ತಾಳ್ಮೆ ಮತ್ತು ಏಕನಿಷ್ಠೆ

Advertisement

ಮಂಗಗಳ ಒಂದು ಗುಂಪು ಒಂದೆಡೆ ವಾಸವಾಗಿತ್ತು. ಅವೆಲ್ಲ ತಮ್ಮ ಹಸಿವು ಹಿಂಗಿಸಿಕೊಳ್ಳಲು ಒಬ್ಬ ರೈತನ ತೋಟದ ಒಳಹೊಕ್ಕವು. ಅಲ್ಲಿ ಬೆಳೆದ ಗಡ್ಡೆಗೆಣಸು, ಹಣ್ಣು-ಹಂಪಲ ಎಲ್ಲ ಹರಿದು ತಿನ್ನಲಾರಂಭಿಸಿದವು. ಅವು ತಿಂದದ್ದು ಅಲ್ಪ, ಕಿತ್ತು ಹರಿದು ಅತ್ತ ಇತ್ತ ಚಲ್ಲಾಪಿಲ್ಲಿಯಾಗುವಂತೆ ಎಸೆದದ್ದೆ ಹೆಚ್ಚು. ಮೊದಲೇ ಅವು ಕಪಿಗಳಲ್ಲವೇ! ತೋಟದ ಮಾಲಿಕ ಬಂದು ನೋಡಿದ. ನಂದನವನದಂತಹ ಆ ಆನಂದವನ ನಂದಿದ ವನವಾಗಿತ್ತು, ಕಂದಿದ ವನವಾಗಿತ್ತು. ಮಂಗಗಳ ಉಪಟಳದಿಂದ ಬೇಸತ್ತ ಅವನು ತನ್ನೆಲ್ಲ ಆಳುಗಳನ್ನು ಕರೆದು ಅವರಿಂದ ಮಂಗಗಳಿಗೆ ಸರಿಯಾದ ಶಾಸ್ತ್ರಿ ಮಾಡಿಸಿದ. ಪೆಟ್ಟು ತಿಂದ ಮಂಗಗಳೆಲ್ಲ ಒಂದೆಡೆ ಸೇರಿ ಮೀಟಿಂಗ್ ಮಾಡಿದವಂತೆ. ಅವುಗಳಲ್ಲಿ ಹಿರಿಯ ಮಂಗ-“ಎಷ್ಟು ದಿನ ನಾವು ಇನ್ನೊಬ್ಬರದು ಕದ್ದು ತಿನ್ನುವುದು, ಜೊತೆಗೆ ಏಟು ತಿಂದು ಬರುವುದು, ಇದೆಲ್ಲ ಸಾಕು. ನಾವೆಲ್ಲರೂ ಸೇರಿ ನಮ್ಮದೇಯಾದ ತೋಟ ಏಕೆ ಮಾಡಿಕೊಳ್ಳಬಾರದು?” ಎಂದು ಚರ್ಚಿಸಿ ಕೊನೆಗೆ ಊರಿನಿಂದ ದೂರವಿರುವ ಒಂದು ಹಾಳು ಭೂಮಿಗೆ ಹೋದವು. ವಿಧವಿಧದ ಹಣ್ಣುಗಳ ಅಗಿಗಳನ್ನು ನೆಟ್ಟವು. ತೋಟ ತಯಾರಾಯಿತು. ಮಂಗಗಳಿಗೆಲ್ಲ ಎಲ್ಲಿಲ್ಲದ ಹುರುಪು. ಅಗಿಗಳನ್ನು ನೆಟ್ಟು ಎರಡು ದಿನವಾಗಿರಲಿಲ್ಲ ಈಗಾಗಲೇ ತಮ್ಮ ತೋಟದಲ್ಲಿ ಹಣ್ಣು ಬಂದಿರಬಹುದೆಂದು ವಿಚಾರಿಸಿ ಅವೆಲ್ಲ ಸೇರಿ ತೋಟದ ಕಡೆಗೆ ಧಾವಿಸಿದವು.
ತೋಟದಲ್ಲಿ ದೃಷ್ಟಿ ಹರಿಸಿದವು. ಅಗಿಗಳು ದೊಡ್ಡವು ಸಹ ಆಗಿರಲಿಲ್ಲ. ಇನ್ನು ಅಲ್ಲಿ ಹಣ್ಣುಗಳೆಲ್ಲಿಂದ? ಸಸಿಗಳ ನೆಟ್ಟ ಸ್ಥಳ ಚೆನ್ನಾಗಿಲ್ಲವೆಂದು ಭಾವಿಸಿದ ಆ ಮಂಗಗಳು ಸಸಿಗಳನ್ನು ಕಿತ್ತು ಇನ್ನೊಂದೆಡೆ ತೆಗ್ಗು ಅಗಿದು ಅಲ್ಲಿ ನೆಟ್ಟವು. ಮತ್ತೆರಡು ದಿನಗಳ ತರುವಾಯ ಅಲ್ಲಿ ಬಂದು ಹಣ್ಣುಗಳಿಗಾಗಿ ಕಾತರಿಸಿ ನೋಡಿದವು. ಅವುಗಳಿಗೆ ನಿರಾಶೆಯೇ ಕಾದಿತ್ತು. ಸಸಿಗಳ ಸ್ಥಾನವನ್ನು ಮತ್ತೆ ಮತ್ತೆ ಬದಲಾಯಿಸಿದವು. ಹೀಗೆ ಎರಡು ದಿನಗಳಿಗೊಮ್ಮೆಯಂತೆ ಅಲ್ಲಿ ಬಂದು ನೆಟ್ಟ ಸಸಿಗಳಲ್ಲಿ ಹಣ್ಣುಗಳು ದೊರಯಲಾರದ್ದಕ್ಕೆ ಅವುಗಳನ್ನು ಸ್ಥಳಾಂತರಿಸುತ್ತಲೇ ಹೋದವು. ತೋಟಕ್ಕಾಗಿ ಹಸನಗೊಳಿಸಿದ ಭೂಮಿಯಲ್ಲ ಮುಗಿದು ಹೋಯಿತು. ತಂದ ಅಗಿಗಳು ಬಾಡಿ ಹೋದವೇ ವಿನಃ ಫಲ ಕೊಡಲಿಲ್ಲ. ಕಪಿಗಳು ಹಣ್ಣು ಸವಿಯಲಿಲ್ಲ. ಇಲ್ಲಿ ಭೂಮಿಯಾಗಲಿ ಸಸಿಗಳಾಗಲಿ ಸರಿಯಾಗಿರಲಿಲ್ಲವೆಂದಲ್ಲ. ಹದವಾದ ಭೂಮಿ ಫಲದಾಯಿಗಳಾಗಬಲ್ಲ ಸಸಿಗಳಿದ್ದರೂ, ಅವುಗಳನ್ನು ಒಂದೇ ಸ್ಥಳದಲ್ಲಿ ನೆಡದೇ ಸ್ಥಳಾಂತರಿಸುತ್ತ ಬಂದುದರಿಂದ ಅವು ಫಲ ನೀಡಲಿಲ್ಲ. ಮಂಗಗಳಲ್ಲಿ ನಿಷ್ಠೆಯಿರಲಿಲ್ಲ ಮತ್ತು ಫಲ ಬಿಡುವವರೆಗೆ ಕಾಯುವಷ್ಟು ಸಂಯಮವಿರಲಿಲ್ಲ. ಆ ಕಾರಣಕ್ಕಾಗಿಯೇ ಅವು ಫಲದಿಂದ ವಂಚಿತವಾದವು.
ಇದರಂತೆ ನಾವು ಆರಾಧಿಸುವ ದೇವರಲ್ಲಿ ನಮ್ಮ ಅಪೇಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯವಿರುವುದಿಲ್ಲವೆಂದಲ್ಲ. ಆದರೆ ಅದಕ್ಕಾಗಿ ಕೆಲ ಸಮಯವಾದರೂ ಕಾಯಬೇಕಾಗುತ್ತದೆ. ನಮ್ಮಲ್ಲಿ ನಾವು ನೆಟ್ಟ ಭಕ್ತಿಯ ಸಸಿ ಫಲ ಕೊಡುವಷ್ಟು ಸಮಯದವರೆಗೆ ಕಾಯುವ ಸಂಯಮವಾಗಲಿ ತಾಳ್ಮೆಯಾಗಲಿ ಇರದಿರುವುದರಿಂದ ದೇವರನ್ನು ಬದಲಾಯಿಸುತ್ತ ಹೋಗುತ್ತೇವೆ. ಇದರಿಂದಾಗಿ ಯಾವ ದೇವರಿಂದ ಇಷ್ಟ ಫಲವನ್ನು ಪಡೆಯಲಾಗದೆ, ವಂಚಿತರಾಗುತ್ತೇವೆ.