಿಸುತ್ತಿರುವ ಸಂಘಟನೆಗಳಿಗೆ ತೃಪ್ತಿಯಾದಂತೆ ಕಂಡುಬAದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಖಚಿತ ನಿಲುವನ್ನು ಸಮೀಕ್ಷೆಯ ಬಗ್ಗೆ ವ್ಯಕ್ತಪಡಿಸದೇ ಸಂಪುಟದಲ್ಲಿ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿರುವುದು ಅತ್ಯಂತ ಜಾಣತನದ ಪ್ರತಿಕ್ರಿಯೆಯಾಗಿದೆ.
ಲೋಕಸಭಾ ಚುನಾವಣೆಯ ನೆರಳು ದಿನದಿಂದ ದಿನಕ್ಕೆ ದಟ್ಟವಾಗುತ್ತಿರುವ ಸಂದರ್ಭದಲ್ಲಿ ಜಾತಿ ಸಮೀಕ್ಷೆಯ ವರದಿ ಪೈಪೋಟಿಯ ಪರಿಸ್ಥಿತಿ ಇನ್ನಷ್ಟು ಜೋರಾಗಲು ಕಾರಣವಾಗಿದೆ. ಎಲ್ಲವೂ ಈಗಿನ ಲೆಕ್ಕಾಚಾರದಂತೆ ನಡೆಯುವುದಾದರೆ ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಇದೇ ಪ್ರಧಾನ ಅಸ್ತçವಾಗಿ ಬಳಕೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಇದಕ್ಕೆ ಸಮಾನಂತರವಾಗಿ ಜಾತಿ ಜನಗಣತಿಯನ್ನು ನಡೆಸುವ ಅಧಿಕಾರವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಏಕೆಂದರೆ ಜನಗಣತಿಯೂ ಕೂಡಾ ಕೇಂದ್ರ ಸರ್ಕಾರದ ಹೊಣೆ. ಈಗ ರಾಜ್ಯ ಸರ್ಕಾರ ಇಂತಹ ಗಣತಿಯನ್ನು ಸಮೀಕ್ಷೆಯ ಹೆಸರಿನಲ್ಲಿ ನಡೆಸಿದರೆ ಅದಕ್ಕೆ ಕಾನೂನಿನ ಮಾನ್ಯತೆ ಸಿಕ್ಕುವುದು ಕಷ್ಟ. ಹೀಗಾಗಿ ಇದಕ್ಕಿರುವ ಉಪಾಯವೆಂದರೆ ಹೊಸದಾಗಿ ಆಮೂಲಾಗ್ರವಾದ ಸಮೀಕ್ಷೆಗೆ ಮುಂದಾಗುವುದು. ಒಟ್ಟಾರೆ ಸಾಮಾಜಿಕವಾಗಿ ಈ ವರದಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ತಲೆದೋರಿರುವಾಗ ಮುಂದೆ ಅನುಸರಿಸಬೇಕಾದ ಮಾರ್ಗ ಯಾವುದು ಎಂಬ ಗೊಂದಲ ಸೃಷ್ಟಿಯಾಗಿದೆ. ಬಿಹಾರದಲ್ಲಿ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ ಜಾತಿಗಣತಿಯ ನಿರ್ಧಾರವನ್ನು ಕೈಗೊಂಡ ನಂತರ ಆಗಿರುವ ಬೆಳವಣಿಗೆಗಳು ಬೇರೆ ಬೇರೆ ಆಯಾಮಗಳನ್ನು ಒಳಗೊಂಡಿದೆ. ಈ ನಿರ್ಧಾರ ಕೈಗೊಂಡಾಗ ನಿತೀಶ್‌ಕುಮಾರ್ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿದ್ದರು.
ಈಗವರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಎಐಸಿಸಿ ಮುಖಂಡ ರಾಹುಲ್‌ಗಾಂಧಿಯವರ ಆಸಕ್ತಿಯ ಪರಿಣಾಮವಾಗಿ ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳು ಜಾತಿಗಣತಿ ಮಾಡುವ ನಿರ್ಧಾರವನ್ನು ಅನುಸರಿಸಲಿವೆ. ಹೀಗಾಗಿ ಈ ವಿವಾದ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ರಾಷ್ಟçಮಟ್ಟಕ್ಕೂ ಹಬ್ಬಿದಂತಾಗಿದೆ. ಸರ್ಕಾರದ ಸೌಲಭ್ಯಗಳು ಸಮಪ್ರಮಾಣದಲ್ಲಿ ಅರ್ಹರಿಗೆ ದೊರಕಬೇಕಾದರೆ ಜಾತಿಗಣತಿ ನಡೆಯಬೇಕೆಂಬ ವಾದದಲ್ಲಿ ಹುರುಳಿದೆ. ಜನಸಂಖ್ಯೆ ಆಧರಿಸಿ ಸೌಲಭ್ಯ ಒದಗಿಸುವುದು ಸಾಮಾಜಿಕ ನ್ಯಾಯದ ಒಂದು ಮಾರ್ಗ. ಜನಸಂಖ್ಯೆಯೇ ಗೊತ್ತಾಗದೇ ಜಾತಿ ಆಧರಿಸಿ ಸೌಲಭ್ಯಗಳನ್ನು ನೀಡುವುದು ಅರ್ಹರನ್ನು ಸೌಲಭ್ಯದಿಂದ ದೂರವಿಟ್ಟಂತಾಗುತ್ತದೆ ಎಂಬ ಮಾತಿನಲ್ಲಿಯೂ ಅರ್ಥವಿದೆ. ಇಂತಹ ಬಿಕ್ಕಟ್ಟು ನಿವಾರಣೆಯಾಗಬೇಕಾದರೆ ಬಹುಹಂತದಲ್ಲಿ ಈ ವಿಚಾರ ಸಾರ್ವಜನಿಕ ಸಂವಾದದ ಮೂಲಕ ಸರ್ವ ಸಮ್ಮತ ನಿಲುವು ರೂಪುಗೊಳ್ಳುವಂತಾಗಬೇಕು. ಹಾಗಿಲ್ಲವಾದರೆ ಸುಮ್ಮನೆ ಜೇನುಗೂಡಿನ ಮುಂದೆ ಬೆದರುಗೊಂಬೆಯ ರೀತಿಯಲ್ಲಿ ಕೊಳ್ಳಿಯನ್ನು ತೋರಿಸಿದಂತಾಗುತ್ತದೆ ಅಷ್ಟೇ.