ದೇಶಕ್ಕೆಲ್ಲಾ ಒಂದೇ ಚುನಾವಣೆ ಮಾನಸಿಕ ಹಿಂಜರಿತವೇ ಅಡ್ಡಿ

Advertisement

ಒಂದು ದೇಶ ಒಂದೇ ಚುನಾವಣೆ ಕಾರ್ಯಸಾಧುವಾಗಬೇಕು ಎಂದರೆ ಎಲ್ಲ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ವ್ಯಕ್ತಪಡಿಸಬೇಕು. ವ್ಯಾಪಕ ಚರ್ಚೆ ಬೇಕು. ಜನಾಭಿಪ್ರಾಯ ಸಂಗ್ರಹವಾಗಬೇಕು.

ದೇಶಕ್ಕೆಲ್ಲ ಸಂಬಂಧಿಸಿದಂತೆ ಒಂದೇ ಚುನಾವಣೆ ನಡೆಸಬೇಕು ಎಂಬ ಆಲೋಚನೆ ಆಕರ್ಷಕವಾಗಿ ಕಂಡು ಬರುವುದರಲ್ಲಿ ಸಂದೇಹವಿಲ್ಲ. ಆದರೆ ಇದಕ್ಕೆ ನೂರಾರು ಅಡ್ಡಿ ಆತಂಕಗಳಿರುವುದಂತೂ ನಿಜ. ಪ್ರಮುಖವಾಗಿ ರಾಜಕೀಯ ಪಕ್ಷಗಳು ಮಾನಸಿಕವಾಗಿ ಈ ಆಲೋಚನೆಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಹಳೆಯ ಪದ್ಧತಿಯೇ ಉತ್ತಮ ಎಂಬ ಯಥಾಸ್ಥಿತಿವಾದ ಬಹುತೇಕ ಎಲ್ಲ ಕಡೆ ಕಂಡು ಬರುತ್ತಿದೆ. ಇವುಗಳ ನಡುವೆ ಒಂದೇ ಚುನಾವಣೆ ನಡೆಸುವ ಬಗ್ಗೆ ಚಿಂತನೆ ನಡೆದುಕೊಂಡು ಬಂದಿದೆ. ೧೯೯೯ ರಲ್ಲಿ ಕಾನೂನು ಆಯೋಗ ಇದನ್ನು ಸೂಚಿಸಿತು. ೨೦೧೫ರಲ್ಲಿ ಸಂಸದೀಯ ಸ್ಥಾಯಿ ಸಮಿತಿ ಇದರ ಬಗ್ಗೆ ಚರ್ಚೆ ನಡೆಸಿತ್ತು. ಈಗ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ದೇಶಕ್ಕೆಲ್ಲ ಒಂದೇ ಚುನಾವಣೆ ನಡೆಸುವುದು ಹೊಸತೇನಲ್ಲ.೧೯೫೨ ರಿಂದ ೧೯೬೭ ವರೆಗೆ ನಾಲ್ಕು ಚುನಾವಣೆ ಏಕಕಾಲಕ್ಕೆ ನಡೆದವು. ನಂತರದ ದಿನಗಳಲ್ಲಿ ರಾಜ್ಯ ಸರ್ಕಾರಗಳನ್ನುö ವಜಾ ಮಾಡುವ ಕೆಲಸ ಆರಂಭಗೊಂಡ ಮೇಲೆ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆ ಏಕಕಾಲಕ್ಕೆ ನಡೆಯುವುದು ತಪ್ಪಿ ಹೋಯಿತು. ಈಗ ಇದನ್ನು ಜಾರಿಗೆ ತರಬೇಕು ಎಂದರೆ ಸಂವಿಧಾನದಲ್ಲಿ ೫ ತಿದ್ದುಪಡಿಗಳನ್ನು ತರಬೇಕು. ರಾಷ್ಟ್ರೀಯ ಪಕ್ಷಗಳು ಹೊಸ ಆಲೋಚನೆಯನ್ನು ಸ್ವಾಗತಿಸುವುದು ಸಹಜ. ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಕಷ್ಟ. ಹಣ ಮತ್ತು ಸಂಪನ್ಮೂಲ ಕ್ರೋಡೀಕರಿಸಿಕೊಳ್ಳುವುದು ಕಷ್ಟವಾಗಲಿದೆ. ೫ ವರ್ಷಕ್ಕೊಮ್ಮೆ ಚುನಾವಣೆ ಎಂದಾದರೆ ರಾಜ್ಯಗಳಲ್ಲಿ ಸರ್ಕಾರಗಳು ಮಧ್ಯಂತರ ಸೋಲು ಕಂಡಲ್ಲಿ ಏನು ಮಾಡಬೇಕು ಎಂಬುದು ಸ್ಪಷ್ಟಗೊಂಡಿಲ್ಲ. ಅಲ್ಲದೆ ಕೆಲವು ರಾಜ್ಯಗಳಲ್ಲಿ ತ್ರಿಶಂಕು ವಿಧಾನಸಭೆ ಆದಲ್ಲಿ ಏನು ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು. ಹಿಂದೆ ಮತದಾರರ ಸಂಖ್ಯೆ, ಅಭ್ಯರ್ಥಿಗಳ ಸಂಖ್ಯೆ, ರಾಜಕೀಯ ಪಕ್ಷಗಳ ಸಂಖ್ಯೆ ಕಡಿಮೆಇತ್ತು. ಈಗ ಸ್ಪರ್ಧಿಗಳ ಸಂಖ್ಯೆ ಅಧಿಕಗೊಂಡಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವುದರಿಂದ ಮತದಾನದ ವ್ಯವಸ್ಥೆ ಮಾಡುವುದು ಕಷ್ಟವೇನಲ್ಲ. ಚುನಾವಣೆ ಕಾಲದಲ್ಲಿ ಕಾನೂನು ಪರಿಪಾಲನೆ ಕಷ್ಟ. ಈಗ ಕೆಲವು ಕಡೆ ಅರೆ ಸೇನಾ ಪಡೆ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಿಗಿಂತ ಹಲವು ಪಕ್ಷಗಳ ಮೈತ್ರಿ ಕೂಟ ರಚಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಪ್ರತಿ ರಾಜ್ಯದಲ್ಲಿ ಒಂದು ರಾಜಕೀಯ ಪಕ್ಷ ಪ್ರಾಬಲ್ಯ ಪಡೆದಿರುತ್ತದೆ. ಏಕಕಾಲಕ್ಕೆ ಚುನಾವಣೆ ನಡೆದರೆ ಇವುಗಳಿಗೆ ಕಷ್ಟವಾಗಲಿದೆ. ಹಿಂದೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವ ಕೆಲಸ ಕೈಗೊಳ್ಳುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ಯಾವುದೇ ಸರ್ಕಾರದ ಹಣೆ ಬರಹ ವಿಧಾನಸಭೆಯಲ್ಲೇ ತೀರ್ಮಾನವಾಗಬೇಕು. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ತರುವುದು ಕಷ್ಟ. ಹಲವು ಆಯಾಮಗಳನ್ನು ಹೊಂದಿರುವ ಈ ವಿಷಯದಲ್ಲಿ ಸುದೀರ್ಘ ಚರ್ಚೆ ಅಗತ್ಯ. ಲೋಕಸಭೆಯಲ್ಲಿ ಬಹುಮತ ಇದೆ ಎಂದು ಕೂಡಲೇ ಜಾರಿಗೆ ತರಲು ಬರುವುದಿಲ್ಲ. ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಸದಸ್ಯರು ಒಪ್ಪಬೇಕು. ಶೇಕಡ ೫೦ಕ್ಕಿಂತ ಹೆಚ್ಚು ರಾಜ್ಯಗಳು ಒಪ್ಪಿಗೆ ನೀಡಬೇಕು. ಮಾಜಿ ರಾಷ್ಟ್ರಪತಿ ನೇತೃತ್ವದ ಸಮಿತಿ ವರದಿ ನೀಡಿದ ಮೇಲೆ ಸಂಸತ್ತು ತೀರ್ಮಾನ ಕೈಗೊಳ್ಳಬೇಕು. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ಚುನಾವಣೆ. ಅದನ್ನು ಪಾರದರ್ಶಕವಾಗಿ ನಡೆಸಿದರೆ ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚುತ್ತದೆ. ಹಿಂದೆ ಮತದಾನಕ್ಕೆ ಬ್ಯಾಲೆಟ್ ಬಳಸಲಾಗುತ್ತಿತ್ತು. ಈಗ ಎಲೆಕ್ಟಾçನಿಕ್ ಮತಯಂತ್ರಗಳನ್ನು ಬಳಸುತ್ತಿದ್ದೇವೆ. ಚಂದ್ರಯಾನ- ಸೂರ್ಯಯಾನ ಕೈಗೊಳ್ಳುವ ನಮಗೆ ಚುನಾವಣೆ ನಡೆಸುವುದು ಕಷ್ಟವಾಗಬಾರದು. ಆದರೆ ರಾಜಕೀಯ ಕಾರಣಗಳಿಂದ ಎಲ್ಲವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ದೇಶದ ಯಾವುದಾದರೊಂದು ಮೂಲೆಯಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಇದರಿಂದ ನೀತಿ ಸಂಹಿತೆ ಜಾರಿಗೆ ಬಂದು ಅಭಿವೃದ್ಧಿ ಕಾಮಗಾರಿಗಳ ವೇಗ ಇಳಿಮುಖಗೊಳ್ಳುತ್ತದೆ. ಇದೆಲ್ಲವನ್ನೂ ನೋಡಿದಾಗ ಒಂದೇ ಚುನಾವಣೆ ಉತ್ತಮ. ಆದರೆ ಇದನ್ನು ಜಾರಿಗೆ ತರುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಯಬೇಕು. ಸಂಸದರು ಮತ್ತು ಶಾಸಕರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನೇರವಾಗಿ ಭಾಗವಹಿಸುವುದು ಸಹಜ.