ಟ್ರಯಲ್ ಬ್ಲಾಸ್ಟ್‌ಗೆ ರೈತರ ಭಾರೀ ವಿರೋಧ: ಸ್ಥಳದಿಂದ ಕಾಲ್ಕಿತ್ತ ಅಧಿಕಾರಿಗಳ ತಂಡ

Advertisement

ಶ್ರೀರಂಗಪಟ್ಟಣ: ಕೆ.ಆರ್.ಎಸ್ ಕನ್ಬಾಡಿ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸುವುದನ್ನು ವಿರೋಧಿಸಿ ರೈತಸಂಘದ ಕಾರ್ಯಕರ್ತರು ಮಂಗಳವಾರ ಕೆಆರ್‌ಎಸ್‌ನಲ್ಲಿ ಗೋ ಬ್ಯಾಗ್ ಚಳವಳಿ ನಡೆಸಿದ್ದರಿಂದ ಜಾರ್ಖಂಡ್ ಬಂದಿದ್ದ ತಂಡವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸ್ಥಳದಿಂದ ಕಾಲ್ಕಿತ್ತರು.
ಟ್ರಯಲ್ ಬ್ಲಾಸ್ಟ್ ಮಾಡದಂತೆ ರೈತರು ಪಟ್ಟು ಹಿಡಿದು ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಮನವೊಲಿಸಲು ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದ್ರೂ ಹೋರಾಟಗಾರರು ಸೊಪ್ಪು ಹಾಕಲಿಲ್ಲ, ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶವೇ ಇಲ್ಲ. ಹೈಕೋರ್ಟ್ ಆದೇಶ ನೆಪವೊಡ್ಡಿ ಟ್ರಯಲ್ ಬ್ಲಾಸ್ಟ್ ಜಿಲ್ಲಾಡಳಿತ ಮುಂದಾಗಿದೆ, ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಆದೇಶವೇ ಇಲ್ಲ ಎಂದು ರೈತರು ಕಿಡಿಕಾರಿದರು.
ಗಣಿಮಾಲೀಕರ ಲಾಭಿಗೆ ಮಣಿದು ನಕಲಿ ಆದೇಶ ಪತ್ರವನ್ನು ಸೃಷ್ಟಿಸಲಾಗಿದೆ, ವಕೀಲರು ಕಾಲಾವಕಾಶ ಕೇಳಿದ್ದ ಪತ್ರವನ್ನೇ ಆದೇಶ ಪ್ರತಿ ಎಂದು ಅಧಿಕಾರಿಗಳು ಬಿಂಬಿಸಿದ್ದಾರೆ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಟ್ರಯಲ್ ಮಾಡಲು ಡ್ಯಾಂ ಸೇಫ್ಟಿ ಸಮಿತಿಗೆ ಅಧಿಕಾರ ನೀಡಿದ್ದ ಹೈಕೋರ್ಟ್, ಡ್ಯಾಂ ಸೇಫ್ಟಿ ಸಮಿತಿ ಸಲಹೆ ಪಡೆದು ಮುಂದಿನ ನಿರ್ಧಾರ ತೆಗದುಕೊಳ್ಳಿ ಎಂದು ತಿಳಿಸಿದೆ, ಈ ವೇಳೆ ಡ್ಯಾಂ ಸೇಫ್ಟಿ ಸಮಿತಿ ನಿರ್ಧಾರ ಮಾಡಲು 6 ತಿಂಗಳು ಸಮಯ ನೀಡುವಂತೆ ಅಡ್ವಕೇಟ್ ಜನರಲ್ ಮನವಿ ಮಾಡಿದ್ದಾರೆ. ಇದನ್ನೇ ಹೈಕೋರ್ಟ್ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಆದೇಶಿಸಿದೆ ಎಂದು ಜಿಲ್ಲಾಡಳಿತದ ತಪ್ಪಾಗಿ ಅರ್ಥೈಹಿಸಿಕೊಂಡಿದೆ ಎಂದು ರೈತರು ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಕೆ.ಎಸ್. ನಂಜುಂಡೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.