ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಮಹತ್ವದ ತಿದ್ದುಪಡಿ

Advertisement

ಬೆಂಗಳೂರು: 21 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಖರೀದಿಗೆ ನಿಷೇಧ ಹೇರಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ, ವಿಕಾಸ ಸೌಧದಲ್ಲಿ ಇಂದು ಕ್ರೀಡಾ ಸಚಿವ ನಾಗೇಂದ್ರ ಅವರ ಜೊತೆಗೂಡಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್, ಸಾರ್ವಜನಿಕ ಸ್ಥಳಗಳಲ್ಲಿ ಇತರ ತಂಬಾಕು ಉತ್ಪನ್ನಗಳ ನಿಷೇಧಿಸುವ ಬಗ್ಗೆ ಚರ್ಚಿಸಿದರು. ರಾಜ್ಯದಲ್ಲಿ ತಂಬಾಕು ಖರೀದಿಗೆ 18 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದ್ದು, ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 21 ವರ್ಷದವರೆಗೆ ಮಿತಿಯನ್ನು ಹೆಚ್ಚಳ ಮಾಡಲಾಗುವುದು. ಈ ಮೂಲಕ 21 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಖರೀದಿಗೆ ನಿಷೇಧ ಹೇರಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಹಿಂದಿನ ಕೋಟ್ಪಾ ಕಾಯ್ದೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆಯನ್ನ ನಿಷೇಧಿಸಲಾಗಿತ್ತು. ಸಿಗರೇಟ್ ಜೊತೆಗೆ ಇತರ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟವನ್ನು ನಿಷೇಧಿಸುವ ನಿಟ್ಟಿನಲ್ಲಿ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದರು. ಹುಕ್ಕಾ ಬಾರ್‌ಗಳಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.‌ ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹುಕ್ಕಾ ಬಾರ್ ಗಳಲ್ಲಿ ಮಾದಕ ವಸ್ತುಗಳ ಸೇವನೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ಗುಂಡೂರಾವ್ ತಿಳಿಸಿದರು. ಹುಕ್ಕಾ ಬಾರ್‌ಗಳಿಗೆ ನಿಯಂತ್ರಣ ಹೇರುವಲ್ಲಿ ಕ್ರೀಡಾ ಸಚಿವ ನಾಗೇಂದ್ರ ಅವರು ಕೆಲವು ಸಲಹೆ ನೀಡಿದ್ದು, ಕೋಟ್ಪಾ ಕಾಯ್ದೆ ತಿದ್ದುಪಡಿಯಲ್ಲಿ ಹುಕ್ಕಾ ಬಾರ್‌ಗಳಲ್ಲಿ ನಡೆಯುವ ಮಾದಕ ವಸ್ತುಗಳ ಸೇವನೆಗೆ ನಿಷೇಧ ಹೇರಲು ಕ್ರಮ ಕೈಗೊಳ್ಳುವುದಾಗಿ ಗುಂಡೂರಾವ್ ಹೇಳಿದರು.