ದೆಹಲಿಯಲ್ಲಿ ದಲ್ಲಾಳಿಗಳಿಗೆ ಈಗ ಜಾಗವಿಲ್ಲ

Advertisement

ಹುಬ್ಬಳ್ಳಿ: ರಾಜಧಾನಿ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ೨೦೧೪ರ ಮುಂಚೆ ದಲ್ಲಾಳಿಗಳದ್ದೇ ದರ್ಬಾರಾಗಿತ್ತು. ಈಗ ಈ ಎಲ್ಲ ಗಲ್ಲಿಗಳನ್ನು ಶುಚಿಗೊಳಿಸಲಾಗಿದೆ. ದಲ್ಲಾಳಿಗಳು ಬೇರೆ ಊರುಗಳಲ್ಲಿ ಅಂಗಡಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೊಸಪೇಟೆಯ ರ‍್ಯಾಲಿಯಲ್ಲಿ ಕಾಂಗ್ರೆಸ್ ಉದ್ದೇಶಿಸಿ ವ್ಯಂಗ್ಯವಾಡಿದರು.
ವಿಕಸಿತ ಭಾರತದ ಕಲ್ಪನೆಯ ಅನ್ವಯ ಮಾತ್ರ ಈಗ ದೇಶದ ಅಭಿವೃದ್ಧಿಯಾಗುತ್ತಿದೆ. ಮಧ್ಯವರ್ತಿಗಳು, ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಏಜೆಂಟರು ಇವರಿಗೆ ಈಗ ದೆಹಲಿ ಅಂಗಳದಲ್ಲಿ ಜಾಗವಿಲ್ಲ. ಇಂಥವರನ್ನು ಪೋಷಿಸಿದ್ದ ಕಾಂಗ್ರೆಸ್‌ಅನ್ನು ಜನತೆ ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದರು.
ಬಿಜೆಪಿಯ ಅಭಿವೃದ್ಧಿ ಪಥದಲ್ಲಿ ಕಲ್ಯಾಣ ಕರ್ನಾಟಕದ ಬಳ್ಳಾರಿ, ಕೊಪ್ಪಳ, ಕಲಬುರಗಿ, ರಾಯಚೂರು ಮೊದಲಾದ ಎಲ್ಲೆಡೆ ಜನಜೀವನ ಸುಧಾರಿಸುತ್ತಿದೆ. ಕೊಪ್ಪಳದ ಆಟಿಕೆ ಕ್ಲಸ್ಟರ್ ದೇಶದ ಹೆಮ್ಮೆಯಾಗಿದೆ ಎಂದರು.
`ಇಷ್ಟು ದೊಡ್ಡ ಹಾಗೂ ಒಳ್ಳೆಯ ಪರಂಪರೆಯ ದೇಶ ಕೋಟಿಗಟ್ಟಲೇ ಮೌಲ್ಯದ ಆಟಿಕೆ ಸಾಮಾನುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಾಲವಿತ್ತು. ಕೊಪ್ಪಳ ಕ್ಲಸ್ಟರ್ ಮೂಲಕ ಹಾಗೂ ದೇಶದ ಇನ್ನಿತರ ಘಟಕಗಳ ಉತ್ಪಾದನೆಯಿಂದ ಈಗ ನಾವೇ ಇವನ್ನು ರಫ್ತು ಮಾಡುತ್ತಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿದರು.