ತಂದೆ, ತಾಯಿ ಜೈಲು ಪಾಲು: ಬಾಲಮಂದಿರಕ್ಕೆ ಮಕ್ಕಳು

ಜೈಲು
Advertisement

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿನ ಆರೋಪದ ಮೇಲೆ ತಂದೆ, ತಾಯಿ ಇಬ್ಬರೂ ಜೈಲು ಪಾಲದ ಹಿನ್ನೆಲೆಯಲ್ಲಿ ಅವರ ಮೂವರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಬಳಿಕ ಮಕ್ಕಳ ಪಾಲನೆ, ಪೋಷಣೆ ಹಿತದೃಷ್ಟಿಯಿಂದ ಮೂವರು ಮಕ್ಕಳನ್ನೂ ಬಾಲಮಂದಿರಕ್ಕೆ ದಾಖಲು ಮಾಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ಆರ್ ಅವರು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ತಂದೆ ಚಿತ್ರದುರ್ಗ ಬಂದಿಖಾನೆ ಹಾಗೂ ತಾಯಿ ಶಿವಮೊಗ್ಗದ ಮಹಿಳಾ ಕೇಂದ್ರ ಕಾರಾಗೃಹದ ಪಾಲಾಗಿದ್ದಾರೆ. ಇವರಿಗೆ 8ನೇ ತರಗತಿ ಓದುತ್ತಿರುವ 16 ವರ್ಷದ ಪುತ್ರ, 7ನೇ ತರಗತಿಯ 15 ವರ್ಷದ ಪುತ್ರ ಹಾಗೂ 3ನೇ ತರಗತಿಯ 11 ವರ್ಷದ ಪುತ್ರಿ ಇದ್ದು, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಪೋಷಕರು ಬಂಧಿಖಾನೆಯಲ್ಲಿ ಇರುವುದರಿಂದ ಮಕ್ಕಳ ಪಾಲನೆ ಪೋಷಣೆಗೆ ಯಾರೂ ಇಲ್ಲದ ಕಾರಣ, ಚಿತ್ರಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಆಶಾ ಇವರು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದು, ಹೊಳಲ್ಕೆರೆ ಸಿಡಿಪಿಒ ಮಲ್ಲೇಶ್ ಅವರು ಈ ಮೂವರು ಮಕ್ಕಳನ್ನು ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿಗೆ ಕಳೆದ ಜ. 31ರಂದು ಹಾಜರುಪಡಿಸಿದ್ದರು. ಇದೀಗ ಮಕ್ಕಳ ಪಾಲನೆ, ಪೋಷಣೆ ಹಿತದೃಷ್ಟಿಯಿಂದ ಮೂವರು ಮಕ್ಕಳನ್ನು ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಬಾಲಮಂದಿರ ಸಂಸ್ಥೆಗಳಿಗೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ತಿಳಿಸಿದ್ದಾರೆ.