ದೇಶದ ವೈದ್ಯರು, ವಿಜ್ಞಾನಿಗಳಲ್ಲಿ ಅಪರಿಮಿತ ಸಾಮರ್ಥ್ಯ: ಜೋಶಿ

Advertisement

ಹುಬ್ಬಳ್ಳಿ: ಭಾರತ ಇಂದು ಮೆಡಿಕಲ್ ಹಬ್ ಆಗಿ ಹೊರ ಹೊಮ್ಮುತ್ತಿದೆ. ವೈದ್ಯಕೀಯ ಸೇವೆ, ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ದೇಶದಲ್ಲಿ ಪೂರಕ ವಾತಾವರಣವಿದೆ. ಇದಕ್ಕೆ ಕಾರಣ ದೇಶದ ವೈದ್ಯರಿಗೆ ಇರುವ ವಿಫುಲ ಅವಕಾಶಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಅಕ್ಷಯ ಕಾಲೋನಿಯಲ್ಲಿ ನಿರ್ಮಿಸಲಾದ ವಿಹಾನ ಹಾರ್ಟ್ ಆ್ಯಂಡ್ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯನ್ನು ರವಿವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಯಾವುದೇ ವೈದ್ಯರಿರಲಿ ಅವರಿಗೆ ಅವಕಾಶಗಳು ಬೇಕು. ನಮ್ಮ ವೈದ್ಯರಿಗೆ ಹಾಗೂ ವಿಜ್ಞಾನಿಗಳಿಗೆ ಸಾಕಷ್ಟು ಸಾಮರ್ಥ್ಯವಿದೆ. ಅವರ ಸಾಮರ್ಥ್ಯಕ್ಕೆ ತಕ್ಕ ಸೌಲಭ್ಯಗಳನ್ನು ಸರ್ಕಾರಗಳು ನೀಡಬೇಕು. ಹೀಗಾದಾಗ ಮಾತ್ರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದರು.
ಕೋವಿಡ್‌ನಿಂದಾಗಿ ಚೀನಾ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಪೊಲಿಯೋ ಲಸಿಕೆಯಿಂದ ಹಿಡಿದು ಟೈಫಾಯ್ಡ್ ಲಸಿಕೆಯವರೆಗೂ ನಾವು ಲಸಿಕೆಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದೆವು. ಆದರೆ, ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ತಯಾರಿಸಿ ಎರಡು ವ್ಯಾಕ್ಸಿನ್‌ಗಳನ್ನು ದೇಶದ ಜನರಿಗೆ ನೀಡಲಾಗಿದೆ. ನಮ್ಮಲ್ಲಿರುವ ಪ್ರತಿಭಾನ್ವಿತರನ್ನು ಗುರುತಿಸುವ ಕಾರ್ಯ ಮಾಡಿದಾಗ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಉದ್ಯಮಿ ಡಾ. ವಿಜಯ ಸಂಕೇಶ್ವರ ಮಾತನಾಡಿ, ಹುಬ್ಬಳ್ಳಿ ವೈದ್ಯಕೀಯ ಕ್ಷೇತ್ರದಲ್ಲಿ ಜನರಿಗೆ ಜೀವನಾಡಿಯಾಗಿ ಮಾರ್ಪಾಡಾಗಿದ್ದು, ಮೆಡಿಕಲ್ ಹಬ್ ಆಗಿದೆ. ಇಂದು ಉದ್ಘಾಟನೆಗೊಂಡಿರುವ ವಿಹಾನ ಆಸ್ಪತ್ರೆ ಸುಸಜ್ಜಿತವಾಗಿದೆ. ನೂರು ಬೆಡ್‌ಗಳನ್ನು ಹೊಂದಿದೆ. ಸಕಲರಿಗೂ ವೈದ್ಯಕೀಯ ಸೇವೆ ನೀಡಬೇಕು ಎಂಬ ಸುದುದ್ದೇಶವನ್ನು ಡಾ. ವಿಜಯಕೃಷ್ಣ ಕೋಳೂರ ಹೊಂದಿದ್ದಾರೆ. ಅವರ ಉದ್ದೇಶ ಸಾಕಾರವಾಗಲಿ ಎಂದು ಶುಭ ಕೋರಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಹೋಗುವ ಅಗತ್ಯವಿತ್ತು. ಆದರೆ, ಇಂದು ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಸ್ಪತ್ರೆಗಳು ತಲೆ ಎತ್ತಿವೆ. ಅದರಲ್ಲಿ ವಿಹಾನ ಆಸ್ಪತ್ರೆಯೂ ಒಂದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಮಾತನಾಡಿದರು. ಪ್ರಾಸ್ತಾವಿಕವಾಗಿ ಡಾ. ವಿಜಯಕೃಷ್ಣ ಕೋಳೂರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಡಾ. ಶ್ವೇತಾ ಕೋಳೂರ, ಎಸ್.ಪಿ. ಶಾಸ್ತ್ರಿ, ಸಿಂತಿಯಾ, ಡಾ. ಸಚಿನ ಹೊಸಕಟ್ಟಿ, ಧೃವ ಜಟ್ಟಿ ಇತರರು ಇದ್ದರು.

೫೪ ಸಾವಿರದಿಂದ ೧ ಲಕ್ಷದವರೆಗೆ ಮೆಡಿಕಲ್ ಸೀಟ್ ಹೆಚ್ಚಳ
ದೇಶದಲ್ಲಿಯೇ ಮೊದಲ ಬಾರಿ ಕಿಮ್ಸ್ನಲ್ಲಿ ವೈದ್ಯಕೀಯ ಕೌಶಲ್ಯ ಕೇಂದ್ರ ಆರಂಭಿಸಲಾಗಿದೆ. ಅದರಂತೆ ದೇಶದಾದ್ಯಂತ ಪ್ರಸ್ತುತ ೫೪ ಸಾವಿರ ಮೆಡಿಕಲ್ ಸೀಟ್‌ಗಳಿದ್ದು, ಅವುಗಳನ್ನು ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮುಂಬರುವ ವರ್ಷಗಳಲ್ಲಿ ಇದನ್ನು ಜಾರಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕಡಿಮೆ ದರದಲ್ಲಿ ಉತ್ತಮ ಸೇವೆ ಭರವಸೆ
ವೈದ್ಯಕೀಯ ಕ್ಷೇತ್ರ ಎಂದರೆ ಉದ್ಯಮ ಎಂಬ ಭಾವನೆ ಜನರಲ್ಲಿ ಮೂಡಿದೆ. ಆದರೆ ವಿಜಯಕೃಷ್ಣ ಅವರು ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಕಾರ್ಯ ನಿಮ್ಮಿಂದಾಗಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಶುಭ ಹಾರೈಸಿದರು.