ತೆರೆದ ಪುಸ್ತಕ ಮತ್ತು ಕಾಗದರಹಿತ ಪರೀಕ್ಷೆ

Advertisement

ಅವರ ಜೀವನ ಒಂದು ತೆರೆದ ಪುಸ್ತಕವಿದ್ದಂತೆ'' ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಒಬ್ಬ ವ್ಯಕ್ತಿಯ ಮುಚ್ಚು ಮರೆಯಿಲ್ಲದ ಸ್ವಚ್ಛ ಜೀವನವನ್ನು ಬಣ್ಣಿಸುವಾಗ ಈ ಉಪಮೇಯವನ್ನು ಬಳಸುವುದುಂಟು. ಒಳಗೊಂದು ಹೊರಗೊಂದು ಬೇರೆ ಬೇರೆಯಾಗಿರದೇ ಒಂದೇ ತೆರನಾಗಿದ್ದು ನೇರ-ದಿಟ್ಟ-ನಿರಂತರ ಜೀವನವನ್ನು ನಡೆಸಿದ ಅವರ ಜೀವನ ಕ್ರಮವು ಅಷ್ಟೊಂದು ಪಾರದರ್ಶಕವಾಗಿತ್ತೆಂದು ಅದರ ಅರ್ಥ. ಅವರು ಸರಳ-ಸಹಜ-ಸ್ವಾಭಾವಿಕ ಬದುಕನ್ನು ಸವೆಸಿದ್ದನ್ನು ಸ್ಫುಟವಾಗಿ ಮತ್ತು ಸಂಕ್ಷಿಪ್ತವಾಗಿ ವರ್ಣಿಸುವ ಬಗೆ ಇದು. ಅನೇಕ ಸಾಧಕರ, ಮಹಾತ್ಮರ ಹಾಗೂ ಸಾಧು-ಸಂತರ ಜೀವನ ವಿಧಾನವದು. ಇಡೀ ಜಗವನ್ನೇ ತಮ್ಮ ಪರಿವಾರವೆಂದು, ಅದರೊಳಗಿನ ಮನುಜರೆಲ್ಲರೂ ತನ್ನವರೆಂದು ಭಾವಿಸುವ ಅವರಿಗೆ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಹೇಳುವುದಾಗಲಿ, ಹೇಳದೇ ಮುಚ್ಚಿಡುವುದಾಗಲಿ ಇರುವುದಿಲ್ಲ. ಅವರ ಬಾಳು ತೆರೆದ ಪುಸ್ತಕದಂತೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಸರಳವಾಗಿರುತ್ತದೆ. ಅಂತಹವರ ನಡೆ-ನುಡಿಗಳ ಪ್ರಾಮಾಣಿಕತೆ, ನಿಷ್ಠೆಗಳನ್ನು ರುಜುವಾತುಪಡಿಸಲು ಪರೀಕ್ಷೆಯೇ ಬೇಕಾಗುವುದಿಲ್ಲ! ಇತ್ತೀಚೆಗೆ ಕೇಂದ್ರೀಯ ಮಾಧ್ಯಮಿಕ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ಶಾಲಾ ಶಿಕ್ಷಣದಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ಜಾರಿ ತರಲು ಯೋಚಿಸುತ್ತಿದೆ. ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಶಿಫಾರಸ್ಸುಗಳಿಗೆ ಅನುಗುಣವಾಗಿ ಆಯ್ದ ಕೆಲವು ಶಾಲೆಗಳಲ್ಲಿ ೯ ಮತ್ತು ೧೦ನೇ ತರಗತಿಗಳ ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ೧೧ ಮತ್ತು ೧೨ನೇ ತರಗತಿಗಳಿಗೆ ಜೀವಶಾಸ್ತ್ರ ವಿಷಯಗಳಲ್ಲಿ ಈ ಪ್ರಯೋಗವನ್ನು ಮಾಡಲು ಯೋಚಿಸಲಾಗುತ್ತಿದೆ. ಈ ಹಿಂದೆ ಕೊರೊನಾ ಸಮಯದಲ್ಲಿ ದೆಹಲಿ ವಿಶ್ವವಿದ್ಯಾಲಯವು ತೆರೆದ ಪುಸ್ತಕ ಪರೀಕ್ಷೆಯನ್ನು ಮೊದಲ ಬಾರಿಗೆ ಆಯೋಜಿಸಿತ್ತು. ಅದರ ಅನುಭವದ ಪ್ರಯೋಜನವನ್ನು ಮತ್ತು ಮಾರ್ಗದರ್ಶನವನ್ನು ಸಿಬಿಎಸ್‌ಇ ಪಡೆಯಲಿದೆ. ಸಾಮಾನ್ಯವಾಗಿ ತೆರೆದ ಪುಸ್ತಕ ಪರೀಕ್ಷೆಯ ಬಗೆಗೆ ತಪ್ಪು ಕಲ್ಪನೆ ಇದೆ. ಪರೀಕ್ಷೆ ಬರೆಯುವಾಗ ಕಣ್ಣೆದುರಿಗೆ ತೆರೆದ ಪುಸ್ತಕವಿದ್ದರೆ ಅದನ್ನು ನೋಡಿ `ನಕಲು' ಮಾಡಬಹುದು. ಹೀಗಾಗಿ ಉತ್ತರಿಸುವುದು ಸುಲಭ. ಹೆಚ್ಚು ಅಂಕಗಳನ್ನು ತೆಗೆಯಬಹುದು ಇತ್ಯಾದಿ. ಪುಸ್ತಕದಲ್ಲಿರುವ ವಿಷಯವನ್ನು ಕುರಿತು ನೇರವಾದ ಪ್ರಶ್ನೆಗಳನ್ನು ಕೇಳಿದಾಗ ಇದೆಲ್ಲ ನಿಜ. ಆದರೆ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಸಾಮಾನ್ಯ ಪರೀಕ್ಷೆಗಳಲ್ಲಿರುವಂತೆ ನೇರಾನೇರ ಪ್ರಶ್ನೆಗಳಿರುವುದಿಲ್ಲ. ಅದರ ಪ್ರಶ್ನೆ ಪತ್ರಿಕೆ ಮಾದರಿಯೇ ಬದಲಾಗಿರುತ್ತದೆ. ಉತ್ತರಿಸಲು ಬೇಕಾಗುವ ಮೂಲ ಮಾಹಿತಿ, ಅಂಕಿ ಅಂಶಗಳೇನೋ ಯಥೇಚ್ಛವಾಗಿ ಪುಸ್ತಕದಲ್ಲಿ ದೊರೆಯುತ್ತವೆ. ಆದರೆ ಪ್ರಶ್ನಿಸುವ ವಿಧ ಮತ್ತು ಅಪೇಕ್ಷಿತ ಉತ್ತರ ಎರಡೂ ಬೇರೆಯಾಗಿರುತ್ತವೆ. ಆದ್ದರಿಂದ ಉರು ಹೊಡೆದು ಅಥವಾ ಕಾಪಿ ಮಾಡಿ ಪಾಸಾಗುವ ವ್ಯವಸ್ಥೆ ಅದಲ್ಲ. ಅದು ಬರಿ ಸ್ಮರಣ ಶಕ್ತಿಯ ಪರೀಕ್ಷೆಯೂ ಅಲ್ಲ. ವಿದ್ಯಾರ್ಥಿಯು ತೆರೆದ ಪುಸ್ತಕವನ್ನು ಓದಿ ವಿಷಯವನ್ನು ತಕ್ಷಣ ಗ್ರಹಿಸಬೇಕಾಗುತ್ತದೆ. ಅಧ್ಯಯನ ಸಾಮಗ್ರಿ, ಟಿಪ್ಪಣಿ/ ನೋಟ್ಸ್ಗಳು ಮತ್ತು ಆಕರಗಳನ್ನು ತೆರೆದಿಟ್ಟುಕೊಂಡು ಅವುಗಳ ಆಧಾರದಲ್ಲಿ ನಿರ್ಣಾಯಕವಾಗಿ ಮತ್ತು ಸೃಜನಾತ್ಮಕವಾಗಿ ಯೋಚಿಸಿ ಬರೆಯಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಗುಣಮಟ್ಟದ ಚಿಂತನಾ ಕುಶಲತೆ ಬೇಕಾಗುತ್ತದೆ. ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವ ಸಾಮರ್ಥ್ಯವಿರಬೇಕಾಗುತ್ತದೆ. ನೈಜ ಜಗತ್ತಿನ ಸ್ಥಿತಿಗನುಗುಣವಾಗಿ ಯೋಚಿಸಬೇಕಾಗುತ್ತದೆ. ತರ್ಕ-ವಿತರ್ಕ ಮಾಡಬೇಕಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಇದರ ಜೊತೆಗೆ ಕೊಟ್ಟ ಸಮಸ್ಯೆಗೆ ಪರಿಹಾರವಾಗಿ ಪುಸ್ತಕದಲ್ಲಿ ದೊರೆತ ಪರಿಕಲ್ಪನೆಗಳ ಅನ್ವಯಿಕ ರೂಪವನ್ನು ಕಂಡುಕೊಳ್ಳಬೇಕಾಗುತ್ತದೆ. ಮತ್ತೊಬ್ಬರಿಗೆ ತಿಳಿಯುವಂತೆ ವಿವರಿಸಬೇಕಾಗುತ್ತದೆ ಮತ್ತು ಪ್ರದರ್ಶಿಸಬೇಕಾಗುತ್ತದೆ. ಅದಕ್ಕಾಗಿ ಪರಿಕಲ್ಪನೆಗಳ ತೀವ್ರಗ್ರಹಿಕೆ, ತೀಕ್ಷ್ಣದಾದ ತಾರ್ಕಿಕ ವಿಶ್ಲೇಷಣೆ, ಮತ್ತು ಯೋಚನಾ ಕೌಶಲಗಳನ್ನು ಹೊಂದಿರಬೇಕಾಗುತ್ತದೆ. ಆ ಮೂಲಕ ಕೊಟ್ಟ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಆದ್ದರಿಂದ ತೆರೆದ ಪುಸ್ತಕ ಪರೀಕ್ಷೆಗೆ ತೆರೆದ ಮನಸ್ಸು, ತೆರೆದ ಮೆದುಳು ಮತ್ತು ತೆರೆದ ಹೃದಯಗಳು ಬೇಕು. ಇದನ್ನೆಲ್ಲ ಮಾಡಲು, ವಿಷಯದ ಮುಖ್ಯ ಅಂಶಗಳನ್ನು ಗ್ರಹಿಸಲು, ಪ್ರಶ್ನೆಗಳ ಮುಖ್ಯ ಆಶಯಗಳನ್ನು ತಿಳಿದು ಸೂಕ್ತವಾಗಿ ಮತ್ತು ಸಮಗ್ರವಾಗಿ ಉತ್ತರಿಸಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು. ಹೀಗಾಗಿ ಇಲ್ಲಿ ಸಮಯ ಪಾಲನೆಯೂ ಮುಖ್ಯವಾಗುತ್ತದೆ. ಹೀಗೆ ಉತ್ತರಿಸಿದ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಅಷ್ಟೇ ವಿಶಿಷ್ಟವಾಗಿರುತ್ತದೆ. ಏಕೆಂದರೆ ಸಾಂಪ್ರದಾಯಿಕ ಪದ್ಧತಿಯಲ್ಲಿರುವಂತೆ ಒಂದೇ ತೆರನಾದ ಉತ್ತರ, ಮುಖ್ಯಪದಗಳನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಮೌಲ್ಯಮಾಪಕರ ಪಾತ್ರವೂ ಮುಖ್ಯವಾಗಿರುತ್ತದೆ. ಅವರು ವಿಷಯದ ವೈವಿಧ್ಯತೆಯನ್ನು, ಅದರ ಆಳ-ಹರಿವುಗಳನ್ನು ಚೆನ್ನಾಗಿಯೇ ಅರಿತಿರಬೇಕಾಗುತ್ತದೆ. ಹೀಗಾಗಿ ನಿಜವಾದ ಅರ್ಥದಲ್ಲಿ ತೆರೆದ ಪುಸ್ತಕ ಪರೀಕ್ಷೆಯು ಮತ್ತು ಅದರ ಮೌಲ್ಯಮಾಪನವು ಪರೀಕ್ಷಾರ್ಥಿ ಮತ್ತು ಪರೀಕ್ಷಕ ಇಬ್ಬರಿಗೂ ಒಂದು ಸವಾಲು ಆಗಿರುತ್ತದೆ. ಆಧುನಿಕ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಗಣಕಯಂತ್ರವನ್ನು ಉಪಯೋಗಿಸಬಹುದು. ಆದರೆ ಮೊಬೈಲು, ಬ್ಲೂಟೂಥ್ ಇತ್ಯಾದಿ ಎಲೆಕ್ಟ್ರಾನಿಕ್ ಗೆಜೆಟ್ ಹಾಗೂ ಗೂಗಲ್ ಇತ್ಯಾದಿ ಸರ್ಚ್ ಇಂಜಿನ್‌ಗಳನ್ನು ಉಪಯೋಗಿಸದಂತೆ ತಡೆಯಬೇಕಾಗುತ್ತದೆ. ಆದರ್ಶಪ್ರಾಯವೆಂದರೆ ಇವೆಲ್ಲವುಗಳನ್ನು ಉಪಯೋಗಿಸಿಯೂ ಪ್ರಶ್ನೆಗೆ ಅದೆಷ್ಟು ಉತ್ಕ್ರಷ್ಟವಾದ ಉತ್ತರ/ ಸಮಸ್ಯೆಗೆ ಅದೆಷ್ಟು ಸೂಕ್ತವಾದ ಪರಿಹಾರ ಪಡೆಯಬಹುದೆನ್ನುವುದು ಒಂದು ಉನ್ನತ ಮಟ್ಟದ ಅಪವಾದವೆನ್ನಬಹುದಾದ ಸ್ಥಿತಿಯಾಗುತ್ತದೆ. ಕೆಲವು ಕಡೆಗಳಲ್ಲಿ ಪರೀಕ್ಷೆಯ ಬದಲು `ಪೇಪರ್' ಎನ್ನುವ ರೂಢಿಯೇ ಜಾಸ್ತಿಯಾಗಿದೆ. `ಪರೀಕ್ಷೆ ಯಾವಾಗ? ಪರೀಕ್ಷೆ ಮುಗಿತಾ?' ಎನ್ನುವ ಜಾಗದಲ್ಲಿಪೇಪರ್ ಯಾವಾಗ? ಪೇಪರ್ ಮುಗಿದವಾ?” ಎಂದು ಹೇಳುವ ಪರಿಪಾಠವಾಗಿಬಿಟ್ಟಿದೆ. ಆದರೆ ಈಗ ಕೆಲವಡೆ ಪೇಪರ್‌ಲೆಸ್ ಪರೀಕ್ಷೆ ಮಾಡುತ್ತಿದ್ದಾರೆ! ಹಾಗಾಗಿ ಇನ್ನು ಮೇಲೆ `ಪೇಪರ್'' ಎನ್ನುವ ಹಾಗಿಲ್ಲ! ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಈ ಪೇಪರ್ ರಹಿತ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದಿವೆ. ದೇಶದಲ್ಲಿ ಮೊಟ್ಟ ಮೊದಲಿಗೆ ವೈದ್ಯಕೀಯ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ೨೦೦೦ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರೀಕ್ಷೆಗಳನ್ನು ನಡೆಸಿ ತಲೆದೋರಬಹುದಾದ ಸಮಸ್ಯೆಗಳನ್ನು ತಿದ್ದಿಕೊಂಡು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ೧೪೦೦ ಕಾಲೇಜುಗಳಲ್ಲಿಯೂ ಅಧಿಕೃತವಾಗಿ ಇದನ್ನು ವಿಸ್ತರಿಸಲಾಗುತ್ತಿದೆ. ಮೌಲ್ಯಮಾಪನವನ್ನೂ ಆನ್‌ಲೈನ್‌ನಲ್ಲೇ ಮಾಡಲಾಗುತ್ತದೆ. ಇದರಿಂದ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ. ಜೊತೆಗೆ ಕಾಗದಕ್ಕಾಗಿ ಬಿದಿರು, ಗಿಡಗಳನ್ನು ಕಡಿದು ಪರಿಸರ ನಾಶ ಮಾಡುವುದನ್ನು ಕೂಡ ಕಡಿಮೆ ಮಾಡಬಹುದು. ಮೌಲ್ಯಮಾಪನದ ಸಮಯವೂ ಕಡಿಮೆಯಾಗಿ ಫಲಿತಾಂಶವನ್ನು ಬೇಗನೇ ಕೊಡಬಹುದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅವ್ಯವಹಾರಗಳು ಕಡಿಮೆಯಾಗಲಿವೆ. ಪ್ರಶ್ನೆ/ಉತ್ತರ ಪತ್ರಿಕೆ ಸಾಗಾಣಿಕೆಯ ಜಂಜಾಟವೂ ತಪ್ಪಲಿದೆ. ಅನೇಕ ಸಾಫ್ಟ್‌ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳ ಆಯ್ಕೆಗಾಗಿಆನ್‌ಲೈನ್ ಪರೀಕ್ಷೆ’ಯನ್ನು ಪ್ರಾರಂಭಿಸಿದರು. ಈಗ ಅದುವೇ ಪರಿಪಾಠವಾಗಿಬಿಟ್ಟಿದೆ. ಇದರಿಂದ ಕಂಪನಿಗಳು ಸಮಯ, ಪ್ರವಾಸ ಮತ್ತು ಆರ್ಥಿಕ ಉಳಿತಾಯ ಮಾಡಿಕೊಂಡಿವೆ. ಅದರಲ್ಲಿ ಪ್ರಾಕ್ಟರ್ಡ್ ಆನ್‌ಲೈನ್ ಪರೀಕ್ಷೆ'ಗಳೂ ಇವೆ. ಪ್ರಾಯೋಗಿಕ ಕ್ಲಾಸುಗಳನ್ನು ಮತ್ತು ಪರೀಕ್ಷೆಗಳನ್ನೂ ಕೂಡ ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಅನೇಕ ವಿಷಯಗಳಲ್ಲಿ/ಪ್ರಾಯೋಗಿಕ ಪರೀಕ್ಷೆಗಳ ನಂತರ ಮೌಖಿಕ/ಸಂದರ್ಶನ ಪರೀಕ್ಷೆಗಳಿರುತ್ತವೆ. ಉದ್ದನೆ ಸರತಿ ಸಾಲಿನಲ್ಲಿ ನಿಂತಾಗತಾಳ್ಮೆಯ ಪರೀಕ್ಷೆ’ಯಾದರೆ, ವಿಷಮ ಸಂದರ್ಭಗಳಲ್ಲಿ ಸನ್ನಡತೆಯ ಪರೀಕ್ಷೆ'ಯಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವಾಗಜಾಣ್ಮೆಯ ಪರೀಕ್ಷೆ’ಯಾಗುತ್ತದೆ. ಗುಂಪು ಚರ್ಚೆಗಳಲ್ಲಿ ಹಲವಾರು ವ್ಯಕ್ತಿಗಳ ಸಾಮೂಹಿಕ ಪರೀಕ್ಷೆ' ಆಗುತ್ತಿದ್ದರೂ ಮೌಲ್ಯಮಾಪನ ಮಾತ್ರ ಪ್ರತಿ ವ್ಯಕ್ತಿಯದು ಪ್ರತ್ಯೇಕವಾಗಿಯೇ ಆಗುತ್ತದೆ. ಪರೀಕ್ಷೆ ಕಠಿಣವಾಗಿದ್ದಾಗ ಅಥವಾ ಪ್ರತಿಸ್ಪರ್ಧಿಗಳು ಬಲಿಷ್ಠರಾಗಿದ್ದಾಗ ಎದುರಾಳಿಗಳಸತ್ವಪರೀಕ್ಷೆ’ಯಾಗುತ್ತದೆ. ಅಂದರೆ ಅವರಲ್ಲಿರುವ ನಿಜವಾದ ಅಂತಃ ಸತ್ವವು ಆವಾಗ ಒರೆಗೆ ಹಚ್ಚಲ್ಪಡುತ್ತದೆ.
ರಾಮಾಯಣದ ಯುದ್ಧದ ನಂತರ ಸೀತೆ ಅಗ್ನಿಕುಂಡದಲ್ಲಿ ಹಾಯ್ದ ದ್ದುಅಗ್ನಿಪರೀಕ್ಷೆ'ಯಾಗಿತ್ತು. ತಮ್ಮ ಒಡಹುಟ್ಟಿದ ಅಣ್ಣನೇ ತನ್ನ ಏಳೂ ಹಸುಗೂಸುಗಳನ್ನು ಕೈಯಾರೆ ಕೊಲ್ಲುತ್ತಿದ್ದುದ್ದು ವಸುದೇವ-ದೇವಕಿಯರಸಹನೆಯ ಪರೀಕ್ಷೆ’ಯಾಗಿತ್ತು. ಹೀಗೆ ನಿಜಜೀವನದಲ್ಲಿ ಮನುಷ್ಯ ಅನೇಕ ಪೇಪರ್-ಪೆನ್ ರಹಿತ ತೆರೆದ ಪರೀಕ್ಷೆಗಳನ್ನು ಎದುರಿಸುತ್ತಾನೆ! ಕೆಲವೊಂದು ಪರೀಕ್ಷೆಗೆ ತಯಾರಿಯಾಗಲೂ ಸಮಯವಿರುವುದಿಲ್ಲ. ಕೆಲವೊಂದು ಪರೀಕ್ಷೆಗಳ ಆಯೋಜಿಸಲ್ಪಡುವ ದಿನಗಳು ಯಾವಾಗ ಎಂದು ಮೊದಲೇ ಗೊತ್ತಾಗುವುದಿಲ್ಲ. ತೆರೆದ ಪುಸ್ತಕ ಪರೀಕ್ಷೆಯೇ ಆಗಿರಲಿ ಅಥವಾ ಪೇಪರ್ ರಹಿತ ಪರೀಕ್ಷೆಯೇ ಆಗಿರಲಿ, ಅದನ್ನು ಎದುರಿಸುವ ವ್ಯಕ್ತಿಗೆ ಪೂರ್ವ ತಯಾರಿ ಮತ್ತು ಮಾನಸಿಕ ಸಿದ್ಧತೆ ಸರಿಯಾಗಿದ್ದರೆ ಸಾಕು. ಒಳಗಿನ ಅಥವಾ ಹೊರಗಿನ ಯಾವುದೇ ಒತ್ತಡಕ್ಕೆ ಒಳಗಾಗದೇ ಮಾನಸಿಕ ಸ್ಥಿಮಿತವನ್ನು ಕಾಯ್ದುಕೊಂಡರೆ ಎಂತಹ ಪರೀಕ್ಷೆಯನ್ನಾದರೂ ಎದುರಿಸಬಹುದು.