ದೇಶ ವಿರೋಧಿ ಶಕ್ತಿ ಮಟ್ಟ ಹಾಕಿ

ಅರವಿಂದ ಬೆಲ್ಲದ
Advertisement

ಧಾರವಾಡ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ದೇಶವಿರೋಧಿ ಶಕ್ತಿಗಳಿಗೆ ಬಲ ಬಂದಂತಾಗುತದೆ. ಇಷ್ಟು ದಿನ ಮಲಗಿದ್ದ ಇವರು ಈಗ ಎದ್ದು ಗಲಾಟೆ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಸರಕಾರ ಇವರನ್ನು ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ಇವರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಈ ರೀತಿಯ ಶಕ್ತಿಯನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶ ನೀಡಬೇಕು. ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಅವರಿವರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ ಎಂದ ತಕ್ಷಣ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಶಿವಮೊಗ್ಗದಲ್ಲಿ ಆಗಿರುವುದು ಒಂದು ಪ್ರಕರಣ ಮಾತ್ರ. ಆದರೆ, ಈ ರೀತಿಯ ಶಕ್ತಿಗಳು ರಾಜ್ಯದ ಎಲ್ಲ ಕಡೆಗಳಲ್ಲಿ ಇವೆ. ಇವರನ್ನು ಮಟ್ಟ ಹಾಕಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಶಾಮನೂರ ಶಿವಶಂಕರಪ್ಪ ಅವರು ಮಾಡಿದ ಆರೋಪ ಗಂಭೀರವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಧಿಕಾರ ಅನುಭವಿಸಿದ್ದಾರೆ. ಆದರೆ, ಇಂದು ಕೆಲವೇ ಕೆಲವು ಜಾತಿಯ ಅಧಿಕಾರಿಗಳಿಗೆ ಮಾತ್ರ ಉತ್ತಮ ಪೋಸ್ಟಿಂಗ್ ಕೊಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಕಡೆಗಣನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಆದವರು ಒಂದೇ ಜನಾಂಗದವರಲ್ಲ. ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ಎಲ್ಲ ಜನಾಂಗದ ಹಿತ ಕಾಪಾಡಬೇಕು ಎಂದರು.
ಐಎನ್‌ಡಿಐಎ ಒಕ್ಕೂಟದಲ್ಲಿ ಇರುವವರೆಲ್ಲ ಸನಾತನ ಧರ್ಮದ ವಿರೋಧಿಗಳೇ ಇದ್ದಾರೆ. ಸನಾತನ ಧರ್ಮ ವಿಚಾರ, ಉದ್ದೇಶ ಸೇರಿದಂತೆ ಯಾವುದೇ ಗಂಧ ಅವರಿಗಿಲ್ಲ. ಈ ಸಮಾಜವನ್ನು ನಾಶ ಮಾಡಬೇಕು ಎನ್ನುವುದೇ ಇವರ ಉದ್ದೇಶವಾಗಿದೆ. ಕಾರಣ ಇವರು ಕ್ರಿಶ್ಚಿಯನ್ ಮಿಷನರಿ, ಸಂಘಟನೆಯ ಪ್ರಭಾವದಿಂದ ಬಂದವರಾಗಿದ್ದಾರೆ. ಅದಕ್ಕಾಗಿ ಪೇಜಾವರ ಶ್ರೀಗಳು ಸರಿಯಾಗಿಯೇ ಹೇಳಿಕೆ ನೀಡಿದ್ದಾರೆ ಎಂದು ಶ್ರೀಗಳ ಹೇಳಿಕೆಯನ್ನು ಸಮರ್ಥಿಸಿಕೊಂಡರು.