ತಹಶೀಲ್ದಾರ ಕಚೇರಿಗೆ ಸಚಿವರ ದಿಢೀರ ಭೇಟಿ

Advertisement

ಕಲಬುರಗಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸುತ್ತಿದ್ದಂತೆ ನೇರವಾಗಿ ಕಲಬುರಗಿ ತಹಶೀಲ್ದಾರ ಕಚೇರಿಗೆ ದಿಢೀರ ಭೇಟಿ ನೀಡಿ ಕಚೇರಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಣೆ ವೀಕ್ಷಿಸಿದಲ್ಲದೆ ಸಾರ್ವಜನಿಕ ಅಹವಾಲು ಆಲಿಸಿದರು. ಸಚಿವರು ಟಪಾಲ್ ಶಾಖೆ, ಪಿಂಚಣಿ ಶಾಖೆ, ರೆಕಾರ್ಡ್ ರೂಂ ಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಿದರು.
ಟಪಾಲ್ ಶಾಖೆಗೆ ಭೇಟಿ : ಇ-ಕಚೇರಿ ಕಾರ್ಯನಿರ್ವಹಣೆ ಕುರಿತು ಸಿಬ್ಬಂದಿಯನ್ನು ವಿಚಾರಿಸಿದರು. ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರ ಪತ್ರಗಳು ವಿಷಯ ನಿರ್ವಾಹಕರಿಗೆ ಕಳುಹಿಸಲು 4-5 ದಿನಗಳಾಗುತ್ತಿವೆ ಎಂದು ಡಾಟಾ ಎಂಟ್ರಿ ಅಪರೇಟರ್ ಉತ್ತರ ನೀಡಿದಾಗ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ತಾವು ಇ-ಕಚೇರಿಯಲ್ಲಿ ಕಡತ ವಿಲೇವಾರಿ ಮಾಡುತ್ತಿದ್ದು, ಅನಗತ್ಯ ಸರ್ವರ್ ಸಮಸ್ಯೆ ಹೇಳಿ ಜನರನ್ನು ಸತಾಯಿಸದಿರಿ ಎಂದು ಹೇಳಿದಲ್ಲದೆ ಇದನ್ನು ಖುದ್ದಾಗಿ ಪರಿಶೀಲಿಸಬೇಕೆಂದು ತಹಶೀಲ್ದಾರ ನಾಗಮ್ಮ ಕಟ್ಟಿಮನಿಗೆ ಅವರಿಗೆ ಖಡಕ್ ಸೂಚನೆ ನೀಡಿದರು.
ರೆಕಾರ್ಡ್ ರೂಂ ಭೇಟಿ: ಸಂದರ್ಭದಲ್ಲಿ ಕೈಬರಹ ಪಹಾಣಿ, ಖಾಸ್ರಾ ಪಾಣಿ ಸೇರಿದಂತೆ ಇತರೆ ದಾಖಲೆಗಳ ಸಂರಕ್ಷಣಾ ಕ್ರಮಗಳ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಕಂದಾಯ ಆಯುಕ್ತ ಸುನೀಲ ಕುಮಾರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎ.ಸಿ. ಆಶಪ್ಪ ಪೂಜಾರಿ ಮತ್ತಿತರಿದ್ದರು.