ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಹೃದಯಾಘಾತದಿಂದ ನಿಧನ

ವಿಕ್ರಂ
Advertisement

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿನ್ನೆ ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಅವರು ನಿನ್ನೆ ಬೆಳಗ್ಗೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಬೆಂಗಳೂರಿನ ವಿಮಾನ ನಿಲ್ದಾಣ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಲಿದೆ.
ವಿಕ್ರಮ್ ಅವರು ಕಿರ್ಲೋಸ್ಕರ್ ಗ್ರೂಪ್‌ನ ನಾಲ್ಕನೇ ತಲೆಮಾರಿನ ಮುಖ್ಯಸ್ಥರಾಗಿದ್ದರು. ಅವರು ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್‌ನ ಉಪಾಧ್ಯಕ್ಷರೂ ಆಗಿದ್ದರು. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾದ ವಿಕ್ರಮ್ ಕಿರ್ಲೋಸ್ಕರ್ ಅವರು ಭಾರತೀಯ ಆಟೋ ವಲಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ವಿಕ್ರಮ್ ಕಿರ್ಲೋಸ್ಕರ್ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಉದ್ಯಮ ವಲಯದ ಗಣ್ಯರು, ಸಮಾಜದ ಹಲವು ಕ್ಷೇತ್ರಗಳ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.