ಜ್ಞಾನವಾಪಿ: ಪೂಜೆಗೆ ಅನುಮತಿ

Advertisement

ಲಖನೌ: ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಪ್ರಕರಣ ಬುಧವಾರ ಮತ್ತೊಂದು ತಿರುವು ಪಡೆದುಕೊಂಡಿದೆ.
ಈ ಪ್ರಾರ್ಥನಾ ಮಂದಿರದ ಸೀಲ್ ಮಾಡಲಾದ ನೆಲಮಾಳಿಗೆಯಲ್ಲಿ ಪೂಜೆ ಮಾಡಿಕೊಳ್ಳಲು ಹಿಂದುಗಳಿಗೆ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ. ಪೂಜೆಗೆ ಅನುಕೂಲವಾಗುವಂತೆ ವಾರದೊಳಗೆ ಕ್ರಮ ಕೈಗೊಳ್ಳಬೇಕೆಂದು ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಜೊತೆಗೆ ನೆಲಮಾಳಿಗೆಯ ಒಂದು ಭಾಗದಲ್ಲಿರುವ ವ್ಯಾಸ್‌ಜಿ ತಹಖಾನಾಗೆ ಹಾಕಲಾಗಿರುವ ತಡೆಬೇಲಿ ತೊಲಗಿಸುವಂತೆಯೂ ಆದೇಶಿಸಲಾಗಿದೆ. ಈ ಬಗ್ಗೆ ಮಹಿಳೆಯರ ಪರ ನ್ಯಾಯವಾದಿ ವಿಷ್ಣುಶಂಕರ ಜೈನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪ್ರಕರಣದ ವಿವರ: ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಒಡೆತನಕ್ಕಾಗಿ ಹಿಂದು-ಮುಸ್ಲಿಮರ ನಡುವೆ ದೀರ್ಘಕಾಲದಿಂದ ಕಾನೂನು ಹೋರಾಟ ನಡೆದಿದೆ. ಮಸೀದಿ ಪ್ರಾಂಗಣದಲ್ಲಿ ಹಿಂದು ಕುರುಹುಗಳು ದೊರೆತಿರುವುದರಿಂದ ಅಲ್ಲಿನ ದೇವತಾ ಮೂರ್ತಿಗಳನ್ನು ಪೂಜಿಸಲು ತಮಗೆ ಅವಕಾಶ ನೀಡಬೇಕೆಂದು ಹಿಂದು ಮಹಿಳೆಯರ ಗುಂಪು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಮಸೀದಿ ಪ್ರಾಂಗಣದಲ್ಲಿ ಸರ್ವೇಕ್ಷಣೆ ಕೈಗೊಳ್ಳಬೇಕೆಂದು ಭಾರತೀಯ ಪುರಾತತ್ವ ಇಲಾಖೆಗೆ ಕೋರ್ಟ್ ಸೂಚಿಸಿತ್ತು. ಸೀಲ್ ಮಾಡಲಾದ ವಾಜುಖಾನಾ ಬಿಟ್ಟು ಇಡೀ ಪ್ರದೇಶದಲ್ಲಿ ಅಧಿಕಾರಿಗಳು ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ಸರ್ವೇಕ್ಷಣೆ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಈಗ ವ್ಯಾಸ್‌ಜಿ ತಹಖಾನಾದಲ್ಲಿ ಪೂಜೆಗೆ ಅನುಮತಿ ನೀಡಿರುವ ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್, ಇದಕ್ಕಾಗಿ ನಂದಿ ಪ್ರತಿಮೆ ಎದುರಿಗಿರುವ ತಡೆಬೇಲಿ ತೊಲಗಿಸುವಂತೆ ಆದೇಶಿಸಿದ್ದಾರೆ ಎಂದು ಅರ್ಜಿದಾರ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಕಾಶಿ ವಿಶ್ವನಾಥ ಟ್ರಸ್ಟ್ ನೇಮಿಸುವ ಅರ್ಚಕರು ಮತ್ತು ವ್ಯಾಸ್ ಕುಟುಂಬದವರು ಮೂರ್ತಿ ಪೂಜೆ ಕೈಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಮಸೀದಿ ಸಮಿತಿ ಅತಿಕ್ರಮ ಪ್ರವೇಶ: ೧೭ನೇ ಶತಮಾನದಲ್ಲಿ ಮಸೀದಿ ನಿರ್ಮಾಣವಾಗುವ ಮೊದಲು ಅಲ್ಲಿ ಬೃಹದಾಕಾರದ ಹಿಂದೂ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಇಲಾಖೆ ಈಗಾಗಲೇ ವರದಿಯೊಪ್ಪಿಸಿದೆ. ಈ ಹಿನ್ನೆಲೆಯಲ್ಲಿ ಮಸೀದಿಯ ಒಳಭಾಗದಲ್ಲಿ ಪೂಜೆ ಮಾಡುವುದಕ್ಕೆ ಇನ್ನೂ ಏಳು ಹಿಂದೂಗಳ ಪರ ಅರ್ಜಿ ಸಲ್ಲಿಸಲಾಗಿದ್ದು ಅದರ ವಿಚಾರಣೆ ಮುಂದುವರಿದಿದೆ.
ಅಲ್ಲದೆ, ನೆಲಮಾಳಿಗೆಯಲ್ಲಿರುವ ವ್ಯಾಸ್‌ಜಿ ತಹಖಾನಾಗೆ ಮಸೀದಿ ಸಮಿತಿಯವರು ಆಗಾಗ ಪ್ರವೇಶಿಸುತ್ತಿದ್ದು, ಮುಂದೆ ಈ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.