ಹುಬ್ಬಳ್ಳಿ: ಎಲ್ಲ ಕ್ಷೇತ್ರಗಳ ಸ್ಥಳೀಯ ನಾಯಕರೊಂದಿಗೆ ಸಭೆ ಮಾಡಿ, ನಂತರ ಚುನಾವಣಾ ಸಮಿತಿ ಸಭೆ ಮಾಡಿ ಕಾಂಗ್ರೆಸ್‌ನಿAದ ಯಾರಿಗೆ ಟಿಕೇಟ್ ನೀಡಬೇಕು ಎಂದು ಚರ್ಚಿಸಿ ಜ.೧೫ ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ಗುರಿ ಇಟ್ಟುಕೊಂಡಿದ್ದೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಸಭೆ ಮಾಡಲಾಗುತ್ತಿದೆ. ಅದರಂತೆ ಚುನಾವಣೆ ರಣತಂತ್ರ ರೂಪಿಸಿ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದರು.
ಒಕ್ಕಲಿಗರ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅವರು, ಶೇ.೩ ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ. ಜನಸಂಖ್ಯೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.೧೨ ರಷ್ಟು ಮೀಸಲಾತಿ ಸಿಗಬೇಕು. ಬೇರೆ ಸಮುದಾಯದವರು ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ. ನಾವು ಅದನ್ನು ವಿರೋಧಿಸುವುದಿಲ್ಲ. ಒಕ್ಕಲಿಗರಿಗೆ ಸಿಗಬೇಕಾದ ಹಕ್ಕಿಗೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಸಮುದಾಯದ ಜನಸಂಖ್ಯೆ ಅನುಗುಣವಾಗಿ ನಾವು ಶೇ.೧೨ ರಷ್ಟು ಮೀಸಲಾತಿ ಕೇಳಿದ್ದೇವೆ. ಬೇರೆಯವರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ಮೀಸಲಾತಿ ನೀಡುವುದು ಬೇಡ. ಸಚಿವರು ಸರ್ಕಾರಕ್ಕೆ ತಿಳಿಸಿ ಶೇ.೧೨ ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದ್ದರು. ಆದರೆ, ಈಗ ಶೇ. ೩ ರಷ್ಟು ಮೀಸಲಾತಿಗೆ ಏರಿಕೆ ಮಾಡಲು ನಮ್ಮ ಸ್ವಾಮಿಗಳನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ. ಶೇ.೩ ರಷ್ಟು ಮೀಸಲಾತಿ ಪಡೆಯಲು ನಾವೇನು ಭಿಕ್ಷುಕರಲ್ಲ ಎಂದರು.
ಕೋವಿಡ್ ನಿಯಮ ಪಾಲಿಸಿ ಬಸ್ ಯಾತ್ರೆ ಮಾಡಲಿ ಎಂಬ ಸಚಿವ ಸುಧಾಕರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಸುಧಾಕರ ಅವರು ಹೇಳಿದರೂ, ಹೇಳದಿದ್ದರೂ ನಾವು ಬಸ್ ಯಾತ್ರೆ ಮಾಡುತ್ತೇವೆ. ಎಸಿ ಹಾಕಿಕೊಳ್ಳಬಾರದು ಎಂದಾದರೆ, ಇವರ ಮನೆ, ಕಚೇರಿ ಹಾಗೂ ಕಾರಿನಲ್ಲಿ ಎಸಿ ನಿರ್ಬಂಧ ಮಾಡಲಿ ಎಂದು ಕಿಡಿಕಾರಿದರು.
ಸುಮ್ಮನೆ ಜನರಿಗೆ ಭಯ ಹುಟ್ಟಿಸಬಾರದು. ಜನ ಈಗಾಗಲೇ ಎರಡು ವರ್ಷದ ಆಘಾತದಿಂದ ಸುಧಾರಿಸುತ್ತಿದ್ದಾರೆ. ಹಿಂದೆ ಸರ್ಕಾರ ಸಾಕಷ್ಟು ಜನರಿಗೆ ಸಹಕಾರ ಸಹಾಯ ಮಾಡಬೇಕಿದ್ದರೂ ಮಾಡಲಿಲ್ಲ. ಈಗ ಜನರನ್ನು ಭಯದ ವಾತಾವರಣಕ್ಕೆ ನೂಕುವುದು ಬೇಡ ಎಂದು ಹೇಳಿದರು.
ಜನಾರ್ದನ ರೆಡ್ಡಿ ಅವರ ಪಕ್ಷ ಮೊದಲು ಬರಲಿ. ಮಗು ಹುಟ್ಟಿದ ಬಳಿಕ ಮೂರುವು ಚುಚ್ಚಬೇಕು, ನಾಮಕರಣ ಮಾಡಬೇಕು. ಸಮಯ ಬೇಕಾಗುತ್ತದೆ. ಅವರ ಪಕ್ಷದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬುದನ್ನು ನಾನು ಹೇಳಲು ಇಚ್ಛಿಸುವುದಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ. ಯಾವುದನ್ನೂ ಅಲ್ಲ ಗಳೆಯಲು ಸಾಧ್ಯವಿಲ್ಲ. ಯಾರಿಗೆ ಎಷ್ಟು ಶಕ್ತಿ ಇದೆಯೋ ಗೊತ್ತಿಲ್ಲ. ನಾನು ಏಕೆ ಬೇರೆಯವರ ಶಕ್ತಿ ಕುಂದಿಸಲಿ ಎಂದರು.
ಉದ್ಧವ ಠಾಕ್ರೆ ಹೇಳಿಕೆಗೆ ಖಂಡನೆ :
ಉದ್ಧವ್ ಠಾಕ್ರೆ ಹೇಳಿಕೆ ಸರಿಯಲ್ಲ. ನಮ್ಮ ರಾಜ್ಯದ ಗಡಿ ಅಂತಿಮವಾಗಿದೆ. ಅವರ ಹಳ್ಳಿ ನಮಗೆ ಬೇಡ, ನಮ್ಮ ಹಳ್ಳಿ ಅವರಿಗೆ ಬೇಡ. ಸುಮ್ಮನೆ ಅವರ ಮಂತ್ರಿ, ನಾಯಕರು ನಮ್ಮ ಗಡಿ ಪ್ರವೇಶ ಮಾಡದಿದ್ದರೆ ಸಾಕು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಬೆಳಗಾವಿ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಜನ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಮಹಾ ಮಂತ್ರಿಗಳು ಅತಿಕ್ರಮಣ ಮಾಡುವುದು ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ ಎಂದು ಹೇಳಿದರು.