ತೆನೆ ಬಿಟ್ಟು ಕಮಲ ಹಿಡಿದ ಕೊಣ್ಣೂರ

Advertisement

ಬಾಗಲಕೋಟ: ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರಣ ಬಲು ಜೋರಾಗಿದ್ದು, ಬಿಜೆಪಿ, ಕಾಂಗ್ರೆಸ್‌ನ ಹಲವಾರು ಮುಖಂಡರು ತೆರೆಮರೆಯಲ್ಲಿ ಪಕ್ಷಾಂತರಕ್ಕೆ ಸರ್ಕಸ್ ಮಾಡುತ್ತಿದ್ದರೆ ಮತ್ತೊಂದೆಡೆ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರೊ. ಬಸವರಾಜ ಕೊಣ್ಣೂರ ತೆನೆ ಬಿಟ್ಟು ಕಮಲ ಹಿಡಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ 12435 ಮತಗಳನ್ನು ಪಡೆದು ಪರಾಭವಗೊಂಡಿದ್ದ ಬಸವರಾಜ ಕೊಣ್ಣೂರ ಕಳೆದ ಸೋಮವಾರ ಮಹಾಲಿಂಗಪೂರದಲ್ಲಿ ಜರುಗಿದ ಬಿಜೆಪಿ ಜಿಲ್ಲಾ ಯುವಮೋರ್ಚಾ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿದ್ದು ಸವದಿ ಹಾಗು ಜಿಲ್ಲೆಯ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಕಳೆದೈದು ವರ್ಷಗಳಿಂದ ಚುನಾವಣೆ ನಂತರ ರಾಜಕೀಯ ಮೌನ ತಾಳಿದ್ದ ಕೊಣ್ಣೂರ ಮತ್ತೊಮ್ಮೆ ವಿಧಾನಸಭೆ ಚುನಾವಣೆದತ್ತ ಬಿಜೆಪಿಯತ್ತ ಮುಖ ಮಾಡಿದ್ದು, ಬಿಜೆಪಿಗೆ ಆನೆಬಲ ಬಂದಂತಾಗಿದೆ.

ಈ ಕುರಿತು ಶಾಸಕ ಸಿದ್ದು ಸವದಿ ಮಾತನಾಡಿ, ಬಸವರಾಜ ಕೊಣ್ಣೂರ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದ್ದು, ಪ್ರಜ್ಞಾವಂತರು, ಯುವಕರು ಮತ್ತಷ್ಟು ಪಕ್ಷ ಬಲಿಷ್ಠತೆಗೆ ಕಾರಣರಾಗಲಿದ್ದು, ಮುಂಬರುವ ಚುನಾವಣೆಯಲ್ಲಿ ಗೆಲುವು ನಿಶ್ಚಿತವಾಗಿದ್ದು, ಕೊಣ್ಣೂರ ಅವರ ಆಗಮನದಿಂದ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.