ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ನಿರ್ಲಕ್ಷ್ಯ: 15ರಂದು ಪ್ರತಿಭಟನೆ

ಖೇಲ್ ಕರ್ನಾಟಕ
Advertisement

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಶಕಗಳಿಂದಲೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ನಡೆಸದೆ ನಿರ್ಲಕ್ಷಿಸಲಾಗುತ್ತಿದ್ದು, ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಇದೇ ೧೫ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ದೈಹಿಕ ಶಿಕ್ಷಕರ ಒಕ್ಕೂಟ ‘ಖೇಲ್ ಕರ್ನಾಟಕ’ ಸಂಘಟನೆ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ‘ಖೇಲ್ ಕರ್ನಾಟಕ’ ಸಂಘಟನೆ ರಾಜ್ಯಾಧ್ಯಕ್ಷ ಡಾ.ಸುಕ್ಷಾಂತ್ ಪಾಟೀಲ್, ಪ್ರಾಥಮಿಕ ಹಂತದಿಂದ ವಿಶ್ವ ವಿದ್ಯಾಲಯ ಮಟ್ಟದವರೆಗೂ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಮಾರು ಇಪ್ಪತ್ತು ಸಾವಿರ ವಿವಿಧ ಹುದ್ದೆಗಳು ಖಾಲಿ ಇದ್ದರೂ ಸರ್ಕಾರಗಳು ಸಕಾಲಕ್ಕೆ ಭರ್ತಿ ಮಾಡುತ್ತಿಲ್ಲ. ಇದರಿಂದ ಅರ್ಹತೆ ಹೊಂದಿದ ದೈಹಿಕ ಶಿಕ್ಷಕರ ಆಕಾಂಕ್ಷಿತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದರು.
ಇದೇ ವೇಳೆ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ.ವೆಂಕಟೇಶ್, ದೈಹಿಕ ಶಿಕ್ಷಣದಲ್ಲಿ ಅನೇಕರು ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ನೌಕರಿಗಾಗಿ ದಶಕಗಳ ಕಾಲ ಕಾಯುತ್ತ ಬಂದಿದ್ದೇ ಆಯಿತು. ಆದರೆ, ಇಲ್ಲಿಯವರೆಗೂ ನೇಮಕಾತಿ ಆಗಲಿಲ್ಲ. ಇದರಿಂದ ಬೇಸತ್ತ ದೈಹಿಕ ಶಿಕ್ಷಕರು ಗುರುವಾರದಂದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತದೆ ಎಂದರು.
ನಾಳಿನ ಹೋರಾಟದಲ್ಲಿ ಸುಮಾರು ಎರಡು ಸಾವಿರ ಅರ್ಹ ದೈಹಿಕ ಶಿಕ್ಷಕರು ಜಮಾಯಿಸಲಿದ್ದು, ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು. ಗೀತಾ ಗುಡ್ಡೆಮನಿ, ಡಾ.ರವೀಂದ್ರ ಬಿ.ಸಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.