ದಲಿತ ಕೇರಿಯಲ್ಲಿ ಮತಯಾಚಿಸಿದ ಮೈಸೂರು ರಾಜ

Advertisement

ಬಳ್ಳಾರಿ: ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಒಡೆಯರ್ ಅವರು ನಗರದ ೧೭ನೇ ವಾರ್ಡ್‌ನ ಗೋನಾಳ ಗ್ರಾಮದ ದಲಿತ ಕೇರಿಯಲ್ಲಿ ಶನಿವಾರ ಪ್ರಚಾರ ನಡೆಸಿದರು.
ದಲಿತಕೇರಿಯಲ್ಲಿ ಓಡಾಡಿ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಮಚಯಾಚನೆ ಮಾಡಿದ ಮೈಸೂರು ರಾಜ ಯದುವೀರ ಅವರು, ದಲಿತರ ಮನೆಯಲ್ಲಿ ಎಳೆನೀರು ಸೇವಿಸಿ, ಕುಶಲೋಪರಿ ವಿಚಾರಿಸಿದರು. ದಲಿತರ ಜೊತೆಗೆ ನಾವಿದ್ದೇವೆ ಎಂದು ಕೇರಿಯ ಜನರಲ್ಲಿ ವಿಶ್ವಾಸ ಮೂಡಿಸಿದರು. ಈ ವೇಳೆ ಮನೆಯೊಂದರಲ್ಲಿ ದಲಿತರು ಯದುವೀರ ಅವರನ್ನು ಸನ್ಮಾನಿಸಿ, ಅಂಬೇಡ್ಕರ್ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಹಂಪಿ, ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಬಾರಿ ಬಂದಿದ್ದೇನೆ. ರಾಜಕೀಯ ಪ್ರಚಾರಕ್ಕೆ ಇದೇ ಮೊದಲ ಬಾರಿ ಬಂದಿದ್ದೇನೆ. ಇದಕ್ಕೂ ಮುನ್ನ ಜೈನ್ ಮಾರುಕಟ್ಟೆ ಮತ್ತು ಇದೀಗ ಗೋನಾಳ ದಲಿತ ಕೇರಿಯಲ್ಲಿ ಪ್ರಚಾರ ಮಾಡಿದ್ದೇನೆ ಎಂದರು.
ಮೈಸೂರಿನ ಸಂಸ್ಥಾನಕ್ಕೂ ಸಂವಿಧಾನಕ್ಕೂ ಅವಿನಾಭಾವ ಸಂಬಂಧವಿದೆ ಎಂದ ಯುವರಾಜ ಯದುವೀರ, ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಮೈಸೂರಿನ ಪ್ರಜಾ ಪ್ರತಿನಿಧಿ ಸಮಯವನ್ನು ಉಲ್ಲೇಖಿಸಿದ್ದಾರೆ. ಅಂದಿನ ಕಾಲದಿಂದಲೂ ದಲಿತರಿಗೆ ಸಮಾನ ಅವಕಾಶ ನೀಡುತ್ತಾ ಬಂದಿದ್ದೇವೆ. ಸಾಮಾನ್ಯ ಜನರ ಜೊತೆಗೆ ಮೈಸೂರಿನ ಮಹಾರಾಜ ಸದಾಕಾಲವೂ ಇದ್ದಾರೆ. ಒಗ್ಗಾಟ್ಟಾಗಿ ಎಲ್ಲರೂ ಭಾರತೀಯರಾಗಿ ಇರೋಣ. ಮಹಾರಾಜರ ಕುಟುಂಬ ಎಲ್ಲ ವರ್ಗದ ಜೊತೆಗೆ ಅಂದು ಮೈಸೂರಿನವರಾಗಿ ಇದೀಗ ಭಾರತೀಯರಾಗಿ ಇದ್ದೇವೆ ಎಂದು ತಿಳಿಸಿದರು.