ದೇವರು ನಿಮ್ಮ ಸಂರಕ್ಷಕನಾಗಿರಲಿ..

Advertisement

ಹೋಗಿ ಬನ್ನಿ, ಬನ್ನಿ ಸುಸ್ವಾಗತ, ಖುದಾ ಹಾಫೀಜ್, ಬರ್ತೀನಿ ಮುಂತಾದ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ದೇವರು ನಿಮ್ಮ ಸಂರಕ್ಷಕನಾಗಿರಲಿ ಎಂಬ ಹಿತ ಚಿಂತನೆ ತುಂಬಿರುತ್ತದೆ. ಹಿತ ಚಿಂತನೆಯ ನಮ್ಮ ಹಾರೈಕೆಗಳು ಇನ್ನೊಬ್ಬರಿಗೆ ನಮ್ಮ ಪ್ರೀತಿ, ವಿಶ್ವಾಸಗಳ ಕವಚಗಳನ್ನು ನೀಡುತ್ತವೆ.
ಕುರಾನಿನ ಅರಾಫ್ ಅಧ್ಯಾಯ (೭:೬೨) ರಲ್ಲಿ ಪ್ರವಾದಿವರ್ಯ ಮೊಹಮ್ಮದ್ (ಸ) ಅವರು ನಾನು ನನ್ನ ಒಡೆಯನ ಸಂದೇಶಗಳನ್ನು ನಿಗೆ ತಲುಪಿಸುತ್ತಿದ್ದೇನೆ. ನಾನು ನಿಮ್ಮ ಹಿತ ಚಿಂತಕನಾಗಿದ್ದೇನೆ..' ಪ್ರವಾದಿವರ್ಯರ ಇನ್ನೊಂದು ಉಪದೇಶದಲ್ಲಿಧರ್ಮವೆಂದರೆ ಇನ್ನೊಬ್ಬರ ಹಿತಾಕಾಂಕ್ಷೆಯಾಗಿದೆ’ ಎಂದು ಅನೇಕ ಸಾರಿ ಹೇಳಿದ್ದಾರೆ. ಒಬ್ಬರಿಗೊಬ್ಬರ ಹಿತ ಚಿಂತನೆ ನಾಗರಿಕ ಸಮಾಜದ ಲಕ್ಷಣವೆಂದು ಬೇರೆ ಹೇಳಬೇಕಾಗಿಲ್ಲ. ಹಿತ ಚಿಂತನೆಯ ಕೆಲವು ಹಿತವಚನಗಳನ್ನು ಗಮನಿಸಿರಿ.
ಸಮಾಜದಲ್ಲಿ ಎಲ್ಲರ ಸುಧಾರಣೆಗಾಗಿ ಒಳತಿಗಾಗಿ ಚಿಂತಿಸಬೇಕು. ಬೇರೆ ಯವರ ತಪ್ಪುಗಳನ್ನು ಪ್ರಚುರ ಪಡಿಸಬಾರದು. ಎಲ್ಲರೂ ತಮ್ಮಂತೆ ಎಂದು ಭಾವಿಸಬೇಕು. ಬೇರೆಯವರ ಸುಖ ದುಃಖಗಳಲ್ಲಿ ಭಾಗಿ ಯಾಗಬೇಕು.ಕುರಾನ್ ಮತ್ತೆ ಹೇಳುತ್ತದೆ ಅಧ್ಯಾಯ ಅಲ್ಹಹುಜುರಾತ (೪೯:೧೦) ಎಲ್ಲರೂ ಪರಸ್ಪರ ಸಹೋದರರು ಒಬ್ಬರಿಗೊಬ್ಬರು ಸಂಧಾನ ಏರ್ಪಡಿಸಿ ಬದುಕಿರಿ' ಎಂದು. ಧರ್ಮ ಮತ್ತು ವಿಶ್ವಾಸಗಳ ಸಂಬಂಧವೂ ಎಲ್ಲ ಸಂಬಂಧಗಳಿಗಿಂತ ಬಲಿಷ್ಠವಾಗಿರುತ್ತದೆ. ಪ್ರವಾದಿಯವರ್ಯ ಮೊಹಮ್ಮದ್ (ಸ) ಅವರು ಮತ್ತೊಬ್ಬರ ಹಿತ ಚಿಂತನೆಯನ್ನು ಕುರಿತುಇತರರು ತನ್ನೊಂದಿಗೆ ಯಾವ ರೀತಿ ವರ್ತಿಸಬೇಕೆಂದು ಬಯಸುತ್ತಾರೋ ಅದೇ ರೀತಿಯಲ್ಲಿ ಅವನು ಅವರೊಂದಿಗೆ ವರ್ತಿಸಬೇಕು. ಸಾರ್ಥಕ ಜೀವನವು ರಸ್ಪರ ಹಿತ ಚಿಂತನೆಯಲ್ಲಿರುತ್ತದೆ. ಬದುಕಿನಲ್ಲಿ ನಾವು ಮಾಡುವ ಒಳ್ಳೆಯ ಹಾರೈಕೆಗಳಿಂದ ನಾವು ಇಲ್ಲದಾಗಲೂ ಸಹ ಜನ ನಮ್ಮನ್ನು ನೆನಪಿಸುತ್ತಾರೆ’.
ಬನ್ನಿ ಒಳಗೆ, ಬನ್ನಿ ಕುಳಿತುಕೊಳ್ಳಿ, ಹೇಗೆ ಇದ್ದೀರಿ ಎಂದು ಮುಂತಾದ ಹಿತಾಸಕ್ತಿಯ ಮಾತುಗಳಿಂದ ಶರಣರು ಅನೇಕ ಸಾರಿ ನಮ್ಮನ್ನು ನೆನಪಿಸಿದ್ದಾರೆ. ಪ್ರೀತಿ, ಅಂತಃಕರುಣೆ, ಅನುಕಂಪ, ಪರೋಪಕಾರ ಗುಣಗಳು ಇತರರ ಹಿತ ಚಿಂತನೆಗೆ ಪ್ರೇರೇಪಿಸುತ್ತವೆ. ಹಾರೈಕೆ ಹಿತ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣವಾಗಬಲ್ಲದು. ಹಾರೈಕೆಗಳು ಆಳವಾದ ಆಸಕ್ತಿಯ ಹಿತ ಚಿಂತನೆಗಳು. ಪರಸ್ಪರ ಬಾಂಧವ್ಯವನ್ನು ಬೆಸೆಯುತ್ತವೆ.
ಪ್ರವಾದಿವರ್ಯರ ಇನ್ನೊಂದು ವಚನವನ್ನು ಗಮನಿಸಬೇಕು `ನೀವು ಪ್ರತಿಯೊಬ್ಬರೂ ಸಮಾಜದಲ್ಲಿ ನಿಮ್ಮ ಸಹೋದರನ ಕನ್ನಡಿಯಾಗಿದ್ದೀರಿ. ಪರಸ್ಪರ ಹಿತ ಚಿಂತನೆಯಲ್ಲಿ ತೊಡಗಿರಿ. ನಿಮ್ಮ ನಿಮ್ಮಲ್ಲಿ ತಪ್ಪು ಕಂಡು ಬಂದರೆ ಸರಿಪಡಿಸುವ ಸಲಹೆ ನೀಡಿರಿ’. ಈಗ ನಮ್ಮಲ್ಲಿರುವುದೆಲ್ಲವೂ ಇನ್ನೊಬ್ಬರ ಹಿತಾಕಾಂಕ್ಷೆಯಿಂದಲೇ ಬಂದದ್ದು.