ತುಲಾಭವನಕ್ಕೆ ಬೇಕಿದೆ ‘ತೂಕ’ದ ಲಕ್ಷ್ಯ…!

Advertisement

ಕಾವ್ಯ ಬಿ.ಕೆ.
ದಾವಣಗೆರೆ: ಹಳೆಯ ಶತಮಾನಗಳ ತೂಕ ಮತ್ತು ಅಳತೆಯ ಪರಿಕರಗಳನ್ನು ಸಂಗ್ರಹಿಸಿರುವ ಭಾರತದ ಏಕೈಕ ತುಲಾಭವನ ಇರುವ ನಗರಿ ಎಂಬ ಹೆಗ್ಗಳಿಕೆಗೆ ನಮ್ಮ ‘ದೇವನಗರಿ’ ಪಾತ್ರವಾಗಿದೆ!
ಹೌದು, ನಗರದ ಮಾರುಕಟ್ಟೆಯ ಜನನಿಬಿಡ ಪ್ರದೇಶವಾಗಿರುವ ಚಾಮರಾಜಪೇಟೆಯಲ್ಲಿ ಸುಮಾರು ೫,೦೦೦ಕ್ಕೂ ಅಧಿಕ ತೂಕ ಮತ್ತು ಅಳತೆಗಳ ಪರಿಗಳನ್ನು ಸಂಗ್ರಹಿಸಿರುವ ತುಲಾಭವನವಿದೆ. ಇದರ ರುವಾರಿ ಬಸವರಾಜ್ ಯಳಮಲ್ಲಿ.
ಯಳಮಲ್ಲಿ ಕುಟುಂಬದವರು ಕಳೆದ ನಾಲ್ಕು ದಶಕಗಳಿಂದ ತೂಕ-ಅಳತೆಯ ಸಾಮಗ್ರಿಗಳ ವ್ಯಾಪಾರ ನಡೆಸಿಕೊಂಡು ಬಂದಿದ್ದು, ಬಸವರಾಜ್ ಯಳಮಲ್ಲಿ ಅವರು ಈ ವ್ಯಾಪಾರವನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮೂಲತಃ ಸ್ಟಾಂಪ್ ಮತ್ತು ನಾಣ್ಯಗಳ ಹವ್ಯಾಸಿ ಸಂಗ್ರಹಕಾರರಾಗಿದ್ದುಕೊಂಡು ಅಂಚೆ ಚೀಟಿ ಪ್ರದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದಿರುವ ಕೀರ್ತಿ ಯಳಮಲ್ಲಿ ಅವರದ್ದು.

ತದ ನಂತರದ ದಿನಗಳಲ್ಲಿ ಮಣಿಪಾಲದ ಹೆರಿಟೇಜ್ ವಿಲೇಜ್ನ ಸ್ಥಾಪಕ ವಿಜಯನಾಥ ಶೆಣೈ ಅವರನ್ನು ಭೇಟಿಯಾಗಿ ಅವರಿಂದ ಪ್ರಭಾವಿತಗೊಂಡು ದೇಶ-ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಉಪಯೋಗಿಸುತ್ತಿದ್ದ ತೂಕ-ಅಳತೆಯ ಪರಿಕಾರಗಳನ್ನು ಕಳೆದ ೨೦೦೬-೦೭ ರ ಹೊತ್ತಿಗೆ ಸಂಗ್ರಹಿಸಲು ಮುಂದಾದರು.
೧೫ನೇ ಶತಮಾನದ ಮೊಘಲರ ಆಳ್ವಿಕೆಯಲ್ಲಿ ಉಪಯೋಗಿಸುತ್ತಿದ್ದ ತೂಕ-ಅಳತೆಯ ಪರಿಕರಗಳಿಂದ ಹಿಡಿದು, ವಿಜಯಪುರ, ಕಲ್ಬುರ್ಗಿ, ಬೀದರ್ ಸೇರಿದಂತೆ ಈ ಭಾಗದಲ್ಲಿ ಆಳ್ವಿಕೆ ನಡೆಸಿದ ಸುಲ್ತಾನರು, ಮೈಸೂರು ಮಹಾರಾಜರ, ವಿಜಯನಗರ ಸಾಮ್ರಾಜ್ಯದ ರಾಜ ಮಹಾರಾಜರು, ನವಾಬರು, ಬ್ರಿಟೀಷರ ಕಾಲದ ಹಾಗೂ ಅಮೇರಿಕಾ, ಜರ್ಮನಿ, ಇಂಗ್ಲೇಂಡ್ ಹೀಗೆ ವಿದೇಶಗಳಲ್ಲಿ ಉಪಯೋಗಿಸುತ್ತಿದ್ದ ತೂ ಅಳತೆಯ ಸಾಮಗ್ರಿಗಳನ್ನು ಹೆಕ್ಕಿತಂದು ದಾವಣಗೆರೆಯಲ್ಲಿ ಕಳೆದ ೨೦೧೫ರ ಆಗಸ್ಟ್‌ನಲ್ಲಿ ತುಲಾಭವನ ಹೆಸರಿನಡಿ ತೂಕ ಅಳತೆಯ ಸಂಗ್ರಹಾಲಯ ಉದ್ಘಾಟಿಸಿ, ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಿದರು.
ಚಿನ್ನ, ಬೆಳ್ಳಿ ತೂಗುವ ಸೂಕ್ಷ್ಮ ತೂಕಗಳಿಂದ ಹಿಡಿದು ಟ್ರ್ಯಾಕ್ಟರ್‌ಗಳನ್ನು ತೂಗಲು ಬಳಸುತ್ತಿರುವ ತೂಕಗಳು ಇಲ್ಲುಂಟು. ಹೀಗೆ ಮೊಘಲರ ಕಾಲದಿಂದ ಇಲ್ಲಿಯವರೆಗೆ ಬಳಸುತ್ತಿರುವ ತೂಕ, ತಾಮ್ರ, ಹಿತ್ತಳೆಯ ಷೇರು, ಪಾವು, ಚಟಾಕುಗಳ ಸಾಮಗ್ರಿಗಳನ್ನು ಇಲ್ಲಿ ಕಾಣಬಹುದು. ಇದಷ್ಟೇ ಅಲ್ಲದೇ ಸುಮಾರು ೮೦-೯೦ ವರ್ಷಗಳ ಗಡಿಯಾರಗಳು, ವಿದ್ಯುತ್ ಮೀಟರ್‌ಗಳ ಸಂಗ್ರಹವೂ ಇಲ್ಲುಂಟು.
ಯಳಮಲ್ಲಿ ಅವರ ಸಾಧನೆ ಗುರುತಿಸಿ ಅಂಚೆ ಇಲಾಖೆ ಜ.೨೧.೧.೨೦೧೭ ರಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವ ಮುಖೇನ ಯಳಮಲ್ಲಿ ಅವರ ಸಾಧನೆಗೆ ಗೌರವ ನೀಡಿತು. ಅಲ್ಲದೇ, ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿರುವ ಕೀರ್ತಿ ಇಲ್ಲಿನ ತುಲಾಭವನಕ್ಕಿದೆ.
ಅಂತರಾಷ್ಟ್ರದಲ್ಲಿ ಪ್ರಚಾರ: ಲಕ್ಕಿ ವಿಲ್ಸಮ್ ಎಂಬುವರು ೨೦೧೯ರಲ್ಲಿ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಇಲ್ಲಿನ ತುಲಾಭವನದ ಬಗ್ಗೆ ಪ್ರಕಟಿಸಿದ್ದು, ಈಗ ಬರೆಯುತ್ತಿರುವ ಮೊಘಲ್ ಇಂಡಿಯಾ ವೇಟ್ಸ್ ಎಂಬ ಪುಸ್ತಕದಲ್ಲಿ ತೂಕ ಅಳತೆಯ ಸಾಮಗ್ರಿಗಳ ಫೋಟೊ ಬಳಸಿಕೊಂಡಿದ್ದಾರೆ ಎನ್ನುತ್ತಾರೆ ಬಸವರಾಜ್ ಯಳಮಲ್ಲಿ.

ತೂಕಕ್ಕೆ ಬೇಕಿದೆ ಕಾಯಕಲ್ಪ
ಶತಮಾನಗಳಷ್ಟು ಹಿಂದಿನ ತೂಕ ಅಳತೆಯ ಪರಿಕರಗಳನ್ನು ಸಂಗ್ರಹ ಮಾಡುವುದು ಕಡಿಮೆ ಸಾಧನೆಯಲ್ಲ. ಅದರಲ್ಲೂ ೫ಸಾವಿರ ತೂಕ ಅಳತೆ ಪರಿಕರ ಸಂಗ್ರಹಿಸಿದ್ದರೂ ಕೂಡ ಇಲ್ಲಿನ ಜಿಲ್ಲಾಡಳಿತ ಭವನವಾಗಲೀ, ರಾಜ್ಯ ಸರ್ಕಾರವಾಗಲೀ ಗಮನಿಸಿ ಪ್ರತ್ಯೇಕ ಸ್ಥಳ ನೀಡುವ ಮೂಲಕ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿ ತೆಗೆದುಕೊಳ್ಳದೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮೂಲಕ ಬಸವರಾಜ್ ಯಳಮಲ್ಲಿ ಅವರ ಉತ್ಸಾಹ, ಸಾಧನೆ ಕಡೆಗೆ ನಿರ್ಲಕ್ಷಿಸಿರುವುದು ವಿಷಾದನೀಯ. ಇನ್ನಾದರೂ ಸರ್ಕಾರ ಇತ್ತಕಡೆ ಗಮನ ನೀಡಿ ಯಳಮಲ್ಲಿ ಅವರ ಉತ್ಸಾಹಕ್ಕೆ ಕಾಯಕಲ್ಪ ನೀಡುವ ಮೂಲಕ ಬೆಂಬಲಿಸುವ ಕೆಲಸ ಮಾಡಬೇಕಿದೆ.

ಭಾರತದ ಏಕೈಕ ತುಲಾಭವನ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ತೂಕ ಅಳತೆಯ ಸಂಗ್ರಹಾಲಯ ೫,೦೦೦ ಪರಿಕರಗಳನ್ನು ಹೊಂದಿದ್ದು, ಇದನ್ನು ಅಂತರಾಷ್ಟ್ರೀಯ ಮಟ್ಟದ ತೂಕ-ಅಳತೆಯ ಅಧ್ಯಯನ ಕೇಂದ್ರ ಮಾಡಬೇಕೆಂದು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಂಘ-ಸಂಸ್ಥೆಗಳು ಮುಂದೆ ಬಂದು ಸರಿಯಾದ ಸ್ಥಳದಲ್ಲಿ ಸಂಗ್ರಹಾಲಯ ಮಾಡಲು ಸಹಕಾರ ನೀಡಿದರೆ ನಮ್ಮ ಶ್ರಮ ಸಾರ್ಥಕವಾಗಲಿದೆ.

ಬಸವರಾಜ್ ಯಳಮಲ್ಲಿ, ತೂಕ-ಅಳತೆಯ ಸಂಗ್ರಹ ರೂವಾರಿ

ವಿಶ್ವದಾಖಲೆಯತ್ತ ತುಲಾಭವನ
ಸುಮಾರು ೫ಸಾವಿರಕ್ಕೂ ಅಧಿಕ ತೂಕ ಮತ್ತು ಅಳತೆಗಳ ಪರಿಕರಗಳನ್ನು ಹೊಂದಿರುವ ಕಾರಣಕ್ಕೆ ದೇಶದ ಮೊದಲ ತೂಕ-ಅಳತೆಯ ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಲಾಭವನವು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಈಗ ವಿಶ್ವದಾಖಲೆಯತ್ತ ಹೆಜ್ಜೆ ಹಾಕುತ್ತಿದೆ.