ತಾಯಿಗೆ ನಾಯಿಮರಿ ಉಡುಗೊರೆ ನೀಡಿದ ರಾಹುಲ್

Advertisement

ಪಣಜಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುಟುಂಬಕ್ಕೆ ಬುಧವಾರ ಹೊಸ ಸದಸ್ಯರೊಬ್ಬರು ಆಗಮಿಸಿದ್ದಾರೆ.
ವಿಶ್ವ ಪ್ರಾಣಿ ದಿನದಂದು ರಾಹುಲ್ ಅವರು ತಾಯಿ ಸೋನಿಯಾ ಗಾಂಧಿ ಅವರಿಗೆ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಗೋವಾದಿಂದ ಖರೀದಿಸಿದ್ದ ಈ ನಾಯಿ ಮರಿಗೆ ನೂರಿ ಎಂದು ಹೆಸರಿಡಲಾಗಿದೆ. ಹೊಸ ಸದಸ್ಯೆ ನೂರಿ ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ರಾಹುಲ್ ಗಾಂಧಿ ಎಲ್ಲರಿಗೂ ಪರಿಚಯಿಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ರಾಹುಲ್ ಗಾಂಧಿ ಗೋವಾದ ಆಕಯ-ಮ್ಹಾಪ್ಸಾದಲ್ಲಿರುವ ‘ಅನಿಮಲ್ ಕಿಂಗ್‌ಡಮ್’ ಪೆಟ್ ಶಾಪ್‌ನಿಂದ ಎರಡು ಜಾಕ್ ರಸೆಲ್ ಟೆರಿಯರ್ ನಾಯಿಮರಿಗಳನ್ನು ಖರೀದಿಸಿದ್ದರು. ಈಗ ಅವರು ತಾಯಿಗೆ ಅಂದರೆ ಸೋನಿಯಾ ಅವರಿಗೆ ನಾಯಿಮರಿ ಉಡುಗೊರೆಯಾಗಿ ನೀಡಿದ್ದಾರೆ.
ದೆಹಲಿಯ ಜನಪಥ್ ೧೦ ರಲ್ಲಿರುವ ತಾಯಿ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ರಾಹುಲ್ ಭೇಟಿ ನೀಡಿ ನಾಯಿ ಮರಿಗಳನ್ನು ನೀಡಿದರು. ಸೋನಿಯಾ ಕೂಡ ಈ ಉಡುಗೊರೆಯನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಅವರು ಸಂತೋಷವಾಗಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ದೇಶದಲ್ಲಿ ‘ಜಾಕ್ ರಸೆಲ್ ಟೆರಿಯರ್’ ತಳಿ ಗೋವಾದಲ್ಲಿ ಮಾತ್ರ ಕಂಡುಬರುತ್ತದೆ. ಜ್ಯಾಕ್ ರಸ್ಸೆಲ್ ಟೆರಿಯರ್ ಇಂಗ್ಲೆಂಡ್ ಮೂಲದ ತಳಿಯಾಗಿದ್ದು, ನರಿಗಳನ್ನು ಬೇಟೆಯಾಡುವ ವಿಶೇಷ ಜಾತಿಯ ನಾಯಿಯಾಗಿದೆ. ಜ್ಯಾಕ್ ರಸ್ಸೆಲ್ ಟೆರಿಯರ್ ಅತ್ಯುತ್ತಮ ದೃಷ್ಟಿ ಮತ್ತು ವಾಸನೆಯ ಪ್ರಜ್ಞೆಯನ್ನು ಹೊಂದಿರುವ ವಿಶೇಷ ನಾಯಿ ತಳಿ ಎಂದು ಪ್ರಸಿದ್ಧಿ ಪಡೆದಿದ್ದು, ಈ ನಾಯಿಗಳು ಬಹಳ ಬುದ್ಧಿವಂತ ಎಂದು ಹೇಳಲಾಗುತ್ತದೆ.