ದಾವೂಸ್: 22ಸಾವಿರ ಕೋಟಿ ಹೂಡಿಕೆ ಒಡಂಬಡಿಕೆಗೆ ಸಹಿ!

Advertisement

ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸ್ವಿಟ್ಜರ್ ಲ್ಯಾಂಡಿನ ದಾವೂಸ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಮೇಳದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಯೋಜನೆಗಳಲ್ಲಿ ವೆಬ್ ವರ್ಕ್ಸ್ ಕಂಪನಿಯು ರಾಜ್ಯದಲ್ಲಿ ಸ್ಥಾಪಿಸಲಿರುವ 100 ಮೆಗಾವ್ಯಾಟ್ ಸಾಮರ್ಥ್ಯದ, 20 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಡೇಟಾ ಸೆಂಟರ್ ಪಾರ್ಕ್ ಯೋಜನೆ ಪ್ರಮುಖವಾಗಿದೆ.
ಜತೆಗೆ ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪೆಕಾರ್ಡ್ (ಎಚ್.ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ ಬೇಸ್, ಟಕೇಡಾ ಫಾರ್ಮಾ, ಬಿಎಲ್ ಆಗ್ರೋ ಇತ್ಯಾದಿ ಕಂಪನಿಗಳೊಂದಿಗೆ 2,000 ಕೋಟಿ ರೂ. ಮೌಲ್ಯದ ಹೂಡಿಕೆಗಳಿಗೆ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.
ಮೈಕ್ರೋಸಾಫ್ಟ್ ಕಂಪನಿಯು ಕೌಶಲ್ಯಾಭಿವೃದ್ಧಿ ಮತ್ತು ಸುಗಮ ಆಡಳಿತ ಉಪಕ್ರಮಗಳ ತರಬೇತಿ ಕೊಡಲಿದೆ.
ಹಿಟಾಚಿ ಕಂಪನಿಯು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಇ-ಗವರ್ನೆನ್ಸ್ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲಿದೆ.
ಲುಲು ಸಮೂಹವು 300 ಕೋಟಿ ರೂ. ಹೂಡಿಕೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆಯಲ್ಲಿ ತೊಡಗಿಕೊಳ್ಳಲು ಉತ್ಸುಕವಾಗಿದೆ.
ಟಕೇಡಾ ಫಾರ್ಮಾ, ಬೆಂಗಳೂರಿನಲ್ಲಿ ತನ್ನ ಗ್ಲೋಬಲ್ ಕೆಪಾಸಿಟಿ ಸೆಂಟರ್ ತೆರೆಯಲು ಮುಂದೆ ಬಂದಿದೆ.
ಈ ಒಡಂಬಡಿಕೆಗಳು ಕಾರ್ಯರೂಪಕ್ಕೆ ಬರುವ ಮೂಲಕ ರಾಜ್ಯವು ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಕಾಣಲಿದೆ ಎಂದಿದ್ದಾರೆ.