ದಶಕ ಸಾಧನೆ ಅವಲೋಕನಕ್ಕೆ ಶ್ವೇತಪತ್ರಗಳ ಸಮರ

Advertisement

ಯುಪಿಎ ಸರ್ಕಾರ ೨೦೦೪ ರಿಂದ ೨೦೧೪ವರೆಗೆ ಆಡಳಿತ ನಡೆಸಿತು. ೨೦೧೪ ರಿಂದ ೨೦೨೪ ವರೆಗೆ ಎನ್‌ಡಿಎ ಆಡಳಿತ ನಡೆಯಿತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ಆರಂಭಗೊಂಡಿದೆ. ಎರಡೂ ಸರ್ಕಾರಗಳ ಸಾಧನೆಯ ಮೌಲ್ಯಮಾಪನ ನಡೆಯುತ್ತಿದೆ. ಎರಡೂ ರಾಜಕೀಯ ಪಕ್ಷಗಳ ಒಕ್ಕೂಟ ತಮ್ಮದೇ ಆದ ಶ್ವೇತಪತ್ರಗಳನ್ನು ಬಿಡುಗಡೆ ಮಾಡಿ ತಮ್ಮ ಸಾಧನೆಯನ್ನು ದೊಡ್ಡ ಸಾಧನೆಯಾಗಿ ಹೇಳಿಕೊಂಡಿವೆ. ಈಗ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿ ಮೂರು ತಿಂಗಳ ಲೇಖಾನುದನ ಪಡೆದುಕೊಂಡಿದೆ. ಜುಲೈ ನಂತರ ಹೊಸ ಸರ್ಕಾರ ಹೊಸ ಬಜೆಟ್ ಮಂಡಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಜತೆ ೧೦ ವರ್ಷಗಳ ಆಡಳಿತವನ್ನು ಅವಲೋಕಿಸಿ ಶ್ವೇತಪತ್ರವನ್ನೂ ಪ್ರಸ್ತಾಪಿಸಿದ್ದಾರೆ. ಹಿಂದಿನ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಎರಡೂ ಸರ್ಕಾರಗಳ ೧೦ ವರ್ಷಗಳ ಸಾಧನೆಯನ್ನು ಪರಿಶೀಲಿಸಿದಾಗ ಯುಪಿಎ ಸರ್ಕಾರದ ಸಾಧನೆಯನ್ನು ಕಡೆಗಣಿಸಲು ಬರುವುದಿಲ್ಲ. ಯುಪಿಎ ಸರ್ಕಾರ ಉತ್ತಮ ಆಡಳಿತ ನೀಡಿತ್ತು ಎಂಬುದು ಅಂಕಿಅಂಶಗಳಿಂದ ಬಹಿರಂಗಗೊಂಡಿದೆ. ಹೋಲಿಕೆ ಮಾಡಿದಾಗ ಹಿಂದಿನ ಸರ್ಕಾರದ ಸಾಧನೆ ಗಮನಾರ್ಹವಾಗಿ ಕಂಡುಬರುವುದಿಲ್ಲ. ಆದರೆ ಅಂಕಿಅಂಶಗಳು ಬೇರೆಯದನ್ನೇ ಹೇಳುತ್ತದೆ.
೨೦೦೪-೦೫ ವರ್ಷವನ್ನೂ ಮೂಲವಾಗಿ ಇಟ್ಟುಕೊಂಡಲ್ಲಿ ಯುಪಿಎ ಸರ್ಕಾರ ಸಾಧನೆ ಗಮನಾರ್ಹ. ಸರಾಸರಿ ಆರ್ಥಿಕ ಬೆಳವಣಿಗೆ ಶೇ. ೭.೫. ಬಿಜೆಪಿ ಸರ್ಕಾರ ೨೦೧೫ ವರ್ಷವನ್ನು ಮೂಲವಾಗಿ ಪರಿಗಣಿಸಿ ಯುಪಿಎ ಸಾಧನೆ ಏನೂ ಇಲ್ಲ ಎಂದು ಹೇಳುತ್ತಿದೆ. ಆದರೂ ಸರಾಸರಿ ಬೆಳವಣಿಗೆ ಶೇ. ೬.೭ ಇದ್ದೇ ಇದೆ. ಎನ್‌ಡಿಎ ಬೆಳವಣಿಗೆ ಸರಾಸರಿ ಶೇ. ೫.೯. ಅಂತರ ಗಮನಾರ್ಹ. ಜಿಡಿಪಿಯಲ್ಲಿ ಶೇ. ೧.೬ ಅಂತರದ ಪರಿಣಾಮ ತಲಾವಾರು ಆದಾಯ, ಸರಕು ಮತ್ತು ಸೇವಾ ವಲಯದಲ್ಲಿ ಬೆಳವಣಿಗೆ, ರಫ್ತು ಪ್ರಮಾಣ ಏರಿಕೆ, ವಿತ್ತೀಯ ಮತ್ತು ಕಂದಾಯದ ಕೊರತೆ ಸೇರಿದಂತೆ ಹಲವು ಮಾನದಂಡಗಳಲ್ಲಿ ಯುಪಿಎ ಮುಂದಿತ್ತು ಎಂಬುದರಲ್ಲಿ ಸಂದೇಹವಿಲ್ಲ.
ಎನ್‌ಡಿಎ ಕಾಲದಲ್ಲಿ ಸಾರ್ವಜನಿಕ ಹಣ ನಿರ್ವಹಣೆ ಸಮರ್ಪಕವಾಗಿರಲಿಲ್ಲ. ಸಾಲದ ಪ್ರಮಾಣ ಅಧಿಕಗೊಂಡಿತ್ತು. ಬ್ಯಾಂಕ್ ಅನುತ್ಪಾದಕ ಸಾಲ ಮನ್ನಾ, ಗೃಹಕೃತ್ಯ ಸಾಲ ಅಧಿಕಗೊಂಡಿತು. ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನ ಇಳಿಮುಖ. ಕೆಲವು ಮಾನದಂಡಗಳಲ್ಲಿ ಎನ್‌ಡಿಎ ಉತ್ತಮವಾಗಿತ್ತು. ಯುಪಿಎ ಸಾಧನೆ ಬಗ್ಗೆ ಹೇಳುವಾಗ ಬಿಜೆಪಿ ಕೆಲವು ಹಸಿ ಸುಳ್ಳುಗಳನ್ನು ಪ್ರಚುರ ಪಡಿಸಿದೆ. ನೋಟು ರದ್ದತಿ, ಸಣ್ಣ ಅತಿ ಸಣ್ಣ ಕೈಗಾರಿಕೆಗಳ ಅವಸಾನ ಗಣನೆಗೆ ಬಂದಿಲ್ಲ. ಆಧಾರ್ ಮತ್ತು ಮೊಬೈಲ್ ಮೂಲಕ ಡಿಜಿಟಲ್ ವ್ಯವಹಾರ ಯುಪಿಎ ಕಾಲದಲ್ಲೇ ಆರಂಭಗೊಂಡಿತ್ತು. ಯುಪಿಎ ಕಾಲದಲ್ಲಿ ೨೦೦೮-೨೦೧೨ ಅವಧಿ ತೃಪ್ತಿಕರವಾಗಿರಲಿಲ್ಲ. ಪ್ರಣಬ್ ಮುಖರ್ಜಿ ಆಗ ಹಣಕಾಸು ಸಚಿವರು. ಕಠಿಣ ಕಾಲದಲ್ಲೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದರು. ವಿತ್ತೀಯ ಕೊರತೆ ಮತ್ತು ಹಣದುಬ್ಬರ ಅಧಿಕವಾಗಿತ್ತು.
ಶ್ವೇತಪತ್ರ ಮಂಡನೆಯಲ್ಲಿ ರಾಜಕೀಯವೇ ಪ್ರಮುಖವಾಗಿದೆ. ಯುಪಿಎ ಸರ್ಕಾರದ ಪರವಾಗಿರುವ ಶ್ವೇತಪತ್ರ ಕೂಡ ಒಂದು ಮುಖ ತೋರಿಸುತ್ತದೆ. ಕೃಷಿ ರಂಗದ ಬೆಳವಣಿಗೆಯಲ್ಲಿ ಕುಂಠಿತ, ನಿರುದ್ಯೋಗ, ಪಟ್ಟಭದ್ರರ ಮೇಲುಗೈ ಉಲ್ಲೇಖಗೊಂಡಿಲ್ಲ. ಬಿಜೆಪಿ ಕಾಲದಲ್ಲಿ ತನಿಖಾ ಸಂಸ್ಥೆಗಳ ಸಬಲೀಕರಣ, ಚೀನಾ ಆಕ್ರಮಣ, ಮಣಿಪುರದ ದುರಂತಗಳು ಉಲ್ಲೇಖಗೊಂಡಿಲ್ಲ. ಎರಡೂ ಶ್ವೇತಪತ್ರದಲ್ಲಿ ಅರ್ಥಿಕ ವಿಷಯ ಗೌಣ. ಸಂಸತ್ತಿನ ಉಭಯ ಸದನಗಳಲ್ಲಿ ಇದರ ಚರ್ಚೆ ನಡೆಯಬೇಕಿತ್ತು. ಮುಂಬರುವ ದಿನಗಳಲ್ಲಿ ಇದರ ಬಗ್ಗೆ ಎಲ್ಲ ಕಡೆ ಚರ್ಚೆ ನಡೆಯಬಹುದು. ಲೋಕಸಭೆ ಚುನಾವಣೆಗೆ ಇದು ಪ್ರಮುಖವಾಗಲಿದೆ.