ಟಕಾಟಕ್ ರೊಕ್ಕದ ಲೆಕ್ಕ: ಪಕ್ಕಾ

Advertisement

ಅವರು ಎಂಟು ಸಾವಿರ, ಇವರು ಎರಡು ಸಾವಿರ ಟೋಟಲ್ ಹತ್ತು ಸಾವಿರ, ಅಕ್ಕಿ ಬದಲಾಗಿ ಅದೂ ಹಣ ಕೊಡುತ್ತಾರೆ ಅದೂ ಸೇರಿದರೆ ಒಬ್ಬರ ಪೇಮೆಂಟ್. ನಮ್ಮ ಮನೇಲೆ ಐವರು ಹೆಣಮಕ್ಕಳು. ಟೋಟಲ್ ಎಷ್ಟಾತು ಎಂದು ಎರಡನೇ ಕ್ಲಾಸು ಕಲಿತ ಮೇಕಪ್ ಮರೆಮ್ಮ ಲೆಕ್ಕ ಹಚ್ಚಿಕೊಳ್ಳುತ್ತ ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಮುಂಜಾನೆದ್ದು ಹೋಗಿ ಅಕೌಂಟ್ ಪಕ್ಕಾ ಮಾಡಿಕೊಳ್ಳಬೇಕು. ನಂತರ ಹಾಕುತ್ತಾರೋ ಇಲ್ಲವೋ ಎಂದು ಪಕ್ಕಾ ಮಾಡಿಕೊಳ್ಳಬೇಕು. ಕರಿಲಕ್ಷಂಪತಿಯ ಹತ್ತಿರ ಲೆಕ್ಕ ಹಚ್ಚಿಕೊಳ್ಳಬೇಕು ಎಂದು ಏನೇನರ ಲೆಕ್ಕ ಹಾಕಿ ಎರಡುನೂರು ಪೇಜಿನ ಕಿಂಗ್‌ಸೈಜ್ ನೋಟ್‌ಬುಕ್‌ನಲ್ಲಿ ಬರೆದಿಟ್ಟುಕೊಂಡಿದ್ದಾಳೆ. ಅವತ್ತು ಬೀಗರು ಬಂದಾಗ ಲಾದುಂಚಿ ರಾಜನ ಹತ್ತಿರ ತೊಗರಿಬೇಳೆ, ಬೆಲ್ಲ ತೆಗೆದುಕೊಂಡು ಬಂದಿರುವ ರೊಕ್ಕ ಇನ್ನೂ ಕೊಟ್ಟಿಲ್ಲ. ಆತ ಹಗಲೆಲ್ಲ ಕೇಳುತ್ತಿದ್ದಾನೆ. ಅವನು ಮನೆಗೆ ಬಂದರೆ ಸಾಕು ಎರಡುನೂರು ಪೇಜಿನ ನೋಟ್‌ಬುಕ್ ತೋರಿಸಿ ನೀನು ತಡಕಬಕು ಎಂದು ರಾಗವಾಗಿ ಹೇಳುತ್ತಾಳೆ. ಹೋಗಲಿ ಯಾವಾಗ ಕೊಡುತ್ತಿ ಅದಾದರೂ ಹೇಳು ಅಂದರೆ… ನಾಲ್ಕನೇ ತಾರೀಕು ಮುಗಿಯಲಿ ಗ್ಯಾರಂಟಿ ಕೊಡುತ್ತೇನೆ ಎಂದು ಹೇಳಿದಾಗ ಲಾದುಂಚಿರಾಜ ತಲೆಕೆರೆದುಕೊಂಡು ಹೊರಹೋದ. ಮನೆಗೆ ಹೋದ ಮೇಲೆ ನಾಲ್ಕನೇ ತಾರೀಕು ಆದಮೇಲೆ ಅಂದಳು. ಒಂದು ವೇಳೆ ಉಲ್ಟಾ ಆದರೆ ಏನು ಮಾಡಬೇಕು? ನನ್ನ ರೊಕ್ಕ ಹೋಗುತ್ತದೆ ಎಂದು ಪೇಚಾಡಿದ. ರಾಜನ ಹೆಂಡತಿ ಇಂಗಿಂಗೆ ಇದೆ ಮ್ಯಾಟರು ಅದಕ್ಕೆ ಅವರು ನಾಲ್ಕನೇ ತಾರೀಕು ಅಂದಿದ್ದಾರೆ ಎಂದು ಸಮಜಾಯಿಷಿ ನೀಡಿದಳು. ಒಂದು ವೇಳೆ ನಾಲ್ಕನೇ ತಾರೀಕಿನ ನಂತರ ಕೊಡದೇ ಇದ್ದರೆ ನಾನು ಏನು ಮಾಡುತ್ತೇನೋ ನೋಡುವಿಯಂತೆ ಎಂಬ ಮಾತನ್ನೂ ರಾಜ ಮರೆಮ್ಮನಿಗೆ ಹೇಳಿಬಂದಿದ್ದ. ಇದು ನಿಜವೋ ಸುಮ್ಮನೇ ಕಾಗೆ ಹಾರಿಸಿದ್ದಾರೋ ಕನ್‌ಫರ್ಮ್ ಮಾಡಿಕೊಳ್ಳೋಣ ಎಂದು ಅವರಿಗೆ ಕರೆ ಮಾಡಿದರೆ ಆ ಕಡೆಯಿಂದ ಕಾವ್..ಕಾವ್..ಕಾವ್ ಎಂಬ ಕಾಗೆ ಧ್ವನಿ ಬಂದಾಗ ಕರೆಕಟ್ ಮಾಡಿ ಕಟ್ಟೆ ಮೇಲೆ ಕುಳಿತುಕೊಂಡಳು.