ದಯಾಮರಣಕ್ಕೆ ಅವಕಾಶ ಕೋರಿ ವಯೋವೃದ್ಧೆಯಿಂದ ರಾಷ್ಟ್ರಪತಿಗೆ ಪತ್ರ

ದಯಾಮರಣ
Advertisement

ರಾಣೇಬೆನ್ನೂರು: ಮಕ್ಕಳ ವರ್ತನೆಗೆ ಬೇಸತ್ತು ಹಾಗೂ ಯಾವುದೇ ರೀತಿಯ ಯೋಗಕ್ಷೇಮ ನೋಡಿಕೊಳ್ಳದೆ ಇರುವುದರಿಂದ ಮಾನಸಿಕವಾಗಿ ನೊಂದ ವಯೋವೃದ್ಧೆಯೊಬ್ಬಳು ತಮಗೆ ನ್ಯಾಯ ದೊರಕಿಸಿ ಕೊಡಿ ಇಲ್ಲವಾದಲ್ಲಿ ದಯಾಮರಣಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ರಾಣೇಬೆನ್ನೂರು ನಗರದ ನಿವಾಸಿ ಪುಟ್ಟವ್ವ ಹನುಮಂತಪ್ಪ ಕೊಟ್ಟೂರ ದಯಾಮರಣ ಕೋರಿರುವ ವೃದ್ಧೆ. ತನ್ನ ಮಕ್ಕಳ ದುರ್ವತನೆ ಹಾಗೂ ನನ್ನ ಯಾವುದೇ ರೀತಿಯ ಯೋಗಕ್ಷೇಮ ನೋಡಿಕೊಳ್ಳದಿರುವುದರಿಂದ ಮಾನಸಿಕವಾಗಿ ತುಂಬಾ ನೋವಾಗಿದೆ. ಈಗ ನನಗೆ 78 ವರ್ಷ ವಯಸ್ಸಾಗಿದೆ. ಕಳೆದ 2 ವರ್ಷದಿಂದ ನನ್ನನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ನನಗೆ ಬಿ.ಪಿ. ಇತರೆ ವಯೋಸಹಜ ಕಾಯಿಲೆಗಳು ನನಗೆ ದಿನನಿತ್ಯ ಕಾಡುತ್ತಿವೆ. ಈ ಕಾಯಿಲೆಗಳಿಗೆ ಸಂಬಂಧಪಟ್ಟ ಚಿಕಿತ್ಸೆ ಔಷಧಿ ಮತ್ತು ವೈದ್ಯಕೀಯ ಸೇವೆ ಪಡೆದುಕೊಳ್ಳಲು ಹಣ ಇಲ್ಲದೆ ಪ್ರತಿನಿತ್ಯ ಜೀವಂತ ಶವವಾಗಿ ನರಕಯಾತನೆ ಅನುಭವಿಸುವಂತಾಗಿದೆ. ಪ್ರತಿ ನಿತ್ಯ ನನ್ನ ಗೋಳಾಟವನ್ನು ಅಕ್ಕಪಕ್ಕದವರು ನನ್ನ ಕಷ್ಟಗಳನ್ನು ನನ್ನ ಮಕ್ಕಳಿಗೆ ಹೇಳಿದರೂ ಸಹ ನನ್ನ ಮಕ್ಕಳು ಕಂಡು ಕೇಳದವರಂತೆ ನನ್ನ ಕಡೆಗೆ ಗಮನಿಸದೇ ಹೋಗುತ್ತಾರೆ. ಸಮಾಜದ ಎಲ್ಲಾ ಮಕ್ಕಳಿಂದ ತಂದೆ-ತಾಯಿಗಳಿಗೆ ಸಿಗುವಂತಹ ಪ್ರೀತಿ, ವಿಶ್ವಾಸ ನನಗೆ ಯಾಕೆ ಸಿಗುತ್ತಿಲ್ಲ ಎನ್ನುವ ನೋವು ನನ್ನನ್ನು ಸದಾ ಕಾಡುತ್ತಿದ್ದು, ಎಲ್ಲಾ ತಂದೆ ತಾಯಿಗಳು ಕೊನೆಗಳಿಗೆಯಲ್ಲಿ ಮಕ್ಕಳು ಮತ್ತು ಮೊಮ್ಮಕ್ಕಳು ಸಮ್ಮುಖದಲ್ಲಿ ಕುಟುಂಬದ ಎಲ್ಲಾ ನೋವು, ನಲಿವು, ಸುಖ, ದುಃಖ ಎಲ್ಲವನ್ನು ಕಣ್ಣುತುಂಬಿಕೊಂಡಾಗ ಹೆತ್ತ ಕರಳಿನ ಜನ್ಮ ಸಾರ್ಥಕವಾಗುತ್ತೆ. ಆದರೆ, ನನ್ನ ಜೀವನದಲ್ಲಿ ಎಲ್ಲಾ ತಾಯಿಯಂದಿರಿಗೆ ಸಿಗಬೇಕಾದ ಸೌಭಾಗ್ಯಗಳು ನನಗೆ ಸಿಗುತ್ತಿಲ್ಲ. ಇನ್ನು ನನಗೆ ಈ ನರಕ ಯಾತನೆ ಅನುಭವಿಸುವ ಬದಲಾಗಿ ನಾನು ದಯಾಮರಣ ನಿರ್ಧಾರಕ್ಕೆ ಬಂದಿರುತ್ತೇನೆ ಎಂದು ಹಾವೇರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಅರ್ಜಿ ಬರೆದಿದ್ದಾರೆ.